ದಿನೇಶ್ ಕಾರ್ತಿಕ್ ಅಬ್ಬರ: ಸ್ಮಿತ್ ಪಡೆಗೆ ಸವಾಲಿನ ಗುರಿ

By Web DeskFirst Published Apr 25, 2019, 10:05 PM IST
Highlights

ಕೋಲ್ಕತಾ ನೈಟ್’ರೈಡರ್ಸ್ ತಂಡದ ನಾಯಕ ದಿನೇಶ್ ಕಾರ್ತಿಕ್ ಭರ್ಜರಿ ಬ್ಯಾಟಿಂಗ್ ನಡೆಸುವ ಮೂಲಕ ಪ್ರವಾಸಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸವಾಲಿನ ಗುರಿ ನೀಡಿದ್ದಾರೆ.

ಕೋಲ್ಕತಾ[ಏ.25]: ನಾಯಕ ದಿನೇಶ್ ಕಾರ್ತಿಕ್[97] ಏಕಾಂಗಿ ಹೋರಾಟದ ನೆರವಿನಿಂದ ಕೋಲ್ಕತಾ ನೈಟ್’ರೈಡರ್ಸ್ ತಂಡವು 175 ರನ್ ಬಾರಿಸಿದ್ದು, ಪ್ರವಾಸಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸವಾಲಿನ ಗುರಿ ನೀಡಿದೆ. ಕಾರ್ತಿಕ್ ಅಜೇಯ ಬ್ಯಾಟಿಂಗ್ ಹೊರತಾಗಿಯೂ ಕೇವಲ 3 ರನ್’ಗಳಿಂದ ಶತಕವಂಚಿತರಾದರು. 

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕೋಲ್ಕತಾ ನೈಟ್’ರೈಡರ್ಸ್ ತಂಡ ಮೊದಲ ಓವರ್’ನಲ್ಲೇ ಕ್ರಿಸ್ ಲಿನ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಇದರ ಬೆನ್ನಲ್ಲೇ ವರಣ್ ಆ್ಯರೋನ್ ಮತ್ತೋರ್ವ ಆರಂಭಿಕ ಬ್ಯಾಟ್ಸ್’ಮನ್ ಶುಭ್’ಮನ್ ಗಿಲ್ ಬಲಿ ಪಡೆಯುವ ಮೂಲಕ ರಾಜಸ್ಥಾನಕ್ಕೆ ಆರಂಭಿಕ ಮುನ್ನಡೆ ಒದಗಿಸಿಕೊಟ್ಟರು. ಇನ್ನು ನರೈನ್[11] ಹಾಗೂ ರಸೆಲ್[14] ಅಲ್ಪ ಮೊತ್ತ ಸಿಡಿಸಿ ಪೆವಿಲಿಯನ್ ಸೇರಿದಾಗ ಕೆಕೆಆರ್ 17 ಓವರ್ ಮುಕ್ತಾಯಕ್ಕೆ 5 ವಿಕೆಟ್ ಕಳೆದುಕೊಂಡು 119 ರನ್ ಬಾರಿಸಿತ್ತು.

ರನ್ ವೇಗ ಹೆಚ್ಚಿಸಿದ ದಿನೇಶ್ ಕಾರ್ತಿಕ್: ಒಂದು ಕಡೆ ನಿರಂತರ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ಎಚ್ಚರಿಕೆಯ ಆಟವಾಡಿದ ದಿನೇಶ್ ಕಾರ್ತಿಕ್ ತಂಡಕ್ಕೆ ಆಸರೆಯಾದರು. 50 ಎಸೆತಗಳನ್ನು ಎದುರಿಸಿದ ಕಾರ್ತಿಕ್ 7 ಬೌಂಡರಿ ಹಾಗೂ 9 ಮುಗಿಲೆತ್ತರದ ಸಿಕ್ಸರ್ ಸಹಿತ ಅಜೇಯ 97 ರನ್ ಸಿಡಿಸಿದರು. ಅದರಲ್ಲೂ ಕೊನೆಯ 3 ಓವರ್’ಗಳಲ್ಲಿ ಕೆಕೆಆರ್ 48 ರನ್ ಚಚ್ಚುವ ಮೂಲಕ ರಾಜಸ್ಥಾನಕ್ಕೆ ಸವಾಲಿನ ಗುರಿ ನೀಡಿದೆ.

ಇನ್ನು ತಂಡಕ್ಕೆ ಕಮ್’ಬ್ಯಾಕ್ ಮಾಡಿದ ರಾಜಸ್ಥಾನದ ವೇಗಿ ವರುಣ್ ಆ್ಯರೋನ್ 2 ವಿಕೆಟ್ ಪಡೆದು ಮಿಂಚಿದರೆ, ಐಪಿಎಲ್’ಗೆ ಪದಾರ್ಪಣೆ ಮಾಡಿದ ಓಶಾನೆ ಥಾಮಸ್, ಶ್ರೇಯಸ್ ಗೋಪಾಲ್ ಹಾಗೂ ಜಯದೇವ್ ಉನಾದ್ಕತ್ ತಲಾ ಒಂದೊಂದು ವಿಕೆಟ್ ಪಡೆದರು.  


 

click me!