ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿ ತಂಡದ ಪ್ರಾಬಲ್ಯ ಮುಂದುವರಿದಿದೆ. ಪುಣೆ ವಿರುದ್ಧ ಅಬ್ಬರಿಸಿದ ಬಿಎಫ್‌ಸಿ 3-0 ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಇಲ್ಲಿದೆ ಪಂದ್ಯದ ಹೈಲೈಟ್ಸ್
ಪುಣೆ(ಅ.23): ಪ್ರಥಮಾರ್ಧದಲ್ಲಿ ನಾಯಕ ಸುನಿಲ್ ಛೆಟ್ರಿ (41 ಮತ್ತು 43ನೇ ನಿಮಿಷ) ಗಳಿಸಿದ ಎರಡು ಗೋಲು ಹಾಗೂ ದ್ವಿತೀಯಾರ್ಧದಲ್ಲಿ ಮಿಕು (64ನೇ ನಿಮಿಷ) ಗಳಿಸಿದ ಒಂದು ಗೋಲಿನ ನೆರವಿನಿಂದ ಆತಿಥೇಯ ಪುಣೆ ತಂಡವನ್ನು 3-0 ಗೋಲುಗಳ ಅಂತರದಲ್ಲಿ ಮಣಿಸಿದ ಬೆಂಗಳೂರು ಎಫ್ ಸಿ ತಂಡ ಇಂಡಿಯನ್ ಸೂಪರ್ ಲೀಗ್ ನಲ್ಲಿ ತನ್ನ ಪ್ರಭುತ್ವವನ್ನು ಮುಂದುವರಿಸಿದೆ.
ನಾಯಕ ಸುನಿಲ್ ಛೆಟ್ರಿ ಗಳಿಸಿದ ಗೋಲಿನಿಂದ ಪ್ರವಾಸಿ ಬೆಂಗಳೂರು ತಂಡ ಪ್ರಥಮಾರ್ಧದಲ್ಲಿ ಮೇಲುಗೈ ಸಾಧಿಸಿತು. 2-0 ಮುನ್ನಡೆ ಕಾಣುವ ಮೂಲಕ ಬೆಂಗಳೂರು ಜಯಕ್ಕೆ ಅಗತ್ಯವಿರುವ ವೇದಿಕೆ ನಿರ್ಮಿಸಿಕೊಂಡಿತು. ದ್ವಿತೀಯಾರ್ಧದಲ್ಲಿ ಮೀಕು ಸಿಡಿಸಿದ ಗೋಲಿನಿಂದ ಬಿಎಫ್‌ಸಿ 3-0 ಮುನ್ನಡೆ ಸಾಧಿಸಿ ಗೆಲುವಿನ ನಗೆ ಬೀರಿತು.
undefined
ಬೆಂಗಳೂರು ಇಂಡಿಯನ್ ಸೂಪರ್ ಲೀಗ್‌ನಲ್ಲೇ ಬಲಿಷ್ಠ ತಂಡವೆಂದು ಇತರ ತಂಡಗಳ ಕೋಚ್‌ಗಳೇ ಒಪ್ಪಿಕೊಂಡಿದ್ದಾರೆ. ಮನೆಯಂಗಣದಲ್ಲಿ ಮಾತ್ರವಲ್ಲಿ ಹೊರಗಡೆ ನಡೆದ ಪಂದ್ಯಗಳಲ್ಲೂ ಬೆಂಗಳೂರು ತಾನು ಬಲಿಷ್ಠ ಎಂಬುದನ್ನು ತೋರಿಸಿಕೊಟ್ಟಿದೆ. ಆಡಿರುವ 9 ಪಂದ್ಯಗಳಲ್ಲಿ ಬೆಂಗಳೂರು 7ರಲ್ಲಿ ಜಯ ಗಳಿಸಿದೆ.
ಗೋಲು ಗಳಿಕೆಯಲ್ಲೂ ಗೋವಾದೊಂದಿಗೆ ಸಮಬಲ ಸಾಧಿಸಿದೆ. 20 ಗೋಲುಗಳನ್ನು ಬೆಂಗಳೂರು ಮನೆಯಿಂದ ಹೊರಗಡೆ ನಡೆದ ಪಂದ್ಯಗಳಲ್ಲಿ ಗಳಿಸಿದೆ. ಚೆಂಡನ್ನು ಗೋಲ್‌ಬಾಕ್ಸ್‌ಗೆ ಗುರಿ ಇಡುವಲ್ಲಿಯೂ ಬೆಂಗಳೂರು ನಿಖರತೆಯಲ್ಲಿ ಅಗ್ರ ಸ್ಥಾನದಲ್ಲಿದೆ. ಶೇ. 61.54ರಷ್ಟು ನಿಖರತೆ ಕಾಯ್ದುಕೊಂಡಿದೆ. ಮನೆಯಂಗಣದಲ್ಲಿ ಕಳೆದ ನಾಲ್ಕು ಪಂದ್ಯಗಳಲ್ಲಿ 10 ಗೋಲು ಗಳಿಸಿರುವ ಬೆಂಗಳೂರು 2 ಕ್ಲೀನ್ ಶೀಟ್ ಸಾಧನೆ ಮಾಡಿದೆ.