2 ವರ್ಷ ಶಾಲೆಗೇ ಹೋಗದವ ಗ್ರ್ಯಾಂಡ್‌ಮಾಸ್ಟರ್‌!

ಮೊನ್ನೆ ಮೊನ್ನೆಯಷ್ಟೇ ಭಾರತದ 59ನೇ ಚೆಸ್‌ ಗ್ರ್ಯಾಂಡ್‌ ಮಾಸ್ಟರ್‌ ಎನಿಸಿಕೊಂಡ ತಮಿಳುನಾಡು ರಾಜಧಾನಿ ಚೆನ್ನೈ ಮೂಲದ 12 ವರ್ಷದ ಬಾಲಕ ಡಿ.ಗುಕೇಶ್‌ ಯಶೋಗಾಥೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ ಟೂರ್ನಿಯನ್ನು ಗೆಲ್ಲುವ ಮೂಲಕ ಗುಕೇಶ್‌ ಗ್ರ್ಯಾಂಡ್‌ ಮಾಸ್ಟರ್‌ ಪಟ್ಟಕ್ಕೇರಿದ್ದಾನೆ.

Gukesh from Tamilnadu becomes the youngest Grandmaster of India

ಬೆಂಗಳೂರು[ಜ.21]: ಆತನಿಗಾಗ ಕೇವಲ 7 ವರ್ಷ. ಎಳೆವಯಸ್ಸಿನಲ್ಲೇ ಆತನ ಚೆಸ್‌ ಆಟದ ವೈಖರಿ ನೋಡಿದ ಪೋಷಕರು ಬೇಸಿಗೆ ಶಿಬಿರಕ್ಕೆ ಹಾಕಿದರು. ಅಲ್ಲಿ ಗುರುತಿಸಿದ ಕೋಚ್‌ಗಳು ಪ್ರೋತ್ಸಾಹ ನೀಡಿದರು. ಹುಡುಗ ಆಡಿಯೇ ಆಡಿದ. ಶಾಲೆಗೂ ಚಕ್ಕರ್‌ ಹಾಕಿದ. ಅಪ್ಪ-ಅಮ್ಮ ಇಬ್ಬರೂ ವೈದ್ಯರು. ಅಪ್ಪ ವೃತ್ತಿಯನ್ನೇ ತೊರೆದು ಮಗನ ಬೆನ್ನಿಗೆ ನಿಂತರು. ವಿವಿಧ ಟೂರ್ನಿಗಳಿಗೆ ಕರೆದೊಯ್ದರು. ದಿನಕ್ಕೆ 6ರಿಂದ 7 ತಾಸು ಚದುರಂಗ ಪಟ್ಟುಗಳ ಅಭ್ಯಾಸ ನಡೆಸುವ ಈ ಬಾಲಕ ಈಗ ಭಾರತದಲ್ಲೇ ಅತಿ ಕಿರಿಯ ಗ್ರ್ಯಾಂಡ್‌ ಮಾಸ್ಟರ್‌. ಅಷ್ಟೇ ಅಲ್ಲ, ಈ ಪಟ್ಟಕ್ಕೇರಿದ ವಿಶ್ವದ ಅತ್ಯಂತ ಕಿರಿಯ ಚೆಸ್‌ ಪಟು!

ಇದು ಮೊನ್ನೆ ಮೊನ್ನೆಯಷ್ಟೇ ಭಾರತದ 59ನೇ ಚೆಸ್‌ ಗ್ರ್ಯಾಂಡ್‌ ಮಾಸ್ಟರ್‌ ಎನಿಸಿಕೊಂಡ ತಮಿಳುನಾಡು ರಾಜಧಾನಿ ಚೆನ್ನೈ ಮೂಲದ 12 ವರ್ಷದ ಬಾಲಕ ಡಿ.ಗುಕೇಶ್‌ ಯಶೋಗಾಥೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ ಟೂರ್ನಿಯನ್ನು ಗೆಲ್ಲುವ ಮೂಲಕ ಗುಕೇಶ್‌ ಗ್ರ್ಯಾಂಡ್‌ ಮಾಸ್ಟರ್‌ ಪಟ್ಟಕ್ಕೇರಿದ್ದಾನೆ. ಉಕ್ರೇನ್‌ನ ಸೆರ್ಜಿ ಕರ್ಜಾಕಿನ್‌ ಎಂಬಾತ ಗ್ರ್ಯಾಂಡ್‌ ಮಾಸ್ಟರ್‌ ಆದಾಗ ಆಗಿದ್ದ ವಯಸ್ಸಿಗಿಂತ ಕೇವಲ 17 ದಿನ ಹೆಚ್ಚಾಗಿದ್ದ ಕಾರಣ ಗುಕೇಶ್‌ ವಿಶ್ವದ ಅತಿ ಕಿರಿಯ ಚೆಸ್‌ ಗ್ರ್ಯಾಂಡ್‌ ಮಾಸ್ಟರ್‌ ಎಂಬ ಖ್ಯಾತಿಯಿಂದ ವಂಚಿತನಾಗಿದ್ದಾನೆ. ಆದರೆ, ಭಾರತದ ಮಟ್ಟಿಗೆ ಅತ್ಯಂತ ಕಿರಿಯ ಗ್ರ್ಯಾಂಡ್‌ ಮಾಸ್ಟರ್‌ ಎನಿಸಿಕೊಂಡಿದ್ದಾನೆ.

ಇಂತಹ ಬಹುದೊಡ್ಡ ಶ್ರೇಯಕ್ಕೆ ಪಾತ್ರನಾಗಿರುವ ಗುಕೇಶ್‌ ಸಾಧನೆ ಹಿಂದಿನ ಪರಿಶ್ರಮ, ಪೋಷಕರ ತ್ಯಾಗ, ಅಭ್ಯಾಸದ ಮಾದರಿ ಈ ಕುರಿತು ಸ್ವತಃ ಗುಕೇಶ್‌ ಹಾಗೂ ಆತನ ತಂದೆ ರಜನಿಕಾಂತ್‌ ‘ಕನ್ನಡಪ್ರಭ’ದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

7ನೇ ವಯಸ್ಸಲ್ಲಿ ಚೆಸ್‌ ಆಕರ್ಷಣೆ: 2013ನೇ ಇಸವಿ. 7 ವರ್ಷದ ಗುಕೇಶ್‌ ಚದುರಂಗದ ಆಟದತ್ತ ಬೆರಗು ನೋಟ ಬೀರಿದ್ದು ಆಗಲೇ. ಮನೆಯಲ್ಲಿ ಕೇವಲ ಹವ್ಯಾಸಕ್ಕಾಗಿ ಚೆಸ್‌ ಆಡುತ್ತಿದ್ದ ಗುಕೇಶ್‌ನಲ್ಲಿದ್ದ ಪ್ರತಿಭೆಯನ್ನು ಕಂಡ ಪೋಷಕರು, ಬೇಸಿಗೆ ರಜೆಯಲ್ಲಿ ಆತನನ್ನು ಶಿಬಿರಕ್ಕೆ ಸೇರಿಸಿದರು. ಅಲ್ಲಿ ಕೋಚ್‌ ಎಂ.ಎಸ್‌.ಭಾಸ್ಕರ್‌, ಗುಕೇಶ್‌ ಪ್ರತಿಭೆಗೆ ನೀರೆರೆದರು.

ನನ್ನ ಸಾಧನೆ ಬಗ್ಗೆ ಬಹಳ ಹೆಮ್ಮೆ ಇದೆ. ಗ್ರ್ಯಾಂಡ್‌ ಮಾಸ್ಟರ್‌ ಆಗಿರುವ ನನಗೆ ದೊಡ್ಡ ಪಂದ್ಯಾವಳಿಗಳಲ್ಲಿ ಆಡುವ ಅವಕಾಶ ಸಿಗಲಿದೆ. ಪ್ರತಿಷ್ಠಿತ ಪಂದ್ಯಾವಳಿಗಳಲ್ಲಿ ಆಡಲು ಆಹ್ವಾನ ಸಿಗಲಿದೆ. ಅವಕಾಶಗಳನ್ನು ಬಳಸಿಕೊಂಡು ನನ್ನ ಆಟ ಸುಧಾರಿಸಿಕೊಳ್ಳಬೇಕಿದೆ. ಸೂಪರ್‌ ಗ್ರ್ಯಾಂಡ್‌ ಮಾಸ್ಟರ್‌ ಪಟ್ಟಕ್ಕೇರುವುದು ನನ್ನ ಗುರಿ.

- ಡಿ.ಗುಕೇಶ್‌, ಭಾರತದ ಅತಿ ಕಿರಿಯ ಚೆಸ್‌ ಗ್ರ್ಯಾಂಡ್‌ ಮಾಸ್ಟರ್‌

ಪೋಷಕರ ಪ್ರೋತ್ಸಾಹ: ಗುಕೇಶ್‌ ತಂದೆ-ತಾಯಿ ಇಬ್ಬರೂ ವೈದ್ಯರು. ಮಗ ಚೆಸ್‌ನಲ್ಲಿ ಮುಂದುವರಿಯಬೇಕು ಎನ್ನುವ ಕಾರಣಕ್ಕೆ ತಾವು ಕೂಡಿಟ್ಟಿದ್ದ ಹಣವನ್ನು ಬಳಸಿ ವಿವಿಧ ಟೂರ್ನಿಗಳಿಗೆ ಆತನನ್ನು ಕರೆದೊಯ್ಯಲು ಆರಂಭಿಸಿದರು. ‘ಗುಕೇಶ್‌ಗೆ ತಾನು ವ್ಯಾಸಂಗ ಮಾಡುತ್ತಿರುವ ವೇಲಮ್ಮಾಳ್‌ ಶಾಲೆಯಿಂದಲೂ ಬೆಂಬಲ ದೊರೆಯಿತು. ನಾನು ವೈದ್ಯಕೀಯ ಅಭ್ಯಾಸವನ್ನು ನಿಲ್ಲಿಸಿ ಮಗನೊಂದಿಗೆ ಟೂರ್ನಿಗೆ ತೆರಳಲು ಆರಂಭಿಸಿದೆ. ಪತ್ನಿಯ ದುಡಿಮೆಯಲ್ಲೇ ಜೀವನ ನಡೆಸಬೇಕಾಯಿತು. ಗುಕೇಶ್‌ಗೆ ಅವರ ಶಾಲೆ ಹಾಗೂ ಕೆಲ ಖಾಸಗಿ ಸಂಸ್ಥೆಗಳಿಂದ ಆರ್ಥಿಕ ನೆರವು ದೊರೆಯಿತು. ಕೆಲ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಪಾಲ್ಗೊಳ್ಳಲು ನೆರವಾಯಿತು’ ಎಂದು ಗುಕೇಶ್‌ ತಂದೆ ರಜನಿಕಾಂತ್‌ ಹೇಳುತ್ತಾರೆ.

ದಿನಕ್ಕೆ 6ರಿಂದ 7 ಗಂಟೆ ಅಭ್ಯಾಸ!: ಗುಕೇಶ್‌ ಸದ್ಯ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಶಾಲೆಗೆ ಹೋಗದೆಯೇ ಓದಿನ ಜತೆ ಜತೆಗೆ ದಿನಕ್ಕೆ ಏನಿಲ್ಲವೆಂದರೂ 6ರಿಂದ 7 ಗಂಟೆಗಳ ಕಾಲ ಚೆಸ್‌ ಅಭ್ಯಾಸ ನಡೆಸುತ್ತಾನೆ. ಬಿಡುವಿನ ವೇಳೆಯಲ್ಲಿ ತಾಯಿಯೊಂದಿಗೆ ಬ್ಯಾಡ್ಮಿಂಟನ್‌ ಸಹ ಆಡುವ ಗುಕೇಶ್‌, ಮನರಂಜನೆಗಾಗಿ ತಮಿಳು ಸಿನಿಮಾದ ಹಾಸ್ಯ ತುಣುಕುಗಳನ್ನು ವೀಕ್ಷಿಸುತ್ತಾನಂತೆ. ಸದ್ಯ ಗ್ರ್ಯಾಂಡ್‌ ಮಾಸ್ಟರ್‌ ವಿಷ್ಣು ಪ್ರಸಾದ್‌ ಬಳಿ ತರಬೇತಿ ಪಡೆಯುತ್ತಿರುವ ಗುಕೇಶ್‌, ‘ವಿಷ್ಣು ಸರ್‌ ನನಗೆ ಚೆಸ್‌ನ ವಿವಿಧ ಪ್ರಕಾರಗಳನ್ನು ಹೇಳಿಕೊಡುತ್ತಾರೆ. ಅವರ ಸಲಹೆಗಳು ನನ್ನ ಆಟದ ಮೇಲೆ ದೊಡ್ಡ ಮಟ್ಟದಲ್ಲಿ ಬದಲಾವಣೆ ತಂದಿದೆ. ಆಟದ ವೇಳೆ ಎದುರಾಳಿಯ ನಡೆಯ ಮೇಲೆ ಗಮನ ಹರಿಸುವುದು ಬಹಳ ಮುಖ್ಯ. ಇದಕ್ಕಾಗಿ ವಿಶೇಷ ತರಬೇತಿ ಪಡೆಯುತ್ತಿದ್ದೇನೆ’ ಎನ್ನುತ್ತಾನೆ.

ತಿಂಗಳಲ್ಲಿ 3 ವಾರ ಪ್ರವಾಸ!: ಚೆಸ್‌ ಆಟ ಮಾನಸಿಕ ಒತ್ತಡಕ್ಕೆ ಸಿಲುಕಿಸಿದರೆ, ಪ್ರಯಾಣ ದೈಹಿಕ ಸವಾಲುಗಳನ್ನು ಎಸೆಯುತ್ತದೆ. ಗುಕೇಶ್‌ ತಿಂಗಳಲ್ಲಿ 3 ವಾರ ಪ್ರವಾಸದಲ್ಲಿರುತ್ತಾನೆ. ವಿಶ್ವದ ವಿವಿಧ ಭಾಗಗಳಲ್ಲಿ ನಡೆಯುವ ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಾನೆ. ಇದರೊಂದಿಗೆ ನಿರಂತರ ಅಭ್ಯಾಸ ಸಹ ನಡೆಸಬೇಕು. ಮಾನಸಿಕವಾಗಿ ಸದೃಢಗೊಳ್ಳಲು, ಏಕಾಗ್ರತೆ ಹಾಗೂ ತಾಳ್ಮೆ ಹೆಚ್ಚಿಸಿಕೊಳ್ಳಲು ಮೈಂಡ್‌ ಟ್ರೈನರ್‌ ಕೃಷ್ಣಪ್ರಸಾದ್‌ ಬಳಿ ಗುಕೇಶ್‌ ತರಬೇತಿ ಪಡೆಯುತ್ತಿದ್ದಾನೆ.

ವಿಶ್ವನಾಥನ್‌ ಆನಂದ್‌ ಸ್ಫೂರ್ತಿ: ಭಾರತೀಯ ಚೆಸ್‌ ಆಟಗಾರರಿಗೆ ವಿಶ್ವನಾಥನ್‌ ಆನಂದ್‌ ಸ್ಫೂರ್ತಿಯಾಗುವುದರಲ್ಲಿ ಅನುಮಾನವಿಲ್ಲ. ಅಂತೆಯೇ ಗುಕೇಶ್‌ಗೂ ಸಹ ಆನಂದ್‌ ಸ್ಫೂರ್ತಿಯಾಗಿದ್ದಾರೆ. ಜತೆಗೆ ದಿಗ್ಗಜ ಗ್ರ್ಯಾಂಡ್‌ ಮಾಸ್ಟರ್‌ ಅಮೆರಿಕದ ಬಾಬ್ಬಿ ಫಿಶರ್‌ರನ್ನೂ ಗುಕೇಶ್‌ ಆರಾಧಿಸುತ್ತಾನೆ. ‘ಆನಂದ್‌ ಸರ್‌ರನ್ನು 6-7 ಬಾರಿ ಭೇಟಿಯಾಗಿದ್ದೇನೆ. ಪ್ರತಿ ಬಾರಿ ಸಿಕ್ಕಾಗಲೂ ನನ್ನನ್ನು ಹುರಿದುಂಬಿಸುತ್ತಾರೆ. ಒಂದು ದಿನ ಅವರೊಂದಿಗೆ ಚೆಸ್‌ ಆಡುವ ಆಸೆಯಿದೆ’ ಎಂದು ಗುಕೇಶ್‌ ಹೇಳುತ್ತಾನೆ.

ಏನಿದು ಗ್ರ್ಯಾಂಡ್‌ಮಾಸ್ಟರ್‌?
ವಿಶ್ವ ಚೆಸ್‌ ಒಕ್ಕೂಟ (ಫಿಡೆ) ನೀಡುವ ಗೌರವ ಇದು. ಒಬ್ಬ ಚೆಸ್‌ ಆಟಗಾರ ಗ್ರ್ಯಾಂಡ್‌ ಮಾಸ್ಟರ್‌ ಎನಿಸಿಕೊಳ್ಳಬೇಕಿದ್ದಲ್ಲಿ ಫಿಡೆ ಮಾನ್ಯತೆ ಪಡೆದ ಚೆಸ್‌ ಟೂರ್ನಿಗಳಲ್ಲಿ ಅದ್ಭುತ ಸಾಧನೆ ತೋರಬೇಕು. ಪ್ರೊಫೆಸರ್‌ ಎಲೋ ಎಂಬವರು ಅಭಿವೃದ್ಧಿಪಡಿಸಿದ ‘ಎಲೋ ಅಂಕ ಪದ್ಧತಿ’ಯಲ್ಲಿ ಕನಿಷ್ಠ 2500 ಅಂಕ ಗಳಿಸಬೇಕು. ಕನಿಷ್ಠ 3 ಗ್ರ್ಯಾಂಡ್‌ ಮಾಸ್ಟರ್‌ಗಳು ಪಾಲ್ಗೊಂಡಿದ್ದ ಪ್ರತಿಷ್ಠಿತ ಪಂದ್ಯಾವಳಿಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿರಬೇಕು. ಇದಲ್ಲದೇ ವಿಶ್ವ ಚಾಂಪಿಯನ್‌ಶಿಪ್‌, ವಿಶ್ವ ಕಿರಿಯರ ಚಾಂಪಿಯನ್‌ಶಿಪ್‌ನಲ್ಲಿ ಸಾಧಿಸುವ ಗೆಲುವು ಸಹ ಗ್ರ್ಯಾಂಡ್‌ಮಾಸ್ಟರ್‌ ಪಟ್ಟ ಸ್ವೀಕರಿಸಲು ನೆರವಾಗುತ್ತದೆ.

ವರದಿ: ಧನಂಜಯ್‌.ಎಸ್‌.ಹಕಾರಿ, ಕನ್ನಡಪ್ರಭ

Latest Videos
Follow Us:
Download App:
  • android
  • ios