ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಬಿ.ಸಾಯಿ ಪ್ರಣೀತ್ ಮುಗ್ಗರಿಸಿದ್ದಾರೆ. ಟೂರ್ನಿಯಲ್ಲಿ ಒಂದೂ ಪಂದ್ಯ ಸೋಲದೆ ಸೆಮಿಫೈನಲ್ ಪ್ರವೇಶಿಸಿದ್ದ ಪ್ರಣೀತ್, ಮಹತ್ವದ ಪಂದ್ಯದಲ್ಲಿ ಮುಗ್ಗರಿಸಿದ್ದಾರೆ.
ಟೋಕಿಯೋ(ಜು.28): ಜಪಾನ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಸವಾಲು ಮುಕ್ತಾಯಗೊಂಡಿದೆ. ಪುರುಷರ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಬಿ.ಸಾಯಿ ಪ್ರಣೀತ್, ಅಗ್ರ ಶ್ರೇಯಾಂಕಿತ ಆಟಗಾರ ಜಪಾನ್‌ನ ಕೆಂಟೋ ಮೊಮೊಟಾ ವಿರುದ್ಧ ಸೋಲುಂಡು ಹೊರಬಿದ್ದರು.
ಇದನ್ನೂ ಓದಿ: ಇಂಡೋನೇಷ್ಯಾ ಓಪನ್ 2019: ಸಿಂಧು ಪ್ರಶಸ್ತಿ ಕನಸು ಭಗ್ನ!
ಶನಿವಾರ ನಡೆದ ಉಪಾಂತ್ಯದ ಪಂದ್ಯದಲ್ಲಿ ಪ್ರಣೀತ್, 18-21, 12-21 ಗೇಮ್‌ಗಳಲ್ಲಿ ಪರಾಭವಗೊಂಡರು. ಕೇವಲ 45 ನಿಮಿಷಗಳಲ್ಲಿ ಪಂದ್ಯ ಮುಕ್ತಾಯಗೊಂಡಿತು. ಮೊದಲ ಗೇಮ್‌ನಲ್ಲಿ ಉತ್ತಮ ಪೈಪೋಟಿ ನೀಡಿದ್ದ ಪ್ರಣೀತ್, 6-11ರ ಹಿನ್ನಡೆ ಹೊಂದಿದ್ದರೂ ಪುಟಿದೆದ್ದು ಗೇಮ್ ಗೆಲ್ಲುವ ವಿಶ್ವಾಸ ಗಳಿಸಿದ್ದರು. ಆದರೆ ಮೊಮೊಟಾ ಆಕ್ರಮಣಕಾರಿ ಆಟವಾಡಿ ಗೇಮ್ ತಮ್ಮದಾಗಿಸಿಕೊಂಡರು. 2ನೇ ಗೇಮ್‌ನಲ್ಲಿ ಪ್ರಣೀತ್ 9-6ರ ಮುನ್ನಡೆ ಪಡೆದರೂ, ಬಿಡುವಿನ ವೇಳೆಗೆ ಮೊಮೊಟಾ 11-9ರಿಂದ ಮುನ್ನಡೆದರು. ಬಳಿಕ ಸತತವಾಗಿ ಅಂಕ ಕಲೆಹಾಕಿ, ಸುಲಭವಾಗಿ ಫೈನಲ್ ಪ್ರವೇಶಿಸಿದರು. ಭಾನುವಾರ ಪ್ರಶಸ್ತಿಗಾಗಿ ಮೊಮೊಟಾ, ಇಂಡೋನೇಷ್ಯಾದ ಜೊನಾಥನ್ ಕ್ರಿಸ್ಟಿವಿರುದ್ಧ ಸೆಣಸಲಿದ್ದಾರೆ.
ಟೂರ್ನಿಯಲ್ಲಿ ಒಂದೂ ಗೇಮ್ ಸೋಲದೆ ಸೆಮೀಸ್‌ಗೇರಿದ್ದ ಪ್ರಣೀತ್, ಈ ವರ್ಷ ಮೊದಲ ಪ್ರಶಸ್ತಿ ಜಯಿಸುವ ವಿಶ್ವಾಸದಲ್ಲಿದ್ದರು. ಆದರೆ ವಿಶ್ವ ನಂ.1 ಆಟಗಾರನ ವಿರುದ್ಧ ಗೆಲ್ಲಲು ಸಾಧ್ಯವಾಗಲಿಲ್ಲ. ಕೆಲ ತಿಂಗಳುಗಳ ಹಿಂದೆ ಸಿಂಗಾಪುರ ಓಪನ್ ಟೂರ್ನಿಯಲ್ಲೂ ಪ್ರಣೀತ್, ಮೊಮೊಟಾ ವಿರುದ್ಧ ಸೋಲುಂಡಿದ್ದರು. ಈ ವರ್ಷ ಸ್ವಿಸ್ ಓಪನ್ ಫೈನಲ್ ಪ್ರವೇಶಿಸಿದ್ದನ್ನು ಹೊರತುಪಡಿಸಿ ಉಳಿದ್ಯಾವ ಟೂರ್ನಿಗಳಲ್ಲಿ ಪ್ರಣೀತ್‌ಗೆ ಪ್ರಶಸ್ತಿ ಸುತ್ತು ಪ್ರವೇಶಿಸಲು ಸಾಧ್ಯವಾಗಿಲ್ಲ.