ವಾಸೀಂ ದಾಳಿಗೆ ತತ್ತರಿಸಿದ ವಿಂಡೀಸ್

By Internet DeskFirst Published Sep 28, 2016, 3:22 PM IST
Highlights

ಅಬುಧಾಬಿ(ಸೆ.28): ಯುವ ವೇಗಿ ಇಮಾದ್‌ ವಾಸೀಂ (21ಕ್ಕೆ 3) ಅವರ ಮಾರಕ ದಾಳಿಗೆ ತತ್ತರಿಸಿದ ಪಾಕಿಸ್ತಾನ ತಂಡ, 3 ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ವೆಸ್ಟ್‌ಇಂಡೀಸ್‌ ಎದುರು 8 ವಿಕೆಟ್‌ಗಳ ಅಂತರದಲ್ಲಿ ಗೆಲುವು ಸಾಧಿಸಿತಲ್ಲದೆ, ಇದರೊಂದಿಗೆ ಸರ್ಫರಾಜ್‌ ಅಹ್ಮದ್‌ ನಾಯಕತ್ವದ ಪಾಕಿಸ್ತಾನ 3-0ಯಿಂದ ಸರಣಿಯನ್ನು ಕ್ಲೀನ್‌ಸ್ವೀಪ್‌ ಮಾಡಿತು.

ಇಲ್ಲಿನ ಶೇಕ್‌ ಜಾಯೆದ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡಿದ ವೆಸ್ಟ್‌ಇಂಡೀಸ್‌ ತಂಡ, ನಿಗದಿತ ಓವರ್‌ಗಳಲ್ಲಿ 5 ವಿಕೆಟ್‌ಗೆ 103 ರನ್‌ ಗಳಿಸಿತು. ನಂತರ ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ 15.1 ಓವರ್‌ಗಳಲ್ಲಿ 2 ವಿಕೆಟ್‌ಗೆ 108 ರನ್‌ ಗಳಿಸಿತು.

ಸಾಧಾರಣ ಮೊತ್ತ ಬೆನ್ನಟ್ಟಿದ ಪಾಕಿಸ್ತಾನ ತಂಡ ಆರಂಭದಲ್ಲಿ ತಡಬಡಾಯಿಸಿತು. ಆದರೆ ನಂತರ ಮುರಿಯದ 3ನೇ ವಿಕೆಟ್‌ಗೆ ಜೊತೆಯಾದ ಶೋಯೆಬ್‌ ಮಲಿಕ್‌ (43) ಮತ್ತು ಬಾಬರ್‌ ಅಜಮ್‌ (27) ರನ್‌ ಗಳಿಸಿ ತಂಡಕ್ಕೆ ಸುಲಭ ಜಯ ತಂದುಕೊಟ್ಟರು.

ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ವಿಂಡೀಸ್‌ ತಂಡ ಆರಂಭದಲ್ಲಿ ಬೇಗನೇ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಮಧ್ಯಮ ಕ್ರಮಾಂಕದಲ್ಲಿ ಮರ್ಲಾನ್‌ ಸ್ಯಾಮುಯೆಲ್ಸ್‌ (ಅಜೇಯ 42) ಒಬ್ಬರನ್ನು ಬಿಟ್ಟರೆ ಮಿಕ್ಕವರಿಂದ ಪ್ರಬಲ ಆಟ ವ್ಯಕ್ತವಾಗಲಿಲ್ಲ. ಆರಂಭಿಕ ಚಾರ್ಲ್ಸ್ (5), ಫ್ಲೇಚರ್‌ (9), ವಾಲ್ಟನ್‌ (0), ಡ್ವೇನ್‌ ಬ್ರಾವೋ (11), ಪೂರನ್‌ (16) ಹಾಗೂ ಪೊಲಾರ್ಡ್‌ 16 ರನ್‌ಗಳಿಗೆ ನಿರುತ್ತರರಾದರು. ಪಾಕ್‌ ಪರ ವಾಸೀಂ 3, ಮೊಹ್ಮದ್‌ ನವಾಜ್‌ 1 ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರ್‌

ವೆಸ್ಟ್‌ ಇಂಡೀಸ್‌: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 103

(ಸ್ಯಾಮುಯೆಲ್ಸ್‌ ಅಜೇಯ 42, ಪೂರನ್‌ 16, ವಾಸೀಂ 21ಕ್ಕೆ 3)

ಪಾಕಿಸ್ತಾನ: 15.1 ಓವರ್‌ಗಳಲ್ಲಿ 2 ವಿಕೆಟ್‌ಗೆ 108

(ಮಲಿಕ್‌ 43*, ಬಾಬರ್‌ 27*, ಕೆಸ್ರಿಕ್‌ 15ಕ್ಕೆ 2)

ಫಲಿತಾಂಶ: ಪಾಕಿಸ್ತಾನಕ್ಕೆ 8 ವಿಕೆಟ್‌ ಗೆಲುವು

ಪಂದ್ಯಶ್ರೇಷ್ಠ: ಇಮಾದ್‌ ವಾಸೀಂ

click me!