ಹರಿಯಾಣ ಮಣಿಸಿದ ಜಾರ್ಖಂಡ್ ಉಪಾಂತ್ಯಕ್ಕೆ

By Suvarna Web DeskFirst Published Dec 26, 2016, 4:25 PM IST
Highlights

ಯುವ ಆರಂಭಿಕ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಜಾರ್ಖಂಡ್ ತಂಡ, ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಹರಿಯಾಣ ತಂಡವನ್ನು 5 ವಿಕೆಟ್‌ಗಳ ಅಂತರದಲ್ಲಿ ಮಣಿಸಿತು. ಇದರೊಂದಿಗೆ ಜಾರ್ಖಂಡ್ ರಣಜಿ ಇತಿಹಾಸದಲ್ಲಿ ಮೊದಲ ಬಾರಿಗೆ ಉಪಾಂತ್ಯ ಪ್ರವೇಶಿಸಿದ ಸಾಧನೆ ಮಾಡಿದೆ.

ವಡೋದರಾ (ಡಿ. 26): ಯುವ ಆರಂಭಿಕ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಜಾರ್ಖಂಡ್ ತಂಡ, ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಹರಿಯಾಣ ತಂಡವನ್ನು 5 ವಿಕೆಟ್‌ಗಳ ಅಂತರದಲ್ಲಿ ಮಣಿಸಿತು. ಇದರೊಂದಿಗೆ ಜಾರ್ಖಂಡ್ ರಣಜಿ ಇತಿಹಾಸದಲ್ಲಿ ಮೊದಲ ಬಾರಿಗೆ ಉಪಾಂತ್ಯ ಪ್ರವೇಶಿಸಿದ ಸಾಧನೆ ಮಾಡಿದೆ.

ಇಲ್ಲಿನ ಮೋತಿ ಬಾಗ್ ಕ್ರೀಡಾಂಗಣದಲ್ಲಿ ನಾಲ್ಕನೇ ದಿನವಾದ ಸೋಮವಾರ 2 ವಿಕೆಟ್‌ಗೆ 146 ರನ್‌ಗಳಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಹರಿಯಾಣ ತಂಡ 262 ರನ್‌ಗಳಿಗೆ ಆಲೌಟ್ ಆಯಿತು. 176 ರನ್‌ಗಳ ಅಲ್ಪ ಗುರಿಯನ್ನು ಜಾರ್ಖಂಡ್ 5  ವಿಕೆಟ್‌ಗೆ178 ರನ್‌ಗಳಿಸಿ ಗೆಲುವಿನ ನಗೆ ಬೀರಿತು.

ಮೊದಲ ಇನಿಂಗ್ಸ್‌ನಲ್ಲಿ ವಿರಾಟ್ ಸಿಂಗ್ ಶತಕದ ನೆರವಿನಿಂದ ಉತ್ತಮ ಮುನ್ನಡೆ ಕಾಯ್ದುಕೊಂಡಿದ್ದ ಜಾರ್ಖಂಡ್ ತಂಡಕ್ಕೆ ಎರಡನೇ ಇನಿಂಗ್ಸ್‌ನಲ್ಲಿ ಉತ್ತಮ ಆರಂಭ ದೊರೆಯಿತು. ಆರಂಭಿಕ ಆನಂದ್ ಸಿಂಗ್ (27) ಮತ್ತು ಇಶಾನ್ ಕಿಶನ್ (86) ರನ್‌ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಸಿಂಗ್ (21) ಸುಮಿತ್ ಕುಮಾರ್ (18)ರನ್‌ಗಳಿಸಿ ತಂಡವನ್ನು ಗೆಲುವಿನ ಹತ್ತಿರ ಕೊಂಡೊಯ್ದರು. ಕುಶಾಲ್ ಸಿಂಗ್ 7 ಎಸೆತದಲ್ಲಿ 1 ಬೌಂಡರಿ 1 ಸಿಕ್ಸರ್ ಸಹಿತ 12 ರನ್‌ಗಳಿಸಿ ಗಮನಸೆಳೆದರು.

ಇದಕ್ಕೂ ಮುನ್ನ 2 ವಿಕೆಟ್‌ಗೆ ೧೪೬ರನ್‌ಗಳಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ಹರಿಯಾಣ ತಂಡಕ್ಕೆ ಬಿಷ್ಣೋಯಿ (52) ಶಿವಂ ಚೌಹಾಣ್ (43) ರನ್‌ಗಳಿಸಿ ಔಟ್ ಆದರು. ನಂತರ ಮಧ್ಯಮ ಕ್ರಮಾಂಕದಲ್ಲಿ ಪಲಿವಾಲ್ (2), ರೋಹಿತ್ ಶರ್ಮ ಮತ್ತು ಅಮಿತ್ ಮಿಶ್ರಾ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದ್ದು ಹರಿಯಾಣದ ಹಿನ್ನಡೆಗೆ ಕಾರಣವಾಯಿತು. ಕೊನೆಯಲ್ಲಿ ಪಾಹಲ್ (29) ಹರ್ಷಲ್ ಪಟೇಲ್ (25)ರನ್‌ಗಳಿಸಿ ಗಮನಸೆಳೆದರಾದರೂ ದೊಡ್ಡ ಮೊತ್ತ ದಾಖಲಿಸುವಲ್ಲಿ ವಿಫಲರಾದರು. ಜಾರ್ಖಂಡ್ ಪರ ಶಹಬಾಜ್ ನದೀಮ್ 4, ಸಮರ್ ಖಾದ್ರಿ 3 ವಿಕೆಟ್ ಪಡೆದರು.

 

  

 

 

click me!