IPL 2019: ಯುಗಾದಿ ಹಬ್ಬದ ದಿನ ಪಂಜಾಬ್‌ಗೆ ಬೇವು, CSKಗೆ ಬೆಲ್ಲ!

By Web DeskFirst Published Apr 6, 2019, 7:40 PM IST
Highlights

ಐಪಿಎಲ್ ಟೂರ್ನಿಯಲ್ಲಿ CSK ಹಾಗೂ ಪಂಜಾಬ್ ನಡುವಿನ ಹೋರಾಟ ರೋಚಕ ಘಟ್ಟ ತಲುಪಿತ್ತು. ಕೆಎಲ್ ರಾಹುಲ್ ಹಾಗೂ ಸರ್ಫರಾಜ್ ಖಾನ್ ಹೋರಾಟ ವ್ಯರ್ಥವಾಯಿತು. ಧೋನಿ ಬ್ಯಾಟಿಂಗ್ ಹಾಗೂ ಅದ್ಬುತ ನಾಯಕತ್ವದಿಂದ CSK ಗೆಲುವಿನ ದಡ ಸೇರಿದೆ. 

ಚೆನ್ನೈ(ಏ.06):  ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ರೋಚಕ ಪಂದ್ಯ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿತ್ತು. ಸರ್ಫರಾಜ್ ಖಾನ್ ಹಾಗೂ ಕೆಎಲ್ ರಾಹುಲ್ ಅದ್ಬುತ ಬ್ಯಾಟಿಂಗ್ ನಡುವೆಯೂ ನಾಯಕ ಧೋನಿ ಚಾಣಾಕ್ಷ ನಿರ್ಧಾರಗಳು ಪಂದ್ಯದ ಗತಿಯನ್ನು ಬದಲಿಸಿತು. ಹೀಗಾಗಿ CSK 22 ರನ್ ಗೆಲುವು ಸಾಧಿಸಿತು.  ಇಷ್ಟೇ ಅಲ್ಲ ಮತ್ತೆ ಗೆಲುವಿನ ಹಳಿಗೆ ಮರಳಿತು. ಆದರೆ ಪಂಜಾಬ್ ಯುಗಾದಿ ಹಬ್ಬಕ್ಕೆ ಸೋಲಿನ ಕಹಿ ಅನುಭವಿಸಿದೆ. 

ಗೆಲುವಿಗೆ 161 ರನ್ ಟಾರ್ಗೆಟ್ ಪಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ಆರಂಭದಲ್ಲೇ ಕ್ರಿಸ್ ಗೇಲ್ ವಿಕೆಟ್ ಕಳೆದುಕೊಂಡಿತು. ಗೇಲ್ 5 ರನ್ ಸಿಡಿಸಿ ಹರ್ಭಜನ್ ಸಿಂಗ್‌ಗೆ ವಿಕೆಟ್ ಒಪ್ಪಿಸಿದರು. ಕನ್ನಡಿಗ ಮಯಾಂಕ್ ಅಗರ್ವಾಲ್ ನಿರಾಸೆ ಮೂಡಿಸಿದರು. ಅಗರ್ವಾಲ್ ಶೂನ್ಯಕ್ಕೆ ಔಟಾದರು. ಕೆ.ಎಲ್ ರಾಹುಲ್ ಹಾಗೂ ಸರ್ಫರಾಜ್ ಖಾನ್ ಜೊತೆಯಾಟದಿಂದ ಪಂಜಾಬ್ ಚೇತರಿಸಿಕೊಂಡಿತು.

ಅದ್ಬುತ ಪ್ರದರ್ಶನ ನೀಡಿದ ಸರ್ಫರಾಜ್ ಐಪಿಎಲ್ ಕ್ರಿಕೆಟ್‌ನಲ್ಲಿ ಚೊಚ್ಚಲ ಅರ್ಧಶತಕ  ಸಿಡಿಸಿದರು. ಸರ್ಫರಾಜ್ ಬೆನ್ನಲ್ಲೇ ರಾಹುಲ್ ಕೂಡ ಹಾಫ್ ಸೆಂಚುರಿ ಬಾರಿಸಿ ತಂಡಕ್ಕೆ ಆಸರೆಯಾದರು. ರಾಹುಲ್ ಹಾಗೂ ಸರ್ಫರಾಜ್ ಬ್ಯಾಟಿಂಗ್‌ನಿಂದ ಪಂದ್ಯ ಪಂಜಾಬ್‌ನತ್ತ ವಾಲಿತು. ಆದರೆ ರಾಹುಲ್ 55 ರನ್ ಸಿಡಿಸಿ ಔಟಾದರು. ಅಷ್ಟರಲ್ಲಿ CSK ಮತ್ತೆ ಪಂದ್ಯದ ಮೇಲೆ ಹಿಡಿತ ಸಾಧಿಸಿತು.

ದೀಪಕ್ ಚಹಾರ್ ಎರಡೆರಡು ನೋ ಬಾಲ್ ಪಂಜಾಬ್ ತಂಡಕ್ಕೆ ನೆರವಾಯಿತು.  ಆದರೆ ಡೇವಿಡ್ ಮಿಲ್ಲರ್ ವಿಕೆಟ್ ಕಬಳಿಸಿ ಚೆನ್ನೈಗೆ ಮೇಲುಗೈ ತಂದುಕೊಟ್ಟರು. ಸ್ಕಾಟ್ ಕಗ್ಲಿಜಿನ್ ಅಂತಿಮ ಓವರ್‌ನಲ್ಲಿ ಸರ್ಫರಾಜ್ ವಿಕೆಟ್ ಪತನಗೊಂಡಿತು. ಸರ್ಫರಾಜ್ 67 ರನ್ ಸಿಡಿಸಿ ಔಟಾದರು. ಅಷ್ಟರಲ್ಲೇ ಪಂಜಾಬ್ ಸೋಲಿನ ಬಾಗಿಲು ತಟ್ಟಿತ್ತು.  ಪಂಜಾಬ್ 5 ವಿಕೆಟ್ ನಷ್ಟಕ್ಕೆ 138 ರನ್ ಸಿಡಿಸಿ ಸೋಲೊಪ್ಪಿಕೊಂಡಿತು. ಮುಂಬೈ ವಿರುದ್ಧದ ಪಂದ್ಯದಲ್ಲಿ ಸೋಲಿಗೆ ಜಾರಿದ್ದ ಚೆನ್ನೈ ಮತ್ತೆ ಗೆಲುವಿನ ಹಳಿಗೆ ಮರಳಿತು. 

click me!