ಪ್ಲೇ ಆಫ್ ಕನಸು ಜೀವಂತವಾಗಿರಿಸಿಕೊಂಡ ಆರ್’ಸಿಬಿ

First Published May 2, 2018, 12:01 AM IST
Highlights

ಆರ್’ಸಿಬಿ ನೀಡಿದ್ದ 168 ರನ್’ಗಳ ಗುರಿ ಬೆನ್ನತ್ತಿದ ಮುಂಬೈಗೆ ಥೀಮ್ ಸೌಥಿ ಆರಂಭದಲ್ಲೇ ಆಘಾತ ನೀಡಿದರು. ಇಶನ್ ಕಿಶನ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು.

ಬೆಂಗಳೂರು[ಮೇ.01]: ಬ್ಯಾಟಿಂಗ್-ಬೌಲಿಂಗ್-ಫೀಲ್ಡಿಂಗ್’ನಲ್ಲಿ ಸಂಘಟಿತ ಪ್ರದರ್ಶನ ತೋರಿದ ಆರ್’ಸಿಬಿ ಮುಂಬೈ ಇಂಡಿಯನ್ಸ್ ವಿರುದ್ಧ 14 ರನ್’ಗಳ ಜಯಭೇರಿ ಬಾರಿಸಿದೆ, ಜತೆಗೆ ಪ್ಲೇ ಆಫ್ ಪ್ರವೇಶಿಸುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ.
ಆರ್’ಸಿಬಿ ನೀಡಿದ್ದ 168 ರನ್’ಗಳ ಗುರಿ ಬೆನ್ನತ್ತಿದ ಮುಂಬೈಗೆ ಥೀಮ್ ಸೌಥಿ ಆರಂಭದಲ್ಲೇ ಆಘಾತ ನೀಡಿದರು. ಇಶನ್ ಕಿಶನ್ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಭರವಸೆಯ ಬ್ಯಾಟ್ಸ್’ಮನ್ ಸೂರ್ಯಕುಮಾರ್ ಯಾದವ್ ಹಾಗೂ ನಾಯಕ ರೋಹಿತ್ ಶರ್ಮಾ ಅವರನ್ನು ಒಂದೇ ಓವರ್’ನಲ್ಲಿ ಬಲಿ ಪಡೆದ ಉಮೇಶ್ ಯಾದವ್ ಆರಂಭದಲ್ಲೇ ಆರ್’ಸಿಬಿಗೆ ಮುನ್ನಡೆ ಒದಗಿಸಿಕೊಟ್ಟರು. ಮಂದಗತಿಯ ಬ್ಯಾಟಿಂಗ್ ನಡೆಸಿದ ಡುಮಿನಿ[23ರನ್, 29 ಎಸೆತ] ಕಿರಾನ್ ಪೊಲ್ಲಾರ್ಡ್[13] ಸ್ಫೋಟಕ ಬ್ಯಾಟಿಂಗ್ ನಡೆಸದಂತೆ ನಿಯಂತ್ರಿಸುವಲ್ಲಿ ಆರ್’ಸಿಬಿ ಬೌಲರ್’ಗಳು ಯಶಸ್ವಿಯಾದರು. 
ಒಂದು ಕಡೆ ನಿರಂತರ ವಿಕೆಟ್ ಉರುಳುತ್ತಿದ್ದರೂ ಹಾರ್ದಿಕ್ ಪಾಂಡ್ಯ[50] ನೆಲಕಚ್ಚಿ ಆಡುವ ಮೂಲಕ ಐಪಿಎಲ್’ನಲ್ಲಿ ಎರಡನೇ ಅರ್ಧಶತಕ ಸಿಡಿಸಿದರು. ಕೃನಾಲ್ ಪಾಂಡ್ಯ 23 ರನ್ ಬಾರಿಸಿದರು. 
ಕೊನೆಯ ಮೂರು ಓವರ್’ಗಳಲ್ಲಿ ಮುಂಬೈಗೆ ಗೆಲ್ಲಲು 35 ರನ್’ಗಳ ಅವಶ್ಯಕತೆಯಿತ್ತು. ಆದರೆ ಶಿಸ್ತುಬದ್ದ ಬೌಲಿಂಗ್ ನಡೆಸಿದ ಸೌಥಿ ಕೇವಲ 5 ರನ್ ಮಾತ್ರ ನೀಡಿದರು. ಇದರ ಬೆನ್ನಲ್ಲೇ ಸಿರಾಜ್ ಕೂಡಾ 5 ರನ್ ನೀಡಿ ಒಂದು ವಿಕೆಟ್ ಕಬಳಿಸಿದರು. ಕೊನೆಯಲ್ಲಿ ಬೆನ್ ಕಟಿಂಗ್ಸ್ 6 ಎಸೆತದಲ್ಲಿ 12 ರನ್ ಸಿಡಿಸಿದರಾದರೂ ಅಷ್ಟರಲ್ಲಾಗಲೇ ಪಂದ್ಯ ಬೆಂಗಳೂರು ಪಾಲಾಗಿತ್ತು.
ಇದಕ್ಕೂ ಮೊದಲು ಮನನ್ ವೋಹ್ರಾ[45] ಮೆಕ್ಲಮ್[37] ಬ್ಯಾಟಿಂಗ್ ನೆರವಿನಿಂದ 167 ರನ್ ಬಾರಿಸಿತ್ತು.
ಸಂಕ್ಷಿಪ್ತ ಸ್ಕೋರ್:
ಆರ್’ಸಿಬಿ: 167/7
ಮನನ್ ವೋಹ್ರಾ: 45
ಹಾರ್ದಿಕ್ ಪಾಂಡ್ಯ: 28/3
ಮುಂಬೈ ಇಂಡಿಯನ್ಸ್: 153/7 
ಹಾರ್ದಿಕ್ ಪಾಂಡ್ಯ: 50
ಥೀಮ್ ಸೌಥಿ: 25/2

click me!