23 ದಿನ ಪೂರೈಸಿದ ಕುಸ್ತಿಪಟುಗಳ ಪ್ರತಿಭಟನೆ
ಬ್ರಿಜ್‌ಭೂಷಣ್ ವಿರುದ್ದ ಭಾರತೀಯ ಕುಸ್ತಿಪಟುಗಳ ಪ್ರತಿಭಟನೆ
ಈ ಪ್ರತಿಭಟನೆ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ತೀರ್ಮಾನ
ನವದೆಹಲಿ(ಮೇ.16): ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್‌ರನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ಈಗ ತಮ್ಮ ಹೋರಾಟವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದಾರೆ. ತಾವು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸುವಂತೆ ಒಲಿಂಪಿಕ್ ಪದಕ ವಿಜೇತರು ಸೇರಿ ತಾರಾ ವಿದೇಶಿ ಅಥ್ಲೀಟ್‌ಗಳನ್ನು ಸಂಪರ್ಕಿಸಲು ಯೋಜನೆ ರೂಪಿಸಿದ್ದಾರೆ ಎಂದು ತಿಳಿದುಬಂದಿದೆ.
‘ನಾವು ಈ ಪ್ರತಿಭಟನೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದೇವೆ. ಹಲವು ದೇಶಗಳ ಒಲಿಂಪಿಕ್ಸ್ ಪದಕ ವಿಜೇತರು, ಅಂ.ರಾ. ಕ್ರೀಡಾಪಟುಗಳನ್ನು ಸಂಪರ್ಕಿಸಲಿದ್ದೇವೆ. ಅವರ ಬೆಂಬಲ ಕೋರಿ ಪತ್ರ ಬರೆಯಲಿದ್ದೇವೆ’ ಎಂದು ಏಷ್ಯನ್ ಗೇಮ್ಸ್ ಚಿನ್ನ ವಿಜೇತ ಕುಸ್ತಿಪಟು ವಿನೇಶ್ ಫೋಗಾಟ್ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
ಕೆಟ್ಟ ಹೆಸರು ತರಲು ಪ್ರಯತ್ನ: ವಿನೇಶ್!
ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿರುವ ಜಂತರ್-ಮಂತರ್‌ಗೆ ಅಪರಿಚಿತ ಮಹಿಳೆಯರನ್ನು ಕಳುಹಿಸಿ ಕೆಟ್ಟ ಹೆಸರು ತರುವ ಪ್ರಯತ್ನ ನಡೆಯುತ್ತಿದೆ ಎಂದು ವಿನೇಶ್ ಹೊಸ ಆರೋಪ ಮಾಡಿದ್ದಾರೆ. ‘ನಮ್ಮ ಚಟುವಟಿಕೆಗಳ ಮೇಲೆ ಕಣ್ಣಿಡಲಾಗಿದೆ. ನಮ್ಮ ಫೋಟೋ, ವಿಡಿಯೋಗಳನ್ನು ಕ್ಲಿಕ್ಕಿಸುತ್ತಿದ್ದಾರೆ. ನಾವು ಎಷ್ಟೇ ಹೇಳಿದರೂ ಕೇಳುತ್ತಿಲ್ಲ. ಇನ್ನು ಕೆಲ ಅಪರಿಚಿತ ಮಹಿಳೆಯರು ರಾತ್ರಿ ಹೊತ್ತು ನಮ್ಮ ಟೆಂಟ್‌ಗಳಲ್ಲಿ ಬಂದು ಮಲಗಲು ಯತ್ನಿಸುತ್ತಿದ್ದಾರೆ. ನಮ್ಮ ಹೋರಾಟಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಹೀಗೆಲ್ಲಾ ಆಗುತ್ತಿದೆ ಎನ್ನುವ ಅನುಮಾನ ಮೂಡಿದೆ’ ಎಂದು ವಿನೇಶ್ ಹೇಳಿದ್ದಾರೆ.
Wrestlers protest ಕುಸ್ತಿ ಫೆಡರೇಶನ್ ಆಡಳಿತ ಬ್ರಿಜ್ ಕೈತಪ್ಪಿದ್ದಕ್ಕೆ ಕುಸ್ತಿಪಟುಗಳ ಸಂತಸ..!
ನ್ಯಾಯಾಂಗದ ಮೇಲೆ ನಂಬಿಕೆ ಇಡಿ: ಠಾಕೂರ್
ಹಮೀರ್‌ಪುರ್(ಹಿಮಾಚಲಪ್ರದೇಶ): ದೇಶದ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇಡಿ. ಪ್ರತಿಭಟನೆ ಕೈಬಿಡಿ ಎಂದು ಕುಸ್ತಿಪಟುಗಳನ್ನು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮತ್ತೊಮ್ಮೆ ಮನವಿ ಮಾಡಿದ್ದಾರೆ. ‘ಕುಸ್ತಿಪಟುಗಳ ಬೇಡಿಕೆ ಈಡೇರಿಸಿದ್ದೇವೆ. ಫೆಡರೇಶನ್‌ನ ದೈನಂದಿನ ಚಟುವಟಿಕೆ ನೋಡಿಕೊಳ್ಳಲು ತಾತ್ಕಾಲಿಕ ಸಮಿತಿ ರಚಿಸಲಾಗಿದೆ. ಶೀಘ್ರ ಚುನಾವಣೆ ನಡೆಯಲಿದ್ದು, ಹೊಸ ಸಮಿತಿಯ ಆಯ್ಕೆ ನಡೆಯಲಿದೆ. ಬ್ರಿಜ್‌ಭೂಷಣ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ದೂರುದಾರ ಕುಸ್ತಿಪಟುಗಳು ಮ್ಯಾಜಿಸ್ಪ್ರೇಟ್ ಮುಂದೆ ಹೇಳಿಕೆ ದಾಖಲಿಸಿದ್ದಾರೆ. ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇಟ್ಟು ಪ್ರತಿಭಟನೆ ನಿಲ್ಲಿಸಬೇಕು’ ಎಂದು ಠಾಕೂರ್ ಸೋಮವಾರ ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದ್ದಾರೆ.
ಫೆಡ್ ಕಪ್ ಅಥ್ಲೆಟಿಕ್ಸ್: ಪ್ರಿಯಾ, ಶಶಿ ಫೈನಲ್‌ಗೆ
ರಾಂಚಿ: 26ನೇ ರಾಷ್ಟ್ರೀಯ ಫೆಡ್ ಕಪ್ ಅಥ್ಲೆಟಿಕ್ಸ್‌ನ ಮೊದಲ ದಿನ ಕರ್ನಾಟಕ ಅಥ್ಲೀಟ್‌ಗಳಿಂದ ಉತ್ತಮ ಪ್ರದರ್ಶನ ಮೂಡಿಬಂದಿದೆ. ಪುರುಷರ 100 ಮೀ. ಓಟದಲ್ಲಿ ಶಶಿಕಾಂತ್ ವಿರೂಪಾಕ್ಷ, ಮಹಿಳೆಯರ 100 ಮೀ. ಓಟದಲ್ಲಿ ಕಾವೇರಿ ಲಕ್ಷ್ಮಣಗೌಡ, ದಾನೇಶ್ವರಿ ಎ.ಟಿ., ಮಹಿಳೆಯರ 400 ಮೀ. ಓಟದಲ್ಲಿ ಪ್ರಿಯಾ ಮೋಹನ್, ಪುರುಷರ 400 ಮೀ. ಓಟದಲ್ಲಿ ಮಿಜೊ ಚಾಕೊ ಕುರಿಯನ್, ನಿಹಾಲ್ ಜೋಯೆಲ್, ಪುರುಷರ ಲಾಂಗ್ ಜಂಪ್‌ನಲ್ಲಿ ಸಿದ್ಧಾಥ್‌ರ್ ನಾಯ್‌್ಕ ಫೈನಲ್ ಪ್ರವೇಶಿಸಿದ್ದಾರೆ.
ಬೆಂಗಳೂರು 10ಕೆ ಓಟಕ್ಕೆ ದೇಶದ ತಾರಾ ಅಥ್ಲೀಟ್ಸ್
ಬೆಂಗಳೂರು: ಅಭಿಷೇಕ್ ಪಾಲ್, ಸಂಜೀವನಿ ಜಾಧವ್, ಕಾರ್ತಿಕ್ ಕುಮಾರ್, ಗುಲ್ವೀರ್ ಸಿಂಗ್ ಸೇರಿ ಭಾರತದ ಹಲವು ತಾರಾ ಓಟಗಾರರು ಮೇ 21ರಂದು ನಡೆಯಲಿರುವ ವಿಶ್ವ 10ಕೆ ಬೆಂಗಳೂರು ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಬಾರಿ ಮೊದಲ ಸ್ಥಾನ ಪಡೆಯುವ ಓಟಗಾರರಿಗೆ 2.75 ಲಕ್ಷ ರು. ಬಹುಮಾನ ದೊರೆಯಲಿದ್ದು, 1 ಲಕ್ಷ ರು. ಬೋನಸ್ ಸಹ ಸಿಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಸುದೀರ್‌ಮನ್ ಕಪ್: ಭಾರತ ತಂಡ ಹೊರಕ್ಕೆ!
ಸುಝೋ(ಚೀನಾ): ಸುದೀರ್‌ಮನ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಿಂದ ಭಾರತ ತಂಡ ಹೊರಬಿದ್ದಿದೆ. ಸೋಮವಾರ ‘ಸಿ’ ಗುಂಪಿನ ತನ್ನ 2ನೇ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ 0-5 ಹೀನಾಯ ಸೋಲು ಅನುಭವಿಸಿತು. ಮಿಶ್ರ ಡಬಲ್ಸ್‌ನಲ್ಲಿ ಅಶ್ವಿನಿ-ಧೃವ್, ಸಿಂಗಲ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್, ಪಿ.ವಿ.ಸಿಂಧು, ಡಬಲ್ಸ್‌ನಲ್ಲಿ ಸಾತ್ವಿಕ್-ಚಿರಾಗ್ ಶೆಟ್ಟಿ, ಗಾಯತ್ರಿ ಗೋಪಿಚಂದ್-ತ್ರೀಸಾ ಜಾಲಿ ಸೋಲುಂಡರು. ಮೊದಲ ಪಂದ್ಯದಲ್ಲಿ ಚೈನೀಸ್ ತೈಪೆ ವಿರುದ್ಧ ಸೋತಿದ್ದ ಭಾರತ ಬುಧವಾರ ತನ್ನ ಅಂತಿಮ ಪಂದ್ಯದಲ್ಲಿ ಆಸ್ಪ್ರೇಲಿಯಾ ವಿರುದ್ಧ ಆಡಲಿದೆ. ಕಳೆದ ಆವೃತ್ತಿಯಲ್ಲೂ ಭಾರತ ಗುಂಪು ಹಂತದಲ್ಲೇ ಹೊರಬಿದ್ದಿತ್ತು.