ರಿಯೊ ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್ ಸೇರಿದಂತೆ 25 ಮಂದಿ ಕುಸ್ತಿಪಟುಗಳನ್ನು ಭಾರತೀಯ ಕುಸ್ತಿ ಫೆಡರೇಷನ್, ಶಿಬಿರದಿಂದಲೇ ಹೊರಹಾಕಿದೆ. ಯಾಕೆ ಹೀಗೆ..? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್...
ನವದೆಹಲಿ[ಆ.20]: ಹೇಳದೆ ಕೇಳದೆ ರಾಷ್ಟ್ರೀಯ ಶಿಬಿರದಿಂದ ಹೊರಹೋದ ಒಲಿಂಪಿಕ್ ಕಂಚು ವಿಜೇತ ಕುಸ್ತಿಪಟು ಸಾಕ್ಷಿ ಮಲಿಕ್ ಸೇರಿದಂತೆ 25 ಮಂದಿಯನ್ನು ಭಾರತೀಯ ಕುಸ್ತಿ ಫೆಡರೇಷನ್, ಶಿಬಿರದಿಂದಲೇ ಹೊರಹಾಕಿದೆ. ಈ ಮೂಲಕ ಯಾರೇ ಆಗಲಿ ಶಿಸ್ತು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವ ಸಂದೇಶವನ್ನು ರವಾನಿಸಿದೆ.
ಕುಸ್ತಿಪಟು ಭಜರಂಗ್‌ಗೆ ಖೇಲ್‌ರತ್ನ ಖಚಿತ
ಲಖನೌನ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ಕೇಂದ್ರದಲ್ಲಿ ನಡೆಯುತ್ತಿದ್ದ ರಾಷ್ಟ್ರೀಯ ಶಿಬಿರದಲ್ಲಿ 45 ಮಹಿಳಾ ಕುಸ್ತಿಪಟುಗಳು ಪಾಲ್ಗೊಂಡಿದ್ದರು. ಈ ಪೈಕಿ 25 ಮಂದಿ, ಫೆಡರೇಷನ್‌ನ ಅನುಮತಿ ಇಲ್ಲದೆ ಶಿಬಿರಕ್ಕೆ ಗೈರಾಗಿದ್ದಾರೆ. ಸಾಕ್ಷಿ, ಸೀಮಾ ಬಿಸ್ಲಾ ಹಾಗೂ ಕಿರಣ್ ವಿಶ್ವ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದು, ಅವರಿಗೆ ಫೆಡರೇಷನ್ ಶೋ ಕಾಸ್ ನೋಟಿಸ್ ಜಾರಿ ಮಾಡಿದೆ. ನೋಟಿಸ್‌ಗೆ ಬುಧವಾರದೊಳಗೆ ಉತ್ತರಿಸುವಂತೆ ಸೂಚಿಸಿದೆ. ಇನ್ನುಳಿದವರನ್ನು ಶಿಬಿರದಿಂದಲೇ ಹೊರಹಾಕಲಾಗಿದೆ. ಸಾಕ್ಷಿ ಸೇರಿ ಮೂವರನ್ನು ವಿಶ್ವ ಚಾಂಪಿಯನ್‌ಶಿಪ್ ತಂಡದಿಂದಲೂ ಕೈಬಿಡುವ ಸಾಧ್ಯತೆ ಇದೆ.
ಭಾರತೀಯ ಕುಸ್ತಿ ಫೆಡರೇಷನ್‌ನ ಕಾರ್ಯದರ್ಶಿ ವಿನೋದ್ ತೋಮರ್ ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಸಾಕ್ಷಿ ಸೇರಿದಂತೆ ಮೂವರಿಗೆ ನೋಟಿಸ್ ನೀಡಿದ್ದೇವೆ. ಉಳಿದವರ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಅವರನ್ನು ಹೊರಹಾಕಲಾಗಿದೆ. ಅಶಿಸ್ತು ತೋರಿದರೆ ಯಾರೇ ಆದರೂ ಸರಿ, ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಮಾಹಿತಿ ನೀಡದೆ ಶಿಬಿರ ತೊರೆದವರು ಈಗ ತಾಯಿಗೆ ಹುಷಾರಿಲ್ಲ, ಇತ್ಯಾದಿ ಕಾರಣಗಳನ್ನು ನೀಡುತ್ತಿದ್ದಾರೆ. ಆದರೆ ಅದನ್ನೆಲ್ಲಾ ಒಪ್ಪಲು ಸಾಧ್ಯವಿಲ್ಲ. ಅವರನ್ನು ಶಿಬಿರಕ್ಕೆ ಮತ್ತೆ ಸೇರಿಸಿಕೊಳ್ಳಬೇಕೆ ಎನ್ನುವುದನ್ನು ಮುಂದಿನ ದಿನಗಳಲ್ಲಿ ನಿರ್ಧರಿಸುತ್ತೇವೆ’ ಎಂದಿದ್ದಾರೆ.