ಆರ್'ಸಿಬಿಗೆ ಗುರು ಗ್ಯಾರಿ, ನೆಹ್ರಾ ಕೋಚ್

By Suvarna Web DeskFirst Published Jan 3, 2018, 12:32 PM IST
Highlights

ದಕ್ಷಿಣ ಆಫ್ರಿಕಾದ ಮಾಜಿ ಆರಂಭಿಕ ಬ್ಯಾಟ್ಸ್‌'ಮನ್, 2011ರ ವಿಶ್ವಕಪ್ ವಿಜೇತ ಭಾರತ ತಂಡದ ಕೋಚ್ ಗ್ಯಾರಿ ಕರ್ಸ್ಟನ್ ಹಾಗೂ ಭಾರತದ ಮಾಜಿ ವೇಗದ ಬೌಲರ್ ಆಶಿಶ್ ನೆಹ್ರಾ, ಆರ್‌ಸಿಬಿ ಸೇರಿಕೊಂಡಿದ್ದಾರೆ. ಕರ್ಸ್ಟನ್ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡಿದ್ದರೆ, ನೆಹ್ರಾಗೆ ಬೌಲಿಂಗ್ ಕೋಚ್ ಹುದ್ದೆ ನೀಡಲಾಗಿದೆ. ಇಬ್ಬರೂ ತಂಡದ ಮಾರ್ಗದರ್ಶಕರಾಗಿಯೂ(ಮೆಂಟರ್) ಕಾರ್ಯನಿರ್ವಹಿಸಲಿದ್ದಾರೆ ಎಂದು ಆರ್‌'ಸಿಬಿ ತಂಡದ ಆಡಳಿತ ತಿಳಿಸಿದೆ.

ಬೆಂಗಳೂರು(ಜ.03): ಇಂಡಿಯನ್ ಪ್ರೀಮಿಯರ್ ಲೀಗ್ 11ನೇ ಆವೃತ್ತಿಗೆ ಪ್ರತಿ ತಂಡಗಳು ಸಿದ್ಧತೆ ಆರಂಭಿಸಿದ್ದು, ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತನ್ನ ಸಹಾಯಕ ಸಿಬ್ಬಂದಿಯಾಗಿ ಇಬ್ಬರು ದಿಗ್ಗಜ ಕ್ರಿಕೆಟಿಗರನ್ನು ನೇಮಕ ಮಾಡಿಕೊಂಡಿದೆ.

ದಕ್ಷಿಣ ಆಫ್ರಿಕಾದ ಮಾಜಿ ಆರಂಭಿಕ ಬ್ಯಾಟ್ಸ್‌'ಮನ್, 2011ರ ವಿಶ್ವಕಪ್ ವಿಜೇತ ಭಾರತ ತಂಡದ ಕೋಚ್ ಗ್ಯಾರಿ ಕರ್ಸ್ಟನ್ ಹಾಗೂ ಭಾರತದ ಮಾಜಿ ವೇಗದ ಬೌಲರ್ ಆಶಿಶ್ ನೆಹ್ರಾ, ಆರ್‌ಸಿಬಿ ಸೇರಿಕೊಂಡಿದ್ದಾರೆ. ಕರ್ಸ್ಟನ್ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡಿದ್ದರೆ, ನೆಹ್ರಾಗೆ ಬೌಲಿಂಗ್ ಕೋಚ್ ಹುದ್ದೆ ನೀಡಲಾಗಿದೆ. ಇಬ್ಬರೂ ತಂಡದ ಮಾರ್ಗದರ್ಶಕರಾಗಿಯೂ(ಮೆಂಟರ್) ಕಾರ್ಯನಿರ್ವಹಿಸಲಿದ್ದಾರೆ ಎಂದು ಆರ್‌'ಸಿಬಿ ತಂಡದ ಆಡಳಿತ ತಿಳಿಸಿದೆ.

ಕರ್ಸ್ಟನ್ ಕಳೆದ ವಾರ ಒಪ್ಪಂದಕ್ಕೆ ಸಹಿ ಹಾಕಿದ್ದು, ಐಪಿಎಲ್‌'ನಲ್ಲಿ ಅವರು 2ನೇ ಬಾರಿಗೆ ಕೋಚ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. 2015ರಲ್ಲಿ ಕರ್ಸ್ಟನ್, ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು. ಆಶಿಶ್ ನೆಹ್ರಾಗಿದು ಕೋಚ್ ಆಗಿ ಮೊದಲ ಅನುಭವ. ಈ ಹಿಂದೆ ಪುಣೆ ವಾರಿಯರ್ಸ್‌, ಚೆನ್ನೈ ಸೂಪರ್ ಕಿಂಗ್ಸ್ ಪರ ಅವರು ಐಪಿಎಲ್‌'ನಲ್ಲಿ ಆಡಿದ್ದರು. ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನೆಹ್ರಾ ನಿವೃತ್ತಿ ಪಡೆದಿದ್ದರು. ನೆಹ್ರಾ ಆರ್‌'ಸಿಬಿ ಬೌಲಿಂಗ್ ಆಗಲಿದ್ದಾರೆ ಎನ್ನುವ ಚರ್ಚೆ ಕಳೆದ ತಿಂಗಳೇ ಆರಂಭ

ಗೊಂಡಿತ್ತು. ಇದೇ ವೇಳೆ ಬ್ಯಾಟಿಂಗ್ ಕೋಚ್ ಹುದ್ದೆಯನ್ನು ಗ್ಯಾರಿ ಕರ್ಸ್ಟನ್ ಅಲಂಕರಿಸಲಿದ್ದಾರೆ ಎನ್ನುವ ಸುದ್ದಿ ಸಹ ಕೆಲ ವಾರಗಳ ಹಿಂದೆಯೇ ಹೊರಬಿದ್ದಿತ್ತು. ಆರ್‌'ಸಿಬಿ ನಾಯಕರಾಗಿರುವ ವಿರಾಟ್ ಕೊಹ್ಲಿಯೊಂದಿಗೆ ನೆಹ್ರಾ ಉತ್ತಮ ಬಾಂಧವ್ಯ ಹೊಂದಿದ್ದು, ಅವರೇ ನೆಹ್ರಾರನ್ನು ಬೌಲಿಂಗ್ ಕೋಚ್ ಆಗಿ ನೇಮಕ ಮಾಡಿಕೊಳ್ಳುವಂತೆ ತಂಡದ ಮಾಲೀಕರಿಗೆ ಶಿಫಾರಸು ಮಾಡಿದ್ದರು ಎನ್ನಲಾಗಿದೆ. ಕರ್ಸ್ಟನ್ ಕೋಚ್ ಆಗಿದ್ದ ವೇಳೆಯೇ ಕೊಹ್ಲಿ ಭಾರತ ತಂಡದಲ್ಲಿ ಆಡಲು ಅವಕಾಶ ಪಡೆದಿದ್ದು. ಭಾರತ ತಂಡದ ಕೋಚ್ ಸ್ಥಾನ ತೊರೆದ ಬಳಿಕವೂ, ಕರ್ಸ್ಟನ್ ಅನೇಕ ಬಾರಿ ಕೊಹ್ಲಿಯ ಆಟ, ನಾಯಕತ್ವದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದರು.

ವೆಟ್ಟೋರಿ ಸ್ಥಾನ ಭದ್ರ: 2014ರಿಂದ ತಂಡದ ಪ್ರಧಾನ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿರುವ ನ್ಯೂಜಿಲೆಂಡ್‌'ನ ಮಾಜಿ ಸ್ಪಿನ್ನರ್, ಆರ್‌'ಸಿಬಿ ಮಾಜಿ ನಾಯಕ ಡೇನಿಯಲ್ ವೆಟ್ಟೋರಿ ಅವರ ಸೇವೆಯನ್ನು ಮುಂದುವರಿಸಲು ತಂಡದ ಮಾಲೀಕರು ನಿರ್ಧರಿಸಿದ್ದಾರೆ. ಫೀಲ್ಡಿಂಗ್ ಕೋಚ್ ಆಗಿ ಟ್ರೆಂಟ್ ವುಡ್ ಹಿಲ್ ಮುಂದುವರಿದರೆ, ಈ ಮೊದಲು ಬೌಲಿಂಗ್ ಕೋಚ್ ಆಗಿದ್ದ ಆಸ್ಟ್ರೇಲಿಯಾದ ಆ್ಯಂಡ್ರೊ ಮೆಕ್‌'ಡೊನಾಲ್ಡ್‌'ಗೆ ಬೌಲಿಂಗ್ ಪ್ರತಿಭಾ ವಿಕಸನ ಹಾಗೂ ವಿಶ್ಲೇಷಣೆ ಕೋಚ್ ಹುದ್ದೆ ನೀಡಲಾಗಿದೆ. ಕರ್ಸ್ಟನ್ ಹಾಗೂ ನೆಹ್ರಾ ನೇಮಕದ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಧಾನ ಕೋಚ್ ವೆಟ್ಟೋರಿ, ‘ಇಬ್ಬರು ಶ್ರೇಷ್ಠ ಕ್ರಿಕೆಟಿಗರೊಂದಿಗೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ. ಇಬ್ಬರೂ ಸಹ ಅಪಾರ ಅನುಭವ ಹೊಂದಿದ್ದಾರೆ. ಇವರಿಂದ ಆಟಗಾರರಿಗೆ ಹೆಚ್ಚಿನ ಮಟ್ಟದಲ್ಲಿ ನೆರವಾಗಲಿದೆ’ ಎಂದಿದ್ದಾರೆ.

ಕಳೆದ 10 ವರ್ಷಗಳಿಂದ ತಂಡ ಐಪಿಎಲ್'ನಲ್ಲಿ ಆಡುತ್ತಿದ್ದರೂ ಒಮ್ಮೆಯೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ. ಆರ್‌'ಸಿಬಿ 3 ಬಾರಿ ಫೈನಲ್‌'ಗೇರಿ, ಪ್ರಶಸ್ತಿ ಗೆಲುವಿನಿಂದ ವಂಚಿತಗೊಂಡಿತ್ತು. 11ನೇ ಆವೃತ್ತಿಯಲ್ಲಿ ತಂಡ ಟ್ರೋಫಿ ಗೆಲ್ಲಲು ಕಸರತ್ತು ಆರಂಭಿಸಿದೆ.

click me!