
ಬೆಂಗಳೂರು[ಮೇ.09]: 12ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಎಲಿಮಿನೇಟರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಗ್ಗರಿಸಿದ ಹಾಲಿ ರನ್ನರ್’ಅಪ್ ಸನ್’ರೈಸರ್ಸ್ ಹೈದರಾಬಾದ್ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಕೊನೆಯ ಓವರ್’ವರೆಗೂ ರೋಚಕತೆ ಹಿಡಿದಿಟ್ಟುಕೊಂಡ ಪಂದ್ಯವನ್ನು ಕಡೆಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ತಮ್ಮ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.
SRH ಟೂರ್ನಿಯಿಂದ ಔಟ್- ಬಿಕ್ಕಿ ಬಿಕ್ಕಿ ಅತ್ತ ಕೋಚ್ ಟಾಮ್ ಮೂಡಿ!
ಆರಂಭದಲ್ಲಿ ಪೃಥ್ವಿ ಶಾ ಬಾರಿಸಿದ ಅರ್ಧಶತಕ ಹಾಗೂ ಕೊನೆಯಲ್ಲಿ ರಿಶಭ್ ಪಂತ್ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ 2 ವಿಕೆಟ್’ಗಳ ಸ್ಮರಣೀಯ ಜಯ ದಾಖಲಿಸಿತು. ಈ ಪಂದ್ಯದಲ್ಲಿ ಹಲವು ಅಪರೂಪದ ದಾಖಲೆಗಳು ನಿರ್ಮಾಣವಾಗಿವೆ. ಅಂತಹ ಕೆಲವು ದಾಖಲೆಗಳನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.
IPL ಎಲಿಮಿನೇಟರ್: SRH ಟೂರ್ನಿಯಿಂದ ಔಟ್-ಡೆಲ್ಲಿಗೆ ಕ್ವಾಲಿಫೈಯರ್ ಟಿಕೆಟ್!
* ಖಲೀಲ್ ಎದುರು ಕೀಮೋ ಜಯಭೇರಿ: ಕೊನೆಯ ಓವರ್’ನಲ್ಲಿ ಖಲೀಲ್ ಅಹಮ್ಮದ್ ಬೌಲಿಂಗ್’ನಲ್ಲಿ ಭರ್ಜರಿ ಬೌಂಡರಿ ಸಿಡಿಸುವ ಮೂಲಕ ಕೀಮೋ ಪೌಲ್ ಡೆಲ್ಲಿಗೆ ರೋಚಕ ಜಯ ತಂದಿತ್ತರು. ಈ ಮೊದಲು 2016ರ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲೂ ಈ ಇಬ್ಬರು ಆಟಗಾರರ ಮುಖಾಮುಖಿಯಾಗಿದ್ದರು. ಆಗಲೂ ಪಂದ್ಯದ ಕೊನೆಯ ಓವರ್ ಬೌಲಿಂಗ್ ಮಾಡಿದ ಭಾರತದ ಖಲೀಲ್ ಅಹಮ್ಮದ್ ಎಸೆತದಲ್ಲಿ ಕೀಮೋ ಪೌಲ್ ಗೆಲುವಿನ ರನ್ ಬಾರಿಸುವ ಮೂಲಕ ವೆಸ್ಟ್ ಇಂಡೀಸ್ ತಂಡಕ್ಕೆ ವಿಶ್ವಕಪ್ ಗೆದ್ದುಕೊಟ್ಟಿದ್ದರು.
* ಡೆಲ್ಲಿ ಲಕ್ ಬದಲಾಯಿಸಿದ ಹೆಸರು ಬದಲಾವಣೆ: ಕಳೆದ 11 IPL ಆವೃತ್ತಿಗಳಲ್ಲಿ ಡೆಲ್ಲಿ ತಂಡವು ಒಮ್ಮೆಯೂ ಪ್ಲೇ ಆಫ್ ಹಂತದಲ್ಲಿ ಗೆಲುವು ಕಂಡಿರಲಿಲ್ಲ. ಇದೀಗ 12ನೇ ಆವೃತ್ತಿಯಲ್ಲಿ ಡೆಲ್ಲಿ ತಂಡವು ತನ್ನ ಹೆಸರನ್ನು ಡೇರ್’ಡೆವಿಲ್ಸ್ ಬದಲಾಗಿ ಡೆಲ್ಲಿ ಕ್ಯಾಪಿಟಲ್ಸ್ ಎಂದು ಬದಲಿಸಿಕೊಂಡಿತು. ಇದೀಗ ಮೊದಲ ಬಾರಿಗೆ ಡೆಲ್ಲಿ ತಂಡ ಪ್ಲೇ ಆಫ್ ಪಂದ್ಯದಲ್ಲಿ ಗೆಲುವು ದಾಖಲಿಸಿದೆ. ಈ ಮೊದಲು 2008, 2009, 2012ರಲ್ಲಿ ಪ್ಲೇ ಆಫ್ ಹಂತ ಪ್ರವೇಶಿಸಿದ್ದರೂ ಒಮ್ಮೆಯೂ ಗೆಲುವಿನ ರುಚಿ ಸವಿದಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಹೆಸರು ಬದಲಿಸಿಕೊಂಡ ಬಳಿಕ ಡೆಲ್ಲಿ ಪ್ಲೇ ಆಫ್’ನಲ್ಲಿ ಜಯ ದಾಖಲಿಸಿದೆ.
* ಗಿಲ್ ದಾಖಲೆ ಸರಿಗಟ್ಟಿದ ಪೃಥ್ವಿ: ಡೆಲ್ಲಿ ಗೆಲುವು ಸಾಧಿಸಲು ಪೃಥ್ವಿ ಶಾ ಭರ್ಜರಿ ಅರ್ಧಶತಕವೂ ಕಾರಣ ಎಂದರೆ ತಪ್ಪಾಗಲಾರದು. ಈ ಅರ್ಧಶತಕದೊಂದಿಗೆ ಪೃಥ್ವಿ ಶಾ ಐಪಿಎಲ್’ನಲ್ಲಿ 4 ಅರ್ಧಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ 20 ವರ್ಷ ಪೂರೈಸುವುದರೊಳಗಾಗಿ 4 ಅರ್ಧಶತಕ ಸಿಡಿಸಿರುವ ಶುಭ್’ಮನ್ ಗಿಲ್ ದಾಖಲೆಯನ್ನು ಪೃಥ್ವಿ ಸರಿಗಟ್ಟಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.