
ಬೆಂಗಳೂರು: WWE ಸೂಪರ್ ಸ್ಟಾರ್ ರೆಸ್ಲರ್ ಜಾನ್ ಸಿನಾ ತಮ್ಮ ವೃತ್ತಿಪರ ರೆಸ್ಲಿಂಗ್‌ಗೆ ಇಂದು ಅಧಿಕೃತವಾಗಿ ವಿದಾಯ ಘೋಷಿಸಿದ್ದಾರೆ. ಶನಿವಾರ ತಡರಾತ್ರಿ, ಭಾರತೀಯ ಕಾಲಮಾನ ಇಂದು ಮುಂಜಾನೆ ನಡೆದ ಮೈನ್ ಇವೆಂಟ್‌ನಲ್ಲಿ ಜಾನ್ ಸಿನಾ ಕೊನೆಯ ಕುಸ್ತಿ ಪಂದ್ಯವನ್ನಾಡಿದರು. ಶನಿವಾರ ಜಾನ್ ಸಿನಾ, ಪ್ರಬಲ ಪ್ರತಿಸ್ಫರ್ಧಿ ಗುಂಟರ್ ವಿರುದ್ದ ಸೆಣಸಾಡಿದರು. ವೃತ್ತಿ ಜೀವನದ ಕೊನೆಯ ಪಂದ್ಯದಲ್ಲಿ ಜಾನ್ ಸಿನಾ ಸೋಲೊಪ್ಪಿಕೊಳ್ಳುವ ಮೂಲಕ ನಿರಾಸೆ ಅನುಭವಿಸಿದರು. ಜಾನ್ ಸಿನಾ ಸೋಲುತ್ತಿದ್ದಂತೆಯೇ ಅವರ ಅಭಿಮಾನಿಗಳು ಅಲ್ಲೇ ಕಣ್ಣೀರಿಟ್ಟರು.
ಕಳೆದ 23 ವರ್ಷಗಳ ರೆಸ್ಲಿಂಗ್ ವೃತ್ತಿ ಬದುಕಿನಲ್ಲಿ ಜಾನ್ ಸಿನಾ ಹಲವು ಘಟಾನುಘಟಿ ಕುಸ್ತಿಪಟುಗಳಿಗೆ ಮಣ್ಣು ಮುಕ್ಕಿಸಿ ಗೆಲುವು ಸಾಧಿಸುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು. ಆದರೆ ವೃತ್ತಿಬದುಕಿನ ಕೊನೆಯ ಪಂದ್ಯವನ್ನು ಜಾನ್ ಸಿನಾ ಗೆಲ್ಲದೇ ಹೋದದ್ದು ಮಾತ್ರ ನಿಜಕ್ಕೂ ವಿಪರ್ಯಾಸವೇ ಸರಿ. ಒಂದು ಹಂತದಲ್ಲಿ ಜಾನ್ ಸಿನಾ ಅವರಿಗೆ ಮನೆಯ ಬಾಡಿಗೆ ಕಟ್ಟಲು ಸಹ ಹಣವಿರಲಿಲ್ಲ. ಆದರೆ ಇದೀಗ ಜಾನ್ ಸಿನಾ, ಬರೀ ಕುಸ್ತಿಯಿಂದ ಮಾತ್ರವಲ್ಲದೇ ಹಾಲಿವುಡ್ ಸಿನಿಮಾಗಳಲ್ಲೂ ನಟಿಸುವ ಮೂಲಕ ಕೋಟ್ಯಾಂತರ ರುಪಾಯಿ ಆಸ್ತಿಯ ಒಡೆಯರಾಗಿ ಬೆಳೆದು ನಿಂತಿದ್ದಾರೆ.
ಜಾನ್ ಸಿನಾ ತಮ್ಮ WWE ವೃತ್ತಿಜೀವನವನ್ನು 2002ರಲ್ಲಿ ಆರಂಭಿಸಿದರು. ಕರ್ಟ್ ಆಂಗಲ್ ಅವರ ಎದುರು ಮೊದಲ ಬಾರಿಗೆ ಜಾನ್ ಸಿನಾ ಸ್ಪರ್ಧಿಸಿದ್ದರು. ಇದರ ಬೆನ್ನಲ್ಲೇ ಮೆಕ್‌ಮೋಹನ್, ಸಿನಾ ಭವಿಷ್ಯದ ಸೂಪರ್ ಸ್ಟಾರ್ ಆಗಬಹುದು ಎಂದು ತುಂಬಾ ಆರಂಭದಿಂದಲೇ ಗುರುತಿಸಿದರು. ಇದಾದ ಜಾನ್ ಸಿನಾ ತುಂಬಾ ಕಡಿಮೆ ಸಮಯದಲ್ಲೇ ಅತ್ಯಂತ ಜನಪ್ರಿಯ ರೆಸ್ಲರ್ ಆಗಿ ಬೆಳೆದು ನಿಂತರು. ಈಗ ಜಾನ್ ಸಿನಾಗೆ ಜಗತ್ತಿನಾದ್ಯಂತ ಅಪಾರ ಅಭಿಮಾನಿಗಳಿದ್ದಾರೆ.
ಇನ್ನು ದುಡಿಮೆಯ ವಿಚಾರದಲ್ಲೂ ಜಾನ್ ಸಿನಾ ಹಿಂದೆ ಬಿದ್ದಿಲ್ಲ. ವೃತ್ತಿಪರ ರೆಸ್ಲಿಂಗ್, ಜಾಹಿರಾತು, ಮರ್ಚೆಂಡೈಸ್, ಸಿನಿಮಾ ಹಾಗೂ ಟಿವಿ ಶೋಗಳ ಮೂಲಕ ಜಾನ್ ಸಿನಾ ಕೋಟ್ಯಾಂತರ ರುಪಾಯಿ ಸಂಪಾದನೆ ಮಾಡಿದ್ದಾರೆ. Celebrity Net Worth ವರದಿಯ ಪ್ರಕಾರ, ಜಾನ್ ಸಿನಾ ಅವರ ಬಳಿ 80 ಮಿಲಿಯನ್ ಡಾಲರ್(ಸುಮಾರು ಭಾರತೀಯ ರುಪಾಯಿ ಲೆಕ್ಕಾಚಾರದಲ್ಲಿ 664 ಕೋಟಿ ರುಪಾಯಿ). ಇನ್ನು ಜಾನ್ ಸಿನಾ WWE ಮೂಲಕ ಪ್ರತಿ ವರ್ಷ 12 ಮಿಲಿಯನ್ ಡಾಲರ್ ಸಂಬಳ ಪಡೆಯುತ್ತಿದ್ದರು. ಇನ್ನು ಪ್ರಮುಖ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದಕ್ಕೆ ಜಾನ್ ಸಿನಾ ಅವರಿಗೆ ರಾಯಲ್ಟಿ ರೂಪದಲ್ಲಿ 500000 ಡಾಲರ್ ಸಿಗುತ್ತಿತ್ತು ಎಂದು ವರದಿಯಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.