ಸನ್ ರೈಸರ್ಸ್ ಹೈದರಾಬಾದ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಹೋರಾಟ ತವರಿನ ಅಭಿಮಾನಿಗಳಿಗೆ ಸಖತ್ ಮನರಂಜನೆ ನೀಡಿತು. ಆರಂಭದಲ್ಲಿ ಹೈದರಾಬಾದ್ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದರೆ, ಬಳಿಕ ಬೌಲಿಂಗ್‌ನಲ್ಲಿ ಮೋಡಿ ಮಾಡಿತು. ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.
ಹೈದರಾಬಾದ್(ಏ.29): ಕೆಎಲ್ ರಾಹುಲ್ ಏಕಾಂಗಿ ಹೋರಾಟ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಗೆಲವು ತಂದುಕೊಡಲಿಲ್ಲ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ 48ನೇ ಲೀಗ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ 8 ವಿಕೆಟ್ ನಷ್ಟಕ್ಕೆ 167 ರನ್ ಸಿಡಿಸಿ ಸೋಲೋಪ್ಪಿಕೊಂಡಿತು. 45 ರನ್ ಭರ್ಜರಿ ಗೆಲುವಿನೊಂದಿಗೆ srh ಪ್ಲೇ ಆಫ್ ರೇಸ್‌ನಲ್ಲಿ ಪ್ರಮುಖ ಹೆಜ್ಜೆ ಇಟ್ಟಿದೆ.
ಗೆಲುವಿಗೆ 213 ರನ್ ಬೃಹತ್ ಟಾರ್ಗೆಟ್ ಪಡೆದ ಪಂಜಾಬ್, ಆರಂಭದಲ್ಲೇ ಕ್ರಿಸ್ ಗೇಲ್ ವಿಕೆಟ್ ಕಳೆದುಕೊಂಡು ಆತಂಕ ಎದುರಿಸಿತು. ಗೇಲ್ ಕೇವಲ 4 ರನ್ ಸಿಡಿಸಿ ಔಟಾದರು. ಕನ್ನಡಿಗರಾದ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಜೊತೆಯಾಟ ಪಂಜಾಬ್ ತಂಡಕ್ಕೆ ಚೇತರಿಕೆ ನೀಡಿತು. ಮಯಾಂಕ್ 27 ರನ್ ಸಿಡಿಸಿ ಔಟಾದರು.
undefined
ನೀಕೋಲಸ್ ಪೂರನ್ 21 ರನ್ ಸಿಡಿಸಿ ಔಟಾದರೆ, ಡೇವಿಡ್ ಮಿಲ್ಲರ್ ಆಟ 11 ರನ್‌ಗಳಿಗೆ ಅಂತ್ಯವಾಯಿತು. ನಾಯಕ ಅಶ್ವಿನ್ ಶೂನ್ಯ ಸುತ್ತಿದರು. ಆದರೆ ಕೆಎಲ್ ರಾಹುಲ್ ಏಕಾಂಗಿ ಹೋರಾಟ ನೀಡಿದರು. ಹೈದರಾಬಾದ್ ತಂಡಕ್ಕೆ ತಲೆನೋವಾದ ರಾಹುಲ್‌ಗೆ ತಂಡದ ಇತರ ಬ್ಯಾಟ್ಸ್‌ಮನ್‌ಗಳಿಂದ ಉತ್ತಮ ಸಾಥ್ ಸಿಗಿಲಿಲ್ಲ. ರಾಹುಲ್ 56 ಎಸೆತದಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್ ಮೂಲಕ 79 ರನ್ ಸಿಡಿಸಿ ಔಟಾದರು.
ಸಿಮ್ರನ್ ಸಿಂಗ್ 16 ರನ್ ಸಿಡಿಸಿ ಔಟಾಗುತ್ತಿದ್ದಂತೆ ಪಂಜಾಬ್ ಸೋಲು ಖಚಿತಗೊಂಡಿತು. ನಿಗಧಿತ 20 ಓವರ್‌ಗಳಲ್ಲಿ ಪಂಜಾಬ್ 8 ವಿಕೆಟ್ ನಷ್ಟಕ್ಕೆ 167 ರನ್ ಸಿಡಿಸಿ ಸೋಲೊಪ್ಪಿಕೊಂಡಿತು. 45 ರನ್ ಗೆಲುವು ಸಾಧಿಸಿದ ಹೈದರಾಬಾದ್ ಇದೀಗ ಪ್ಲೇ ಆಫ್ ಸ್ಥಾನದ ಪ್ರಮುಖ ಸ್ಪರ್ಧಿಯಾಗಿ ಕಾಣಿಸಿಕೊಂಡಿದೆ.