ಕೊರಿಯಾ ಓಪನ್ ಬ್ಯಾಡ್ಮಿಂಟನ್: ಜಯರಾಂ, ಪ್ರಣೀತ್'ಗೆ ಮುನ್ನಡೆ

By naveena -First Published Sep 28, 2016, 3:59 PM IST
Highlights

ಸಿಯೋಲ್‌(ಸೆ.28): ಇತ್ತೀಚೆಷ್ಟೇ ಮುಕ್ತಾಯ ಕಂಡ ಜಪಾನ್‌ ಓಪನ್‌ ಸೂಪರ್‌ ಸಿರೀಸ್‌ ಪಂದ್ಯಾವಳಿಯ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲನುಭವಿಸಿದ್ದ ಭಾರತದ ಯುವ ಬ್ಯಾಡ್ಮಿಂಟನ್‌ ಆಟಗಾರ ಕೆ. ಶ್ರೀಕಾಂತ್‌ ಕೊರಿಯಾ ಓಪನ್‌ ಸೂಪರ್‌ಸಿರೀಸ್‌ ಪಂದ್ಯಾವಳಿಯಲ್ಲಿ ಮೊದಲ ಸುತ್ತಿನಲ್ಲೇ ಸೋಲಿನ ಆಘಾತ ಅನುಭವಿಸಿದರು.

ಬುಧವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಆರಂಭಿಕ ಸುತ್ತಿನ ಪಂದ್ಯದಲ್ಲಿ ಎಂಟನೇ ಶ್ರೇಯಾಂಕಿತ ಶ್ರೀಕಾಂತ್‌ ಮೊದಲ ಗೇಮ್‌ನಲ್ಲಿ ಸೋಲನುಭವಿಸಿದರೂ, ಎರಡನೇ ಗೇಮ್‌ನಲ್ಲಿ ಮ್ಯಾಚ್‌ ಪಾಯಿಂಟ್‌ ಪಡೆದು ಪಂದ್ಯದಲ್ಲಿ ಹಿಡಿತ ಸಾಧಿಸಿದ ಹೊರತಾಗಿಯೂ ಅಂತಿಮವಾಗಿ ಹಾಂಕಾಂಗ್‌ ಆಟಗಾರ ವೊಂಗ್‌ ವಿಂಗ್‌ ಕೀ ವಿನ್ಸೆಂಟ್‌ ವಿರುದ್ಧ 10-21, 24-22, 17-21ರ ಮೂರು ಗೇಮ್‌ಗಳ ಆಟದಲ್ಲಿ ಸೋಲನುಭವಿಸಿದರು. 55 ನಿಮಿಷಗಳ ಕಾಲ ನಡೆದ ಜಿದ್ದಾಜಿದ್ದಿನ ಸೆಣಸಾಟದಲ್ಲಿ ಹಾಂಕಾಂಗ್‌ ಆಟಗಾರ ಆಕ್ರಮಣಕಾರಿ ಆಟವಾಡಿ ಶ್ರೀಕಾಂತ್‌ ವಿರುದ್ಧ ಮೇಲುಗೈ ಮೆರೆದರು.

ಇದಕ್ಕೂ ಮುನ್ನ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಇನ್ನೊಂದು ಪಂದ್ಯದಲ್ಲಿ ಎಚ್‌.ಎಸ್‌. ಪ್ರಣಯ್‌ ಕೂಡ ಪರಾಭವಗೊಂಡರು. ವಿಶ್ವದ 31ನೇ ಶ್ರೇಯಾಂಕಿತ ಆಟಗಾರ ಪ್ರಣಯ್‌, ಚೈನೀಸ್‌ ತೈಪೆಯ ವಾಂಗ್‌ ಟ್ಸು ವೀ ವಿರುದ್ಧದ 57 ನಿಮಿಷಗಳ ಸುದೀರ್ಘ ಕಾಲದ ಕಾದಾಟದಲ್ಲಿ 23-21, 17-21, 15-21ರಿಂದ ಹಿನ್ನಡೆ ಅನುಭವಿಸಿದರು.

ಆದರೆ, ಅಜಯ್‌ ಜಯರಾಂ ಮತ್ತು ಬಿ. ಸಾಯಿಪ್ರಣೀತ್‌ ದ್ವಿತೀಯ ಸುತ್ತಿಗೆ ಧಾವಿಸಿದರು. ಮೊದಲ ಸುತ್ತಿನ ಪಂದ್ಯದಲ್ಲಿ ಬುಧವಾರ 29ನೇ ವಯಸ್ಸಿಗೆ ಕಾಲಿರಿಸಿದ ಜಯರಾಂ ಕೊರಿಯಾದ ಜಿಯೊನ್‌ ಹ್ಯೊಕ್‌ ವಿರುದ್ಧ 23-21, 21-18ರಿಂದ ಗೆದ್ದರೆ, ಸಾಯಿ ಪ್ರಣೀತ್‌ ಚೈನೀಸ್‌ ತೈಪೆಯ ಹ್ಸು ಜೆನ್‌-ಹಾವೊ ವಿರುದ್ಧ 21-13, 12-21, 21-15ರಿಂದ ಗೆಲುವು ಪಡೆದರು.

click me!