
ದೆಹಲಿ(ಏ.28): ಹ್ಯಾಟ್ರಿಕ್ ಗೆಲುವಿನ ಮೂಲಕ ಭರ್ಜರಿ ಕಮ್‌ಬ್ಯಾಕ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಶಾಕ್ ನೀಡಿದೆ. ಮಹತ್ವದ ಪಂದ್ಯದಲ್ಲಿ RCB ಸೋಲಿಗೆ ಶರಣಾಗಿದೆ. ಈ ಮೂಲಕ ಕೊಹ್ಲಿ ಸೈನ್ಯದ ಪ್ಲೇ ಆಫ್ ಕನಸು ಕಮರಿಹೋದರೆ, ಡೆಲ್ಲಿ 2ನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸಿತ. RCB ಇನ್ನೇನಿದ್ದರೂ ಸೋಲಿನ ಅಂತರ ಕಡಿಮೆ ಮಾಡಿಕೊಳ್ಳಲು ಹೋರಾಟ ನಡೆಸಬೇಕಿದೆ.
ಗೆಲುವಿಗೆ 188 ರನ್ ಟಾರ್ಗೆಟ್ ಪಡೆದ RCB ಉತ್ತಮ ಆರಂಭ ಪಡೆಯಿತು. ಪಾರ್ಥೀವ್ ಪಟೇಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ಮೊದಲ ವಿಕೆಟ್‌ಗೆ 63 ರನ್ ಜೊತೆಯಾಟ ನೀಡಿದರು. ಒಂದು ಜೀವದಾನ ಪಡೆದರೂ ಕೊಹ್ಲಿ 23 ರನ್ ಸಿಡಿಸಿ ಪೆವಿಲಿಯನ್ ಸೇರಿದರು. ಪಾರ್ಥೀವ್ ಪಟೇಲ್ 20 ಎಸೆತದಲ್ಲಿ 39 ರನ್ ಸಿಡಿಸಿ ಔಟಾದರು.
ಎಬಿ ಡಿವಿಲಿಯರ್ಸ್ ಹೋರಾಟ 17 ರನ್‌ಗಳಿಗೆ ಅಂತ್ಯವಾಯಿತು. ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ RCB ಒತ್ತಡಕ್ಕೆ ಸಿಲುಕಿತು. ಹೆನ್ರಿತ್ ಕ್ಲಸೆನ್ ಹಾಗೂ ಶಿವಂ ದುಬೆ ಅಬ್ಬರಿಸಲಿಲ್ಲ. 111 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು RCB ಗೆಲುವಿನ ಹಾದಿ ಮತ್ತಷ್ಟು ಕಠಿಣವಾಯಿತು.
ಗುರುಕೀರತ್ ಸಿಂಗ್ ಹಾಗೂ ಮಾರ್ಕಸ್ ಸ್ಟೊಯ್ನಿಸ್ ಜೊತೆಯಾಟ RCB ಅಭಿಮಾನಿಗಳಲ್ಲಿ ಗೆಲುವಿನ ಆಸೆ ಚಿಗುರೊಡೆಸಿತು. ಅಂತಿಮ 18 ಎಸೆತದಲ್ಲಿ RCB ಗೆಲುವಿಗೆ 36 ರನ್ ಅವಶ್ಯಕತೆ ಇತ್ತು. ಗುರುಕೀರತ್ ಸಿಂಗ್ 27 ರನ್ ಸಿಡಿಸಿ ಔಟಾದರು. ಹೀಗಾಗಿ RCB ಗೆಲುವು ಕಷ್ಟವಾಯಿತು. ಅಂತಿಮ 6 ಎಸೆತದಲ್ಲಿ 25 ರನ್ ಬೇಕಿತ್ತು. ವಾಶಿಂಗ್ಟನ್ ಸುಂದರ್ ಕೇವಲ 1 ರನ್ ಸಿಡಿಸಿ ನಿರ್ಗಮಿಸಿದರು.
ಮಾರ್ಕಸ್ ಸ್ಟೊಯ್ನಿಸ್ ಅಜೇಯ ರನ್ ಸಿಡಿಸಿ ಹೋರಾಟ ನೀಡಿದರೂ ಗೆಲುವು ಸಿಗಲಿಲ್ಲ. RCB 7 ವಿಕೆಟ್ ನಷ್ಟಕ್ಕೆ 171 ರನ್ ಸಿಡಿಸಿ ಸೋಲೊಪ್ಪಿಕೊಂಡಿತು. 16 ರನ್ ಗೆಲುವು ಸಾಧಿಸಿದ ಡೆಲ್ಲಿ 2ನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸಿತು. ಇತ್ತ RCB ಪ್ಲೇ ಆಫ್ ಹಂತಕ್ಕೇರೋ ಕೊನೆಯ ಆಸೆಯೂ ಮಣ್ಣಾಯಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.