ಇಂಡೋನೇಷ್ಯಾ ಮಾಸ್ಟ​ರ್ಸ್‌: ಪಿವಿ ಸಿಂಧು, ಲಕ್ಷ್ಯ ಸೆನ್‌ ಕ್ವಾರ್ಟರ್‌ಗೆ

By Kannadaprabha NewsFirst Published Jun 10, 2022, 10:24 AM IST
Highlights

* ಇಂಡೋನೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟ ಸಿಂಧು, ಲಕ್ಷ್ಯ

* ಪುರುಷರ ಸಿಂಗಲ್ಸ್‌ 2ನೇ ಸುತ್ತಿನ ಪಂದ್ಯದಲ್ಲಿದಲ್ಲಿ ಡೆನ್ಮಾರ್ಕ್‌ನ ಆಟಗಾರನ ಎದುರು ಲಕ್ಷ್ಯ ಜಯಭೇರಿ

* ಮಹಿಳಾ ಸಿಂಗಲ್ಸ್‌ನಲ್ಲಿ ಮಾಜಿ ಚಾಂಪಿಯನ್ ಸಿಂಧು ಭರ್ಜರಿ ಗೆಲುವು

ಜಕಾರ್ತ(ಜೂ.10): ಇಂಡೋನೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ (Indonesia Masters Super 500) ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ.ಸಿಂಧು (PV Sindhu) ಹಾಗೂ ಲಕ್ಷ್ಯ ಸೆನ್‌ (Lakshya Sen) ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಗುರುವಾರ ನಡೆದ ಪುರುಷರ ಸಿಂಗಲ್ಸ್‌ 2ನೇ ಸುತ್ತಿನ ಪಂದ್ಯದಲ್ಲಿ 20 ವರ್ಷದ ಸೆನ್‌ ಡೆನ್ಮಾರ್ಕ್ನ ರಸ್ಮಸ್‌ ಗೆಮ್ಕೆ ವಿರುದ್ಧ 21-18, 21-15 ನೇರ ಗೇಮ್‌ಗಳಿಂದ ಗೆಲುವು ಸಾಧಿಸಿದರು. ಕ್ವಾರ್ಟರ್‌ನಲ್ಲಿ ಅವರು ಚೈನೀಸ್‌ ತೈಪೆಯ ಚೊಯು ಚೆನ್‌ ವಿರುದ್ಧ ಆಡಲಿದ್ದಾರೆ. 

ಇನ್ನು ಮಹಿಳಾ ಸಿಂಗಲ್ಸ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್‌ ಸಿಂಧು ಇಂಡೋನೇಷ್ಯಾದ ಗ್ರೆಗೋರಿಯಾ ವಿರುದ್ಧ 23-21, 20-22, 21-11 ಗೇಮ್‌ಗಳಲ್ಲಿ ಜಯಭೇರಿ ಬಾರಿಸಿದರು. ಆದರೆ ಮಿಶ್ರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ-ಸುಮೀತ್‌ ರೆಡ್ಡಿ ಸೋತು ಹೊರಬಿದ್ದರು.

ಪ್ಯಾರಾ ಶೂಟಿಂಗ್‌ ವಿಶ್ವಕಪ್‌: ಭಾರತಕ್ಕೆ 3ನೇ ಚಿನ್ನದ ಪದಕ

ನವದೆಹಲಿ: ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಪ್ಯಾರಾ ಶೂಟಿಂಗ್‌ ವಿಶ್ವಕಪ್‌ನಲ್ಲಿ ಭಾರತ 3ನೇ ಚಿನ್ನದ ಪದಕ ತನ್ನದಾಗಿಸಿಕೊಂಡಿದೆ. ಬುಧವಾರ ಮಿಶ್ರ ತಂಡ ವಿಭಾಗದ 10 ಮೀ. ಪಿ6 ಸ್ಪರ್ಧೆಯಲ್ಲಿ ಭಾರತದ ಮನೀಶ್‌ ನರ್ವಾಲ್‌ ಹಾಗೂ ರುಬಿನಾ ಫ್ರಾನ್ಸಿಸ್‌ ಬಂಗಾರ ಗೆದ್ದಿತು.

ಈ ಜೋಡಿ ಅರ್ಹತಾ ಸುತ್ತಿನಲ್ಲಿ ವಿಶ್ವ ದಾಖಲೆಯ 565 ಅಂಕಗಳೊಂದಿಗೆ ಫೈನಲ್‌ ಪ್ರವೇಶಿಸಿತ್ತು. ಬಳಿಕ ಫೈನಲ್‌ನಲ್ಲಿ ಚೀನಾದ ಜೋಡಿ ವಿರುದ್ಧ 274.3 ಅಂಕಗಳೊಂದಿಗೆ ಗೆಲುವು ಸಾಧಿಸಿತು. ಇದಕ್ಕೂ ಮೊದಲು ಅವನಿ ಲೇಖರಾ ಮತ್ತು ಕರ್ನಾಟಕ ಮೂಲದ ಶ್ರೀಹರ್ಷ ದೇವರೆಡ್ಡಿ ರಾಮಕೃಷ್ಣ ಚಿನ್ನ ಗೆದ್ದು, 2024ರ ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು.

ಎಎಫ್‌ಸಿ ಅರ್ಹತಾ ಫುಟ್ಬಾಲ್‌ ಟೂರ್ನಿ: ಭಾರತ ಶುಭಾರಂಭ

ಕೋಲ್ಕತಾ: ಎಎಫ್‌ಸಿ ಏಷ್ಯನ್‌ ಕಪ್‌ ಫುಟ್ಬಾಲ್‌ ಟೂರ್ನಿಯ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಗೆಲ್ಲುವ ಮೂಲಕ ಭಾರತ ಶುಭಾರಂಭ ಮಾಡಿದೆ. ಬುಧವಾರ ಕಾಂಬೋಡಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಸುನಿಲ್‌ ಚೆಟ್ರಿ ನೇತೃತ್ವದ ಭಾರತ 2-0 ಅಂತರದಲ್ಲಿ ಗೆಲುವು ಸಾಧಿಸಿತು. ಚೆಟ್ರಿ 13, 59ನೇ ನಿಮಿಷದಲ್ಲಿ ಗೋಲು ಬಾರಿಸಿದರು. 

ಏಷ್ಯಾನೆಟ್ ಸುವರ್ಣ ನ್ಯೂಸ್‌.ಕಾಂಗೆ ಕನ್ನಡದಲ್ಲೇ ಧನ್ಯವಾದ ಅರ್ಪಿಸಿದ ಅವನಿ ಲೇಖರಾ..!

ಅವರು ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ 127 ಪಂದ್ಯಗಳಲ್ಲಿ ಒಟ್ಟು 82 ಗೋಲು ದಾಖಲಿಸಿದ್ದು, ಗರಿಷ್ಠ ಗೋಲು ಬಾರಿಸಿದ ಸಕ್ರಿಯ ಆಟಗಾರರ ಪಟ್ಟಿಯಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ(117) ಲಿಯೋನೆಲ್‌ ಮೆಸ್ಸಿ(86) ಬಳಿಕ 3ನೇ ಸ್ಥಾನದಲ್ಲಿದ್ದಾರೆ. ಭಾರತ ಟೂರ್ನಿಯಲ್ಲಿ ‘ಡಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಶನಿವಾರ ಅಷ್ಘಾನಿಸ್ತಾನ ಸವಾಲನ್ನು ಎದುರಿಸಲಿದೆ.

ಬೆಂಗಳೂರು ಎಫ್‌ಸಿ ತಂಡಕ್ಕೆ ಸೈಮನ್‌ ಗ್ರೇಸನ್‌ ಕೋಚ್‌

ಬೆಂಗಳೂರು: ಬೆಂಗಳೂರು ಎಫ್‌ಸಿ ಫುಟ್ಬಾಲ್‌ ತಂಡದ ನೂತನ ಕೋಚ್‌ ಆಗಿ ಇಂಗ್ಲೆಂಡ್‌ನ ಹಿರಿಯ ಫುಟ್‌ಬಾಲ್ ಆಟಗಾರ ಸೈಮನ್‌ ಗ್ರೇಸನ್‌ ಅವರು ನೇಮಕಗೊಂಡಿದ್ದಾರೆ. 2022-23ರ ಇಂಡಿಯನ್‌ ಸೂಪರ್‌ ಲೀಗ್‌ ಆವೃತ್ತಿಯ ಆರಂಭಕ್ಕೂ ಮುನ್ನ ಸೈಮನ್‌ ಅವರನ್ನು ಎರಡು ವರ್ಷಗಳ ಅವಧಿಗೆ ಕೋಚ್‌ ಆಗಿ ನೇಮಿಸಲಾಗಿದೆ. ಸೈಮನ್‌ ಅವರು ಇಂಗ್ಲೆಂಡ್‌ನ ವಿವಿಧ ಕ್ಲಬ್‌ಗಳ ಪರ 500ಕ್ಕೂ ಅಧಿಕ ಪಂದ್ಯಗಳಲ್ಲಿ ಆಡಿದ್ದಾರೆ. ಬಳಿಕ 2004ರಿಂದ ಕೋಚಿಂಗ್‌ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು, ಇಂಗ್ಲೆಂಡ್‌ನ ಏಳು ಕ್ಲಬ್‌ಗಳಿಗೆ ಕೋಚ್‌ ಆಗಿಯೂ ಕಾರ್ಯನಿರ್ವಹಿಸಿದ್ದಾರೆ.


 

click me!