Commonwealth Games ದೇಶವನ್ನು ಮತ್ತೊಮ್ಮೆ ಪ್ರತಿನಿಧಿಸದಿರುವುದಕ್ಕೆ ಬೇಸರವಾಗುತ್ತಿದೆ: ನೀರಜ್‌ ಚೋಪ್ರಾ

By Naveen Kodase  |  First Published Jul 27, 2022, 2:07 PM IST

ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಿಂದ ನೀರಜ್ ಚೋಪ್ರಾ ಔಟ್
ಗಾಯದ ಸಮಸ್ಯೆಯಿಂದ ಕಾಮನ್‌ವೆಲ್ತ್ ಕೂಟದಿಂದ ಹೊರಬಿದ್ದ ನೀರಜ್
ಭಾರತದ ಧ್ವಜಧಾರಿಯಾಗದಿರುವುದಕ್ಕೆ ಬೇಸರವಾಗುತ್ತಿದೆ ಎಂದ ಜಾವೆಲಿನ್ ಪಟು
 


ನವದೆಹಲಿ(ಜು.27): ಟೋಕಿಯೋ ಒಲಿಂಪಿಕ್ಸ್‌ ಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ, ಇತ್ತೀಚೆಗಷ್ಟೇ ಮುಕ್ತಾಯವಾದ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿ ಇತಿಹಾಸ ನಿರ್ಮಿಸಿದ್ದರು. ಇದೇ ಜುಲೈ 28ರಿಂದ ಆರಂಭವಾಗಲಿರುವ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ತಮ್ಮ ಚಾಂಪಿಯನ್‌ ಪಟ್ಟ ಉಳಿಸಿಕೊಳ್ಳಲು ಎದುರು ನೋಡುತ್ತಿದ್ದ ನೀರಜ್ ಚೋಪ್ರಾ, ಗಾಯದ ಸಮಸ್ಯೆಯಿಂದಾಗಿ ಈ ಕ್ರೀಡಾಕೂಟದಿಂದ ಹಿಂದೆ ಸರಿದಿದ್ದಾರೆ. ಇದೀಗ ಮೊದಲ ಬಾರಿಗೆ ನೀರಜ್ ಚೋಪ್ರಾ, ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪಾಲ್ಗೊಳ್ಳದೇ ಇರುವುದರ ಕುರಿತಂತೆ ತುಟಿಬಿಚ್ಚಿದ್ದಾರೆ.

ಮಂಗಳವಾರವಷ್ಟೇ ನೀರಜ್ ಚೋಪ್ರಾ ತೊಡೆ ಸಂದು ಗಾಯದ ಸಮಸ್ಯೆಯಿಂದಾಗಿ ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಹೊರಬಿದ್ದಿದ್ದಾರೆ ಎನ್ನುವ ಮಾಹಿತಿ ಬೆಳಕಿಗೆ ಬಂದಿತ್ತು. ಇದೀಗ ನೀರಜ್ ಚೋಪ್ರಾ, ದೇಶವನ್ನು ಈ ಬಾರಿ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪ್ರತಿನಿಧಿಸದೇ ಇರುವುದಕ್ಕೆ ಹಾಗೂ ಧ್ವಜಧಾರಿಯಾಗದೇ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. 2018ರಲ್ಲಿ ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್‌ ಗೇಮ್ಸ್‌ ಕ್ರೀಡಾಕೂಟದಲ್ಲಿ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಜಯಿಸಿದ್ದರು.

Tap to resize

Latest Videos

ಎಲ್ಲರಿಗೂ ನಮಸ್ಕಾರ, ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಈ ಬಾರಿ ನಾನು ದೇಶವನ್ನು ಪ್ರತಿನಿಧಿಸಲು ಸಾಧ್ಯವಾಗುತ್ತಿಲ್ಲ ಎಂದು ನಿಜಕ್ಕೂ ಬೇಸರವಾಗುತ್ತಿದೆ. ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ಫೈನಲ್‌ನ ನಾಲ್ಕನೇ ಎಸೆತದ ಬಳಿಕ ನನಗೆ ತೊಡೆ ಸಂದು ನೋವು ಕಾಣಿಸಿಕೊಂಡಿತು. ಹೀಗಾಗಿ ಅಹಿತಕರವಾದ ಅನುಭವವಾಯಿತು. ಅಮೆರಿಕದಲ್ಲಿರುವ ವೈದ್ಯರು ಸಾಕಷ್ಟು ತಪಾಸಣೆ ನಡೆಸಿದ ಬಳಿಕ ಅವರು  ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಿ ಹಾಗೂ ಕೆಲವಾರಗಳ ಕಾಲ ವಿಶ್ರಾಂತಿ ಪಡೆಯಿರಿ ಎನ್ನುವ ಸಲಹೆ ನೀಡಿದ್ದಾರೆ ಎಂದು ನೀರಜ್ ಚೋಪ್ರಾ ಟ್ವೀಟ್‌ ಮೂಲಕ ತಿಳಿಸಿದ್ದಾರೆ.

pic.twitter.com/natzPr720y

— Neeraj Chopra (@Neeraj_chopra1)

ನಾನು ಈ ವಿಚಾರವನ್ನು ಭಾರತೀಯ ಒಲಿಂಪಿಕ್ಸ್ ಸಂಸ್ಥೆ, ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾ, ಭಾರತೀಯ ಕ್ರೀಡಾ ಪ್ರಾಧಿಕಾರದ ಜತೆ ಚರ್ಚೆ ನಡೆಸಿ, ಭವಿಷ್ಯತ್ತಿನ ಗುರಿಗಳನ್ನು ಗಮನದಲ್ಲಿಟ್ಟುಕೊಂಡು, ಮುನ್ನೆಚ್ಚರಿಕಾ ಕ್ರಮವಾಗಿ ನಾವು ಕಾಮನ್‌ವೆಲ್ತ್‌ ಗೇಮ್ಸ್‌ನಿಂದ ಹಿಂದೆ ಸರಿಯುವ ತೀರ್ಮಾನ ತೆಗೆದುಕೊಂಡಿದ್ದೇವೆ. ನಾನು ಈ ಬಾರಿ ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳಲು ಸಾಧ್ಯವಾಗದೇ ಇರುವುದಕ್ಕೆ ಹಾಗೂ ನನ್ನ ದೇಶವನ್ನು ಪ್ರತಿನಿಧಿಸಲು ಸಾಧ್ಯವಾಗದೇ ಇರುವುದಕ್ಕೆ ಬೇಸರವಾಗುತ್ತಿದೆ. ಇದಕ್ಕಿಂತ ಹೆಚ್ಚಾಗಿ ಕಾಮನ್‌ವೆಲ್ತ್ ಗೇಮ್ಸ್‌ನ ಉದ್ಘಾಟನಾ ಸಮಾರಂಭದ ವೇಳೆ ಭಾರತದ ಧ್ವಜಧಾರಿಯಾಗುವ ಅವಕಾಶದಿಂದ ವಂಚಿರಾಗಿರುವುದಕ್ಕೆ ತೀವ್ರ ಬೇಸರವಾಗುತ್ತಿದೆ. ಮುಂಬರುವ ದಿನಗಳಲ್ಲಿಯಾದರೂ ಈ ಗೌರವನ್ನು ಪಡೆಯಲು ಎದುರು ನೋಡುತ್ತೇನೆ ಎಂದು ನೀರಜ್ ಚೋಪ್ರಾ ಬರೆದುಕೊಂಡಿದ್ದಾರೆ.

Breaking ಕಾಮನ್‌ವೆಲ್ತ್‌ ಗೇಮ್ಸ್‌ಗೂ ಮುನ್ನ ಭಾರತಕ್ಕೆ ಶಾಕ್, ನೀರಜ್‌ ಚೋಪ್ರಾಗೆ ಗಾಯ..!

ಸದ್ಯಕ್ಕೆ ನಾನು ಗಾಯದಿಂದ ಚೇತರಿಸಿಕೊಳ್ಳುವತ್ತ ಗಮನ ಹರಿಸುತ್ತೇನೆ ಹಾಗೂ ಆದಷ್ಟು ಬೇಗ ಟ್ರ್ಯಾಕ್‌ಗೆ ವಾಪಾಸ್ಸಾಗುವ ವಿಶ್ವಾಸವಿದೆ. ಕಳೆದ ಕೆಲವು ದಿನಗಳಿಂದ ಇಡೀ ದೇಶದ ಮೂಲೆ ಮೂಲೆಗಳಿಂದ ಜನರು ತೋರಿರುವ ಪ್ರೀತಿ-ವಿಶ್ವಾಸಕ್ಕೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಹಾಗೂ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪಾಲ್ಗೊಂಡಿರುವ ನಮ್ಮ ಅಥ್ಲೀಟ್‌ಗಳಿಗೆ ನೀವೆಲ್ಲರೂ ಚಿಯರ್ ಮಾಡಿ ಎಂದು ನೀರಜ್ ಚೋಪ್ರಾ ಮನವಿ ಮಾಡಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಅಮೆರಿಕದ ಯುಜೀನ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಜಾವೆಲಿನ್ ಥ್ರೋ ಫೈನಲ್‌ ಪಂದ್ಯದಲ್ಲಿ ನೀರಜ್ ಚೋಪ್ರಾ 88.13 ಮೀಟರ್ ದೂರ ಎಸೆಯುವ ಮೂಲಕ ಬೆಳ್ಳಿ ಪದಕ ಜಯಿಸಿದ್ದರು. ಈ ಮೂಲಕ ಅಂಜು ಬಾಬಿ ಜಾರ್ಜ್ ಬಳಿಕ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಜಯಿಸಿದ ಎರಡನೇ ಭಾರತೀಯ ಅಥ್ಲೀಟ್ ಎನ್ನುವ ಕೀರ್ತಿಗೆ ನೀರಜ್ ಚೋಪ್ರಾ ಪಾತ್ರರಾಗಿದ್ದರು.

click me!