ಹಂಗೇರಿಯ ಬ್ಯಾಲಟೊನ್ಲೆಲೆಯಲ್ಲಿ ನಡೆದ ಚೆಸ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಇಶಾ, ರಾಜ್ಯದ ಮೊದಲ ಮಹಿಳಾ ಅಂತಾರಾಷ್ಟ್ರೀಯ ಮಾಸ್ಟರ್ (ಡಬ್ಯುಐಎಂ) ಆದ ಸಾಧನೆ ಮಾಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಬೆಂಗಳೂರು[ಸೆ.18]: ಭಾರತೀಯ ಚೆಸ್‌ನಲ್ಲಿ ಹಲವು ಹೊಸ ಪ್ರತಿಭೆಗಳ ಅನಾವರಣಗೊಳ್ಳುತ್ತಿದೆ. ಆ ಸಾಲಿಗೆ ಕರ್ನಾಟಕದ ಇಶಾ ಶರ್ಮಾ ಸಹ ಸೇರ್ಪಡೆಗೊಂಡಿದ್ದಾರೆ. ಹಂಗೇರಿಯ ಬ್ಯಾಲಟೊನ್ಲೆಲೆಯಲ್ಲಿ ನಡೆದ ಚೆಸ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಇಶಾ, ರಾಜ್ಯದ ಮೊದಲ ಮಹಿಳಾ ಅಂತಾರಾಷ್ಟ್ರೀಯ ಮಾಸ್ಟರ್ (ಡಬ್ಯುಐಎಂ) ಆದ ಸಾಧನೆ ಮಾಡಿದ್ದಾರೆ.
ಕಾಶ್ಮೀರ ಆಟಗಾರ್ತಿ ಹುಡುಕಿಕೊಟ್ಟ ಭಾರತೀಯ ಸೇನೆ!
2017ರ ಶಾರ್ಜಾ ಮಾಸ್ಟರ್ಸ್’ನಲ್ಲಿ ಮೊದಲ ನಾರ್ಮ್ ಸಾಧಿಸಿದ್ದ ಇಶಾ, 2018ರ ವಿಶ್ವ ಕಿರಿಯರ ಚಾಂಪಿಯನ್‌ಶಿಪ್‌ನಲ್ಲಿ 2ನೇ ನಾರ್ಮ್ ಗಳಿಸಿದ್ದರು. ಇದೀಗ ಹಂಗೇರಿಯಲ್ಲಿ ಮಹಿಳಾ ಅಂತಾರಾಷ್ಟ್ರೀಯ ಮಾಸ್ಟರ್ ಪಟ್ಟಕ್ಕೇರಲು ಅಗತ್ಯವಿರುವ 3ನೇ ನಾರ್ಮ್ ಗಳಿಸಿ, ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
2 ವರ್ಷ ಶಾಲೆಗೇ ಹೋಗದವ ಗ್ರ್ಯಾಂಡ್‌ಮಾಸ್ಟರ್!
ಚೆಸ್‌ಗಾಗಿ ಶಾಲೆ ಬಿಟ್ಟಿದ್ದ ಇಶಾ
11ನೇ ವಯಸ್ಸಿನಲ್ಲಿ ಚೆಸ್ ಕ್ರೀಡೆಗೆ ಕಾಲಿಟ್ಟ ಇಶಾ, ಶಾಲೆ ತೊರೆಯಬೇಕಾಯಿತು. ಚೆಸ್‌ನಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಛಲದಿಂದ ಕ್ರೀಡೆಯಲ್ಲಿ ಮುಂದುವರಿದ ಇಶಾಗೆ ಪೋಷಕರ ಬೆಂಬಲ ಬಲ ನೀಡಿತು. ‘ಚೆಸ್ ಬಗ್ಗೆ ನನಗಿರುವ ಒಲವೇ ಈ ಸಾಧನೆಯ ಹಿಂದಿರುವ ಗುಟ್ಟು’ ಎಂದು ಇಶಾ ಸುವರ್ಣ ನ್ಯೂಸ್.ಕಾಂ ಸಹೋದರ ಸಂಸ್ಥೆಯಾದ ‘ಕನ್ನಡಪ್ರಭ’ದೊಂದಿಗೆ ಸಂಭ್ರಮ ಹಂಚಿಕೊಂಡರು. ‘ಚೆಸ್ ಹಾಗೂ ಶಾಲೆ ಎರಡನ್ನು ಒಟ್ಟಿಗೆ ನಿಭಾಯಿಸಲು ಸಾಧ್ಯವಿಲ್ಲ. ಪ್ರತಿ ದಿನ 10 ಗಂಟೆಗಳ ಕಾಲ ಅಭ್ಯಾಸ ನಡೆಸಬೇಕಿದೆ. ಬಹುತೇಕರು ಇದೇ ರೀತಿ ಮಾಡುತ್ತಾರೆ’ ಎಂದು ಇಶಾ ಹೇಳಿದರು. ಸದ್ಯ ದಕ್ಷಿಣ ಕನ್ನಡ ಜಿಲ್ಲೆಯ ಎಸ್.ಡಿ.ಎಂ ಕಾಲೇಜಿನಲ್ಲಿ ಮೊದಲ ವರ್ಷ ಪದವಿ ಶಿಕ್ಷಣ ವ್ಯಾಸಂಗ ಮಾಡುತ್ತಿದ್ದಾರೆ. ಚೆಸ್‌ಗಾಗಿ ವಿಜ್ಞಾನ ಕೋರ್ಸ್ ಬಿಟ್ಟು ಕಲಾ ಕೋರ್ಸ್ ಆಯ್ಕೆ ಮಾಡಿಕೊಂಡಿದ್ದಾಗಿ 18 ವರ್ಷದ ಇಶಾ ತಿಳಿಸಿದರು.
ತಂದೆ ಚಿಕಿತ್ಸೆಗೆ ಸಹಾಯ ಮಾಡಿ; ಯುವತಿ ಮನವಿಗೆ ಗಂಭೀರ್ ಸ್ಪಂದನೆ!
ಮಗಳಿಗಾಗಿ ವೃತ್ತಿ ತೊರೆದ ತಾಯಿ!
ಇಶಾ ತಾಯಿ ಡಾ.ವಿದ್ಯಾ, ಮಗಳ ಚೆಸ್ ಸಾಧನೆಗಾಗಿ ತಮ್ಮ ವೃತ್ತಿಬದುಕನ್ನು ತೊರೆದರು. ‘ನನ್ನ ಸಾಧನೆ ಹಿಂದೆ ತಾಯಿಯ ಶ್ರಮವಿದೆ. ನನಗಾಗಿ ಅವರು ವೃತ್ತಿಯನ್ನೇ ತೊರೆಯಬೇಕಾಯಿತು. ಕೋಚ್‌ಗಳು, ಶಾಲಾ, ಕಾಲೇಜುಗಳ ಶಿಕ್ಷಕರ ನಿರಂತರ ಬೆಂಬಲ ಸಾಧನೆಗೆ ನೆರವಾಯಿತು ’ ಎಂದು ಇಶಾ ಹೇಳಿದರು. ರಾಷ್ಟ್ರೀಯ, ಅಂತಾರಾಷ್ಟ್ರೀಯ ಟೂರ್ನಿಗಳಿಗೆ ತೆರಳುವಾಗ ಇಶಾ ಜತೆ ತಾಯಿ ವಿದ್ಯಾ ಸಹ ಪ್ರಯಾಣಿಸಲಿದ್ದಾರೆ. ಪ್ರತಿ ದಿನ 8ರಿಂದ 10 ಗಂಟೆ ಅಭ್ಯಾಸ ನಡೆಸುವ ಇಶಾಗೆ ಸಹೋದರಿ ಸಹ ನೆರವಾಗುತ್ತಾರೆ. ಚೆಸ್‌ನಲ್ಲಿ ಏಕಾಗ್ರತೆ ಬಹಳ ಮುಖ್ಯವಾಗಿರುವ ಕಾರಣ, ಇಶಾ ಧ್ಯಾನದ ಮೊರೆ ಹೋಗಿರುವುದಾಗಿ ಹೇಳಿದರು.
ಪ್ರಜ್ಞಾನಂದ ವಿಶ್ವದ 2ನೇ ಕಿರಿಯ ಗ್ರ್ಯಾಂಡ್ ಮಾಸ್ಟರ್
ಹತ್ತಾರು ಪ್ರಶಸ್ತಿ: ದಕ್ಷಿಣ ಕನ್ನಡದ ಬೆಳ್ತಂಗಡಿಯವರಾದ ಇಶಾ ರಾಷ್ಟ್ರೀಯ, ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2015ರಲ್ಲಿ ಅವರು ಮಹಿಳಾ ಕೆಡೆಟ್ ಮಾಸ್ಟರ್ ಪಟ್ಟಕ್ಕೇರಿದ್ದರು. ಏಷ್ಯನ್ ಕಿರಿಯರ ರ‍್ಯಾಪಿಡ್ ಟೂರ್ನಿಯಲ್ಲಿ ಚಿನ್ನ ಗೆದ್ದಿದ್ದ ಅವರಿಗೆ ಶ್ರೇಷ್ಠ ಮಹಿಳಾ ಆಟಗಾರ್ತಿ ಪ್ರಶಸ್ತಿಯೂ ಸಿಕ್ಕಿತ್ತು. 2014ರ ರಾಷ್ಟ್ರೀಯ ಶಾಲಾ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಜಯಿಸಿದ್ದ ಇಶಾ, ರಾಷ್ಟ್ರೀಯ ಅಂಡರ್-19 ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು.
ಡಬ್ಯುಐಎಂ ಗಳಿಸುವುದು ಹೇಗೆ?
ಅಂತಾರಾಷ್ಟ್ರೀಯ ಚೆಸ್ ಫೆಡರೇಷನ್ (ಫಿಡೆ) ಪ್ರಶಸ್ತಿಗಳು ಲಿಂಗ ಪ್ರತ್ಯೇಕತೆ ಹೊಂದಿರದಿದ್ದರೂ, ಮಹಿಳಾ ಚೆಸ್ ಪಟುಗಳಿಗೆಂದೇ ನಾಲ್ಕು ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಓಪನ್ ಟೈಟಲ್‌ಗಳ ಜತೆ ಆಟಗಾರ್ತಿಯರು ಈ ಪಟ್ಟಗಳನ್ನೂ ಹೊಂದಬಹುದಾಗಿದೆ. ಮಹಿಳಾ ಗ್ರ್ಯಾಂಡ್‌ಮಾಸ್ಟರ್ ಅತ್ಯುತ್ತಮ ಪಟ್ಟವಾದರೆ, 2ನೇ ಅತ್ಯುತ್ತಮ ಪಟ್ಟವೇ ಮಹಿಳಾ ಅಂತಾರಾಷ್ಟ್ರೀಯ ಮಾಸ್ಟರ್. ಇದಕ್ಕೆ ಮೂರು ನಾರ್ಮ್(ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ) ಗಳನ್ನು ಸಾಧಿಸಬೇಕಿದೆ. ಜತೆಗೆ 2100 ರೇಟಿಂಗ್ ಅಂಕಗಳನ್ನು ಹೊಂದಿರಬೇಕಿದೆ.
ವರದಿ: ಸ್ಪಂದನ್ ಕಣಿಯಾರ್