ಧನಲಕ್ಷ್ಮಿ ಶೇಖರ್ ಉದ್ದೀಪನಾ ಮದ್ದು ಸೇವನೆ ವಿಚಾರ ಸಾಬೀತು
ವಿಶ್ವ ಅಥ್ಲೆಟಿಕ್ಸ್‌ನ ಸಮಗ್ರತಾ ಘಟಕದಿಂದ ಧನಲಕ್ಷ್ಮಿ ಶೇಖರ್‌ಗೆ 3 ವರ್ಷ ನಿಷೇಧ
ಧನಲಕ್ಷ್ಮಿ ತಪ್ಪೊಪ್ಪಿಕೊಂಡ ಕಾರಣ ಶಿಕ್ಷೆ ಪ್ರಮಾಣ ಕೊಂಚ ಕಡಿತ
ನವದೆಹಲಿ(ಆ.03): ಭಾರತದ ಅಗ್ರ ಓಟಗಾರ್ತಿ ಧನಲಕ್ಷ್ಮಿ ಶೇಖರ್ ಉದ್ದೀಪನಾ ಮದ್ದು ಸೇವನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದು ವಿಶ್ವ ಅಥ್ಲೆಟಿಕ್ಸ್‌ನ ಸಮಗ್ರತಾ ಘಟಕ 3 ವರ್ಷ ನಿಷೇಧ ಹೇರಿದೆ. ಇದೇ ವರ್ಷ ಮೇ 2ರಂದು ಟರ್ಕಿಯ ಅಂತಾಲ್ಯದಲ್ಲಿ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಂಡಿದ್ದ ವೇಳೆ ಧನಲಕ್ಷ್ಮಿ ಅವರ ರಕ್ತ ಮತ್ತು ಮೂತ್ರದ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ವಿಶ್ವ ಉದ್ದೀಪನಾ ಮದ್ದು ನಿಗ್ರಹ ಘಟಕ(ವಾಡಾ) ಸ್ವಿಜರ್‌ಲೆಂಡ್‌ನ ಲುಸ್ಸಾನೆಯಲ್ಲಿರುವ ತಮ್ಮ ಪ್ರಯೋಗಾಲಯದಲ್ಲಿ ನಡೆಸಿದ ಪರೀಕ್ಷೆ ವೇಳೆ ಅವರು ನಿಷೇಧಿತ ಮೆಟಾನ್ಡಿಯೊನೊನ್ ಸ್ಟೆರಾಯ್ಡ್ ಪಡೆದಿರುವುದು ಖಚಿತವಾಗಿದೆ. ಈ ರೀತಿಯ ಪ್ರಕರಣಗಳಲ್ಲಿ ಸಾಮಾನ್ಯವಾಗಿ 4 ವರ್ಷ ನಿಷೇಧ ಹೇರಲಾಗುತ್ತದೆ. ಆದರೆ 24 ವರ್ಷದ ಧನಲಕ್ಷ್ಮಿ ತಪ್ಪೊಪ್ಪಿಕೊಂಡ ಕಾರಣ ಶಿಕ್ಷೆ ಪ್ರಮಾಣವನ್ನು ಕಡಿತಗೊಳಿಸಲಾಗಿದೆ.
ಮಹಿಳಾ ಹಾಕಿ: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಸೋಲು
ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಮಹಿಳಾ ಹಾಕಿ ತಂಡ ಮಂಗಳವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ವಿಶ್ವ ನಂ.5 ಇಂಗ್ಲೆಂಡ್ ವಿರುದ್ಧ 1-3 ಗೋಲುಗಳಲ್ಲಿ ಸೋಲನುಭವಿಸಿತು. ಗುಂಪಿನಲ್ಲಿ 3ನೇ ಸ್ಥಾನದಲ್ಲಿರುವ ಭಾರತ, ಬುಧವಾರ ಅಂತಿಮ ಪಂದ್ಯದಲ್ಲಿ ಕೆನಡಾ ವಿರುದ್ಧ ಸೆಣಸಲಿದ್ದು, ಸೆಮಿಫೈನಲ್‌ಗೆ ಪ್ರವೇಶಿಸಬೇಕಿದ್ದರೆ ಗೆಲುವು ಸಾಧಿಸಬೇಕಿದೆ.
ವೇಟ್‌ಲಿಫ್ಟಿಂಗ್: ವಿಕಾಸ್‌ಗೆ ಬೆಳ್ಳಿ, ಕಂಚು ಗೆದ್ದ ಹರ್ಜಿಂದರ್ ಕೌರ್
ಬರ್ಮಿಂಗ್‌ಹ್ಯಾಮ್: ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಮಂಗಳವಾರ ಪುರುಷರ 96 ಕೆ.ಜಿ. ವಿಭಾಗದಲ್ಲಿ ವಿಕಾಸ್ ಠಾಕೂರ್, ಮಹಿಳೆಯರ 71 ಕೆ.ಜಿ. ವಿಭಾಗದಲ್ಲಿ ಹರ್ಜಿಂದರ್ ಕೌರ್ ಪದಕ ಗೆದ್ದರು. ಅನುಭವಿ ಲಿಫ್ಟರ್ ವಿಕಾಸ್ ಒಟ್ಟು 346 ಕೆ.ಜಿ. (ಸ್ನಾ್ಯಚ್‌ನಲ್ಲಿ 155 ಕೆ.ಜಿ.+ಕ್ಲೀನ್ ಅಂಡ್ ಜರ್ಕ್ನಲ್ಲಿ 191 ಕೆ.ಜಿ) ಭಾರ ಎತ್ತಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 3ನೇ ಪದಕ ಜಯಿಸಿದರು. ಸಮೊವಾ ದೇಶದ ಡಾನ್ ಒಪೆಲೊಜೆ 381 ಕೆ.ಜಿ.(171 ಕೆ.ಜಿ.+210 ಕೆ.ಜಿ.) ಚಿನ್ನ ಗೆದ್ದರೆ, ಫಿಜಿಯ ತನಿಯೆಲಾ ತುಯಿಸುವ 381 ಕೆ.ಜಿ. ಭಾರ ಎತ್ತಿ ಕಂಚು ಜಯಿಸಿದರು. ವಿಕಾಸ್‌ಗಿದು ಕ್ರೀಡಾಕೂಟದಲ್ಲಿ 2ನೇ ಬೆಳ್ಳಿ. 2014ರ ಗ್ಲಾಸ್ಗೋ ಗೇಮ್ಸ್‌ನಲ್ಲಿ ರಜತ ಗೆದ್ದಿದ್ದ ಅವರು, 2018ರ ಗೋಲ್ಡ್‌ಕೋಸ್ಟ್ ಗೇಮ್ಸ್‌ನಲ್ಲಿ ಕಂಚಿಗೆ ತೃಪ್ತಿಪಟ್ಟಿದ್ದರು.
Commonwealth Games 2022: ಬೆಳ್ಳಿ ಪದಕ ಗೆದ್ದ ಭಾರತ ಬ್ಯಾಡ್ಮಿಂಟನ್ ಮಿಶ್ರ ತಂಡ..!
ಇನ್ನು ಹರ್ಜಿಂದರ್ ಕೌರ್‌ಗೆ ಅದೃಷ್ಟತಮ್ಮ ಪರವಾಗಿದ್ದ ಕಾರಣ ಪದಕ ಒಲಿಯಿತು. ಚಿನ್ನ ಗೆಲ್ಲುವ ನೆಚ್ಚಿನ ಲಿಫ್ಟರ್ ಎನಿಸಿದ್ದ ನೈಜೀರಿಯಾದ ಜಾಯ್ ಏಜೆ ಕ್ಲೀನ್ ಅಂಡ್ ಜರ್ಕ್ನ ಮೂರೂ ಯತ್ನಗಳಲ್ಲಿ ವೈಫಲ್ಯ ಕಂಡಿದ್ದು ಹರ್ಜಿಂದರ್‌ಗೆ ಅನುಕೂಲವಾಯಿತು. ಇಂಗ್ಲೆಂಡ್‌ನ ಸಾರಾ ಡೇವಿಸ್ ಒಟ್ಟು 229 ಕೆ.ಜಿ. ಚಿನ್ನ ಗೆದ್ದರೆ, ಕೆನಡಾದ ಅಲೆಕ್ಸಿಸ್ ಆಶ್‌ವಥ್‌ರ್ 214 ಕೆ.ಜಿ.ಗಳೊಂದಿಗೆ ಬೆಳ್ಳಿ ಜಯಿಸಿದರು. ಹರ್ಜಿಂದರ್ ಒಟ್ಟು 212 ಕೆ.ಜಿ.(ಸ್ನಾ್ಯಚ್‌ನಲ್ಲಿ 93 ಕೆ.ಜಿ.+ಕ್ಲೀನ್ ಅಂಡ್ ಜರ್ಕ್ನಲ್ಲಿ 119 ಕೆ.ಜಿ.) ಭಾರ ಎತ್ತಿ ಪದಕ ಖಚಿತಪಡಿಸಿಕೊಂಡರು.
ಚೆಸ್ ಒಲಿಂಪಿಯಾಡ್: ಭಾರತ ತಂಡಕ್ಕೆ ಮುನ್ನಡೆ
ಮಹಾಬಲಿಪುರಂ: 44ನೇ ಆವೃತ್ತಿಯ ಚೆಸ್ ಒಲಿಂಪಿಯಾಡ್ 5ನೇ ಸುತ್ತಿನಲ್ಲಿ ಭಾರತದ 6 ತಂಡಗಳ ಪೈಕಿ 4 ತಂಡಗಳು ಗೆಲುವು ಸಾಧಿಸಿವೆ. ಮುಕ್ತ ವಿಭಾಗದಲ್ಲಿ ಭಾರತ ‘ಎ’ ತಂಡ ರೊಮೇನಿಯಾ ವಿರುದ್ಧ 2.5-1.5ರಲ್ಲಿ ಗೆದ್ದರೆ, ‘ಬಿ’ ತಂಡ ಸ್ಪೇನ್ ವಿರುದ್ಧ ಇದೇ ಅಂತರದಲ್ಲಿ ಜಯಿಸಿತು. ಇನ್ನು ಭಾರತ ‘ಸಿ’ ತಂಡ ಚಿಲಿ ವಿರುದ್ಧ 2.5-1.5ರಲ್ಲಿ ಗೆಲುವು ಪಡೆಯಿತು. ಮಹಿಳೆಯರ ವಿಭಾಗದಲ್ಲಿ ಭಾರತ ‘ಎ’ ತಂಡ ಫ್ರಾನ್ಸ್ ವಿರುದ್ಧ 2.5-1.5ರಲ್ಲಿ ಗೆದ್ದರೆ, ‘ಬಿ’ ತಂಡ ಜಾರ್ಜಿಯಾ ವಿರುದ್ಧ 1-3ರಲ್ಲಿ ಪರಾಭವಗೊಂಡಿತು. ‘ಸಿ’ ತಂಡ ಬ್ರೆಜಿಲ್ ವಿರುದ್ಧ 2-2ರ ಡ್ರಾಗೆ ತೃಪ್ತಿಪಟ್ಟಿತು. ಮುಕ್ತ/ಪುರುಷರ ವಿಭಾಗದ ಅಂಕಪಟ್ಟಿಯಲ್ಲಿ ಭಾರತ ‘ಬಿ’, ಮಹಿಳಾ ವಿಭಾಗದಲ್ಲಿ ಭಾರತ ‘ಎ’ ತಂಡ ಮೊದಲ ಸ್ಥಾನದಲ್ಲಿವೆ.