
ಇಟಲಿ(ಅ. 10): ಅಂತಾರಾಷ್ಟ್ರೀಯ ಶೂಟಿಂಗ್ ಕ್ರೀಡಾ ಒಕ್ಕೂಟದ(ಐಎಸ್'ಎಸ್'ಎಫ್) ಚಾಂಪಿಯನ್ಸ್ ಟ್ರೋಫಿಯನ್ನು ಭಾರತದ ಜಿತು ರಾಯ್ ಗೆದ್ದುಕೊಂಡಿದ್ದಾರೆ. ಇಲ್ಲಿಯ ಬೊಲೋಗ್ನಾ ನಗರದಲ್ಲಿ ನಿನ್ನೆ ನಡೆದ 10 ಮೀಟರ್ ಏರ್ ಪಿಸ್ತೂಲ್ ಫೈನಲ್'ನಲ್ಲಿ ಜಿತು ರಾಯ್ ಅವರು ಸರ್ಬಿಯಾದ ದಾಮಿರ್ ಮಿಕೇಚ್ ಅವರನ್ನು 29.6-28.3 ರಿಂದ ಸೋಲಿಸಿ ಚಾಂಪಿಯನ್'ಶಿಪ್ ಜಯಿಸಿದ್ದಾರೆ. ಇದರೊಂದಿಗೆ 2 ಸಾವಿರ ಯೂರೋ ಮೊತ್ತದಷ್ಟು ಬಹುಮಾನ ಭಾರತೀಯ ಶೂಟರ್'ನ ಪಾಲಾಯಿತು. ಇನ್ನು, 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ರಷ್ಯಾದ ಸರ್ಗೇ ಕಾಮೆನ್'ಸ್ಕೀ ಚಾಂಪಿಯನ್ ಎನಿಸಿದರು.
ಏನಿದು ಚಾಂಪಿಯನ್ಸ್ ಟ್ರೋಫಿ?
ಇಲ್ಲಿ ನಡೆದ ಶೂಟಿಂಗ್ ವಿಶ್ವಕಪ್'ನಲ್ಲಿ ವಿವಿಧ ವಿಭಾಗದಲ್ಲಿ ಫೈನಲ್ ಹಂತದವರೆಗೂ ಏರಿದ ಸ್ಪರ್ಧಿಗಳು ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯುತ್ತಾರೆ. ಆದರೆ, 10ಮೀಟರ್ ಏರ್ ರೈಫಲ್ ಮತ್ತು 10 ಮೀಟರ್ ಏರ್ ಪಿಸ್ತೂಲ್ ಎಂಬ ಎರಡು ವಿಭಾಗದ ಆಪ್ಷನ್ ಅಷ್ಟೇ ಇರುತ್ತದೆ. ಯಾರು ಯಾವ ವಿಭಾಗವನ್ನು ಬೇಕಾದರೂ ಆಯ್ದುಕೊಳ್ಳಬಹುದು.
ವಿಭಿನ್ನ ಫಾರ್ಮಾಟ್:
ಚಾಂಪಿಯನ್ಸ್ ಟ್ರೋಫಿ ಶೂಟಿಂಗ್ ಸ್ಪರ್ಧೆಯ ಸ್ವರೂಪ ಸ್ವಲ್ಪ ವಿಭಿನ್ನವಾಗಿರುತ್ತದೆ. ಎಲ್ಲ ಸ್ಪರ್ಧಿಗಳಿಗೆ ನಾಲ್ಕು ಶಾಟ್'ಗಳನ್ನು ಹೊಡೆಯಲು ಅವಕಾಶ ನೀಡಲಾಗುತ್ತದೆ. ನಾಲ್ಕು ಶಾಟ್'ನ ರೌಂಡ್ ಬಳಿಕ ಅತ್ಯಂತ ಕಡಿಮೆ ಅಂಕ ಗಳಿಸಿದ ಒಬ್ಬ ಸ್ಪರ್ಧಿ ಎಲಿಮಿನೇಟ್ ಆಗುತ್ತಾರೆ. ಆ ನಂತರ ಪ್ರತಿಯೊಂದು ಶಾಟ್'ಗೂ ಒಬ್ಬೊಬ್ಬ ಸ್ಪರ್ಧಿ ಎಲಿಮಿನೇಟ್ ಆಗುತ್ತಾ ಹೋಗುತ್ತಾರೆ. ಕೊನೆಗೆ ಉಳಿಯುವ ಇಬ್ಬರು ಸ್ಪರ್ಧಿಗಳು ಫೈನಲ್'ಗೆ ಅರ್ಹತೆ ಪಡೆಯುತ್ತಾರೆ. ಫೈನಲ್ ಸ್ಪರ್ಧಿಗಳ ನಡುವೆ ಮೂರು ಶಾಟ್'ಗಳ ಸ್ಪರ್ಧೆ ಇದ್ದು, ಅದರಲ್ಲಿ ಹೆಚ್ಚು ಸ್ಕೋರ್ ಮಾಡುವವರೇ ವಿಜೇತರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.