ಐಪಿಎಲ್‌ ಮೆಗಾ ಫೈನಲ್ಸ್‌: ಯಾರಾಗ್ತಾರೆ ಚಾಂಪಿಯನ್‌ ಆಫ್‌ ಚಾಂಪಿಯನ್ಸ್‌?

By Web DeskFirst Published May 12, 2019, 12:13 PM IST
Highlights

ಎರಡೂ ತಂಡಗಳು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಾಗಿ ಟೂರ್ನಿಗೆ ಕಾಲಿಟ್ಟವು. ಈಗ ಪ್ರಶಸ್ತಿ ಹೊಸ್ತಿಲಿಗೆ ಬಂದು ನಿಂತಿವೆ. ಈ ಆವೃತ್ತಿಯ ಅಂಕಿ-ಅಂಶಗಳನ್ನು ಗಮನಿಸಿದರೆ ಚೆನ್ನೈ ಮೇಲೆ ಮುಂಬೈ ಸಂಪೂರ್ಣ ಪ್ರಾಬಲ್ಯ ಮೆರೆದಿದೆ. 

ಹೈದರಾಬಾದ್‌[ಮೇ.12]: ಐಪಿಎಲ್‌ನ ಅತ್ಯಂತ ಯಶಸ್ವಿ ತಂಡಗಳಿವು. ಫೈನಲ್‌ ಕದನದಲ್ಲಿ ಹೋರಾಡಿ ಮೂರು ಬಾರಿ ಚಾಂಪಿಯನ್‌ಗಳಾಗಿವೆ. ದಾಖಲೆಯ 4ನೇ ಐಪಿಎಲ್‌ ಟ್ರೋಫಿಗೆ ಭಾನುವಾರ ಇಲ್ಲಿನ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮೆಗಾ ಫೈನಲ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಮುಂಬೈ ಇಂಡಿಯನ್ಸ್‌ ಪ್ರಶಸ್ತಿಗಾಗಿ ಸೆಣಸಲಿವೆ. ಚಾಂಪಿಯನ್‌ ತಂಡಗಳ ನಡುವಿನ ಮಹಾಸಮರ ಕ್ರಿಕೆಟ್‌ ಅಭಿಮಾನಿಗಳ ಹೃದಯ ಬಡಿತ ಹೆಚ್ಚಿಸಿದೆ.

ಎರಡೂ ತಂಡಗಳು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಾಗಿ ಟೂರ್ನಿಗೆ ಕಾಲಿಟ್ಟವು. ಈಗ ಪ್ರಶಸ್ತಿ ಹೊಸ್ತಿಲಿಗೆ ಬಂದು ನಿಂತಿವೆ. ಈ ಆವೃತ್ತಿಯ ಅಂಕಿ-ಅಂಶಗಳನ್ನು ಗಮನಿಸಿದರೆ ಚೆನ್ನೈ ಮೇಲೆ ಮುಂಬೈ ಸಂಪೂರ್ಣ ಪ್ರಾಬಲ್ಯ ಮೆರೆದಿದೆ. ಕ್ವಾಲಿಫೈಯರ್‌ 1 ಸೇರಿ ಒಟ್ಟು 3 ಪಂದ್ಯಗಳನ್ನು ಎದುರಾಗಿದ್ದು, ಮೂರರಲ್ಲೂ ಮುಂಬೈ ಗೆದ್ದಿದೆ. ಸತತ 4ನೇ ಪಂದ್ಯ ಗೆದ್ದು ಕ್ಲೀನ್‌ ಸ್ವೀಪ್‌ ಮಾಡುವ ಗುರಿ ರೋಹಿತ್‌ ಶರ್ಮಾ ಪಡೆಯದ್ದು. ಮತ್ತೊಂದೆಡೆ ಹ್ಯಾಟ್ರಿಕ್‌ ಸೋಲು ಕಂಡರೂ, ಫೈನಲ್‌ನಲ್ಲಿ ಜಯಿಸಿ ಕೊನೆ ನಗು ಬೀರುವ ಉತ್ಸಾಹ ಸಿಎಸ್‌ಕೆದಾಗಿದೆ.

ಕ್ವಾಲಿಫೈಯರ್‌ 1ನಲ್ಲಿ ಮುಂಬೈ ವಿರುದ್ಧ ಕಳಪೆ ಪ್ರದರ್ಶನ ತೋರಿದರೂ, ಕ್ವಾಲಿಫೈಯರ್‌ 2 ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಚೆನ್ನೈ ಸುಧಾರಿತ ಪ್ರದರ್ಶನ ನೀಡಿತು. ಪ್ರಮುಖವಾಗಿ ಆರಂಭಿಕರಾದ ಶೇನ್‌ ವಾಟ್ಸನ್‌ ಹಾಗೂ ಫಾಫ್‌ ಡು ಪ್ಲೆಸಿಸ್ ಲಯಕ್ಕೆ ಮರಳಿರುವುದು, ನಾಯಕ ಧೋನಿಯ ಹೆಗಲ ಮೇಲಿನ ಭಾರವನ್ನು ಕಡಿಮೆ ಮಾಡಿದೆ. ಸುರೇಶ್‌ ರೈನಾ ತಮ್ಮ ಎಂದಿನ ಶೈಲಿಯಲ್ಲಿ ಬ್ಯಾಟ್‌ ಮಾಡಿದರೆ ಮುಂಬೈಗೆ ಆಪತ್ತು ಕಟ್ಟಿಟ್ಟ ಬುತ್ತಿ.

ಈ ಪಂದ್ಯ ಚೆನ್ನೈನ ಅನುಭವಿ ಸ್ಪಿನ್ನರ್‌ಗಳು ಹಾಗೂ ಮುಂಬೈನ ಬಲಿಷ್ಠ ಬ್ಯಾಟಿಂಗ್‌ ಪಡೆ ನಡುವಿನ ಸಮರವಾಗಿ ತೋರುತ್ತಿದೆ. ಈ ಆವೃತ್ತಿಯ ಮೂರೂ ಪಂದ್ಯಗಳಲ್ಲಿ ಚೆನ್ನೈ ಸ್ಪಿನ್ನರ್‌ಗಳನ್ನು ಮುಂಬೈ ಬ್ಯಾಟ್ಸ್‌ಮನ್‌ಗಳು ಸಮರ್ಥವಾಗಿ ಎದುರಿಸಿದ್ದಾರೆ. ಫೈನಲ್‌ನಲ್ಲೂ ತಮ್ಮ ತಂಡದಿಂದ ಬ್ಯಾಟಿಂಗ್‌ ಸಾಹಸವನ್ನು ಮುಂಬೈ ಆಡಳಿತ ನಿರೀಕ್ಷೆ ಮಾಡುತ್ತಿದೆ.

ಪಿಚ್‌ ರಿಪೋರ್ಟ್‌: ರನ್‌ ಹೊಳೆ ನಿರೀಕ್ಷೆ

ಹೈದರಾಬಾದ್‌ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, ರನ್‌ ಹೊಳೆ ಹರಿಯುವ ನಿರೀಕ್ಷೆ ಇದೆ. ಈ ಆವೃತ್ತಿಯಲ್ಲಿ ಇಲ್ಲಿ ನಡೆದಿರುವ 7 ಪಂದ್ಯಗಳಲ್ಲಿ 3ರಲ್ಲಿ 200ಕ್ಕೂ ಹೆಚ್ಚು ಮೊತ್ತ ದಾಖಲಾಗಿದೆ. ಸನ್‌ರೈಸ​ರ್ಸ್-ರಾಜಸ್ಥಾನ ಪಂದ್ಯದಲ್ಲಿ ಒಟ್ಟು 399 ರನ್‌ ದಾಖಲಾಗಿತ್ತು. ಸನ್‌ರೈಸ​ರ್ಸ್-ಪಂಜಾಬ್‌ ಪಂದ್ಯದಲ್ಲಿ 379 ರನ್‌ ದಾಖಲಾಗಿತ್ತು. 4 ಪಂದ್ಯಗಳಲ್ಲಿ ಮೊದಲು ಬ್ಯಾಟ್‌ ಮಾಡಿದ ತಂಡ ಗೆದ್ದಿದ್ದರೆ, 3ರಲ್ಲಿ 2ನೇ ಬ್ಯಾಟ್‌ ಮಾಡಿದ ತಂಡ ಜಯಿಸಿದೆ. ಮೊದಲು ಬ್ಯಾಟ್‌ ಮಾಡಿ 200ಕ್ಕೂ ಹೆಚ್ಚು ಮೊತ್ತ ಕಲೆಹಾಕಿದರೆ ಬಹುತೇಕ ಪಂದ್ಯ ಗೆದ್ದಂತೆ. ಇಬ್ಬನಿ ಬೀಳುವ ಕಾರಣ, 2ನೇ ಇನ್ನಿಂಗ್ಸ್‌ ವೇಳೆ ಚೆಂಡಿನ ಮೇಲೆ ಬೌಲರ್‌ಗಳು ನಿಯಂತ್ರಣ ಸಾಧಿಸುವುದು ಕಷ್ಟ. ಹೀಗಾಗಿ ಮೊದಲು ಬ್ಯಾಟ್‌ ಮಾಡುವ ತಂಡ ಕಡ್ಡಾಯವಾಗಿ ದೊಡ್ಡ ಮೊತ್ತ ದಾಖಲಿಸಲೇಬೇಕು. ಹೈದರಾಬಾದ್‌ ಕ್ಯುರೇಟರ್‌ ಪ್ರಕಾರ, ಪಿಚ್‌ ಸ್ಪರ್ಧಾತ್ಮಕವಾಗಿದ್ದು ಉತ್ತಮ ಮೊತ್ತ ನಿರೀಕ್ಷೆ ಮಾಡಬಹುದಾಗಿದೆ.

ಒಟ್ಟು ಮುಖಾಮುಖಿ: 27

ಮುಂಬೈ: 16

ಚೆನ್ನೈ: 11

ಸಂಭವನೀಯ ಆಟಗಾರರ ಪಟ್ಟಿ

ಮುಂಬೈ: ಕ್ವಿಂಟನ್‌ ಡಿ ಕಾಕ್‌, ರೋಹಿತ್‌ ಶರ್ಮಾ(ನಾಯಕ), ಸೂರ್ಯಕುಮಾರ್‌, ಇಶಾನ್‌ ಕಿಶನ್‌, ಕೃನಾಲ್‌ ಪಾಂಡ್ಯ, ಹಾರ್ದಿಕ್‌ ಪಾಂಡ್ಯ, ಕಿರೊನ್‌ ಪೊಲ್ಲಾರ್ಡ್‌, ಜಯಂತ್‌ ಯಾದವ್‌, ರಾಹುಲ್‌ ಚಾಹರ್‌, ಲಸಿತ್‌ ಮಾಲಿಂಗ, ಜಸ್‌ಪ್ರೀತ್‌ ಬೂಮ್ರಾ.

ಚೆನ್ನೈ: ಫಾಫ್‌ ಡು ಪ್ಲೆಸಿ, ಶೇನ್‌ ವಾಟ್ಸನ್‌, ಸುರೇಶ್‌ ರೈನಾ, ಅಂಬಟಿ ರಾಯುಡು, ಎಂ.ಎಸ್‌.ಧೋನಿ, ರವೀಂದ್ರ ಜಡೇಜಾ, ಡ್ವೇನ್‌ ಬ್ರಾವೋ, ದೀಪಕ್‌ ಚಾಹರ್‌, ಹರ್ಭಜನ್‌ ಸಿಂಗ್‌, ಶಾರ್ದೂಲ್‌ ಠಾಕೂರ್‌, ಇಮ್ರಾನ್‌ ತಾಹಿರ್‌.

ಸ್ಥಳ: ಹೈದರಾಬಾದ್‌
ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1
 

click me!