IPL 2019: ಸ್ಟುವರ್ಟ್ ಬಿನ್ನಿ ಅಬ್ಬರಿಸಿದರೂ ರಾಜಸ್ಥಾನಕ್ಕೆ ಸಿಗಲಿಲ್ಲ ಗೆಲುವು!

By Web DeskFirst Published Apr 16, 2019, 11:41 PM IST
Highlights

ಐಪಿಎಲ್ ಟೂರ್ನಿಯ 32ನೇ ಲೀಗ್ ಹೋರಾಟ ಅಭಿಮಾನಿಗಳಿಗೆ ಸಖತ್ ಮನರಂಜನೆ ನೀಡಿತು.  ಪಂಜಾಬ್ ಪರ ರಾಹುಲ್ ಜವಾಬ್ದಾರಿಯುತ ಆಟ, ರಾಜಸ್ಥಾನ ಪರ ರಾಹುಲ್ ತ್ರಿಪಾಠಿ ಆರ್ಭಟ ಪಂದ್ಯದ ರೋಚಕತೆ ಹೆಚ್ಚಿಸಿತು. ಮಹತ್ವದ ಪಂದ್ಯದಲ್ಲಿ ಪಂಜಾಬ್ 12ರನ್ ಗೆಲುವು ಸಾಧಿಸಿತು. ಪಂದ್ಯದ ಹೈಲೈಟ್ಸ್ ಇಲ್ಲಿದೆ.

ಮೊಹಾಲಿ(ಏ.16): ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ಐಪಿಎಲ್ ಲೀಗ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ 12 ರನ್ ಗೆಲುವು ಸಾಧಿಸಿದೆ. ಈ ಮೂಲಕ RCB ವಿರುದ್ಧ ಮುಗ್ಗರಿಸಿ ನಿರಾಸೆ ಅನುಭವಿಸಿದ್ದ ಪಂಜಾಬ್ ಇದೀಗ ಗೆಲುವಿನ ಹಳಿಗೆ ಮರಳಿದೆ. ಆದರೆ ಅದ್ಬುತ ಹೋರಾಟ ನೀಡಿದ ರಾಜಸ್ಥಾನ 6ನೇ ಸೋಲು ಕಂಡಿತು.

ಗೆಲುವಿಗೆ 183 ರನ್ ಟಾರ್ಗೆಟ್ ಪಡೆದ ರಾಜಸ್ಥಾನ ರಾಯಲ್ಸ್‌ಗೆ ಜೋಸ್ ಬಟ್ಲರ್ ಹಾಗೂ ರಾಹುಲ್ ತ್ರಿಪಾಠಿ ಉತ್ತಮ ಆರಂಭ ನೀಡಿದರು. ಆದರೆ ಬಟ್ಲರ್ 23 ರನ್ ಸಿಡಿಸಿ ಔಟಾದರು. ತ್ರಿಪಾಠಿ ಹಾಗೂ ಸಂಜು ಸಾಮ್ಸನ್ ಅರ್ಧಶತಕದ ಜೊತೆಯಾಟ ಆಡೋ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. 

ಸಂಜು ಸಾಮ್ಸನ್ 27 ರನ್ ಸಿಡಿಸಿ ಔಟಾದರು. ಅದ್ಬುತ ಪ್ರದರ್ಶನ ನೀಡಿದ ರಾಹುಲ್ ತ್ರಿಪಾಠಿ ಅರ್ಧಶತಕ ಸಿಡಿಸಿದ ಬೆನ್ನಲ್ಲೇ ವಿಕೆಟ್ ಕಳೆದುಕೊಂಡರು. ಅಷ್ಟರಲ್ಲೇ ರಾಜಸ್ಥಾನ ಗೆಲುವಿನ ಹಾದಿ ಕಠಿಣವಾಯಿತು. ಜವಬ್ದಾರಿ ನಾಯಕ ಅಜಿಂಕ್ಯ ರಹಾನೆ ಹೆಗಲ ಮೇಲೆ ಬಿತ್ತು. ಇತ್ತ ಆಶ್ಟನ್ ಟರ್ನರ್ ಅಬ್ಬರಿಸಲಿಲ್ಲ. ಇತ್ತ ಜೋಫ್ರಾ ಅರ್ಚರ್ 1 ರನ್‌ಗೆ ಸುಸ್ತಾದರು. ರಹಾನೆ 26 ರನ್ ಸಿಡಿಸಿ ಔಟಾದರು.

ಸ್ಟುವರ್ಟ್ ಬಿನ್ನಿ  ಬೌಂಡರಿ ಹಾಗೂ ಸಿಕ್ಸರ್ ಮೂಲಕ ರಾಜಸ್ಥಾನ ರನ್ ವೇಗ ಹೆಚ್ಚಿಸಿದರು.  ಅಂತಿಮ 12 ಎಸೆತದಲ್ಲಿ ರಾಜಸ್ಥಾನ ಗೆಲುವಿಗೆ 37 ರನ್ ಬೇಕಿತ್ತು. ಬಿನ್ನಿ ಅಬ್ಬರ ಮುಂದುವರಿಸಿದರು. ಆದರೆ ಇತ್ತ ಶ್ರೇಯಸ್ ಗೋಪಾಲ್ ಶೂನ್ಯ ಸುತ್ತಿದರು. ಸ್ಟುವರ್ಟ್ ಬಿನ್ನಿ 11 ಎಸೆತದಲ್ಲಿ 3 ಸಿಕ್ಸರ್ ಹಾಗೂ 2 ಬೌಂಡರಿ ಮೂಲಕ ಅಜೇಯ 33 ರನ್ ಸಿಡಿಸಿದರೂ ಗೆಲುವು ಸಿಗಲಿಲ್ಲ. ರಾಜಸ್ಥಾನ 7 ವಿಕೆಟ್ ನಷ್ಟಕ್ಕೆ 170 ರನ್ ಸಿಡಿಸಿ ಸೋಲೊಪ್ಪಿಕೊಂಡಿತು.
 

click me!