ವಿರಾಟ್ ಪಡೆಗೆ ಡಿಎನ್'ಎ ಟೆಸ್ಟ್; ಕ್ರಿಕೆಟ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು

By Suvarna Web DeskFirst Published Nov 13, 2017, 3:12 PM IST
Highlights

ಭಾರತೀಯ ಕ್ರಿಕೆಟ್ ಹೊಸ ಫಿಟ್ನೆಸ್ ಪದ್ಧತಿಯನ್ನು ಅಳವಡಿಸಿಕೊಂಡ ಬಳಿಕ, ತಂಡದ ಪ್ರದರ್ಶನ ಗುಣಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.

ನವದೆಹಲಿ(ನ.13): ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಫಿಟ್ನೆಸ್‌'ನತ್ತ ಅತಿಹೆಚ್ಚು ಗಮನ ನೀಡುತ್ತಿದ್ದು, ಇದೀಗ ಭಾರತೀಯ ಕ್ರಿಕೆಟಿಗರು ‘ಡಿಎನ್‌ಎ’ ಪರೀಕ್ಷೆಗೆ ಒಳಗಾಗುತ್ತಿದ್ದಾರೆ.

ಅನುವಂಶಿಕ ಫಿಟ್ನೆಸ್ ಪರೀಕ್ಷೆ ನಡೆಸಲು ಬಿಸಿಸಿಐ ಆರಂಭಿಸಿದ್ದು, ಪ್ರತಿಯೊಬ್ಬ ಆಟಗಾರನ ದೈಹಿಕ ಸಾಮರ್ಥ್ಯವನ್ನು ಇಂಚಿಂಚು ಅಳೆಯಲು ನಿರ್ಧರಿಸಿದೆ. ಕ್ರಿಕೆಟ್‌'ನಲ್ಲಿ ಈ ಹಿಂದೆ ಕೇಳರಿಯದ ರೀತಿಯ ಫಿಟ್ನೆಸ್ ಪದ್ಧತಿಗಳನ್ನು ಅಳವಡಿಸುತ್ತಿರುವ ಬಿಸಿಸಿಐ, ಪ್ರತಿ ತಂಡಕ್ಕೂ ಮಾದರಿಯಾಗುತ್ತಿದೆ. ಭಾರತ ತಂಡದ ಟ್ರೈನರ್ ಶಂಕರ್ ಬಸು ಸೂಚನೆ ಮೇರೆಗೆ ಬಿಸಿಸಿಐ ಈ ಪರೀಕ್ಷೆಯನ್ನು ನಡೆಸಲು ನಿರ್ಧರಿಸಿತು ಎನ್ನಲಾಗಿದೆ.

ಡಿಎನ್‌ಎ ಪರೀಕ್ಷೆಯನ್ನು ಎನ್‌'ಬಿಎ(ಬಾಸ್ಕೆಟ್ ಬಾಲ್) ಹಾಗೂ ಅಮೆರಿಕದ ಎನ್‌ಎಫ್‌ಎಲ್ ಟೂರ್ನಿಗಳಲ್ಲಿ ಮೊದಲು ನಡೆಸಲಾಯಿತು. ಇದೀಗ ಹಲವು ವೃತ್ತಿಪರ ಕ್ರೀಡೆಗಳಲ್ಲಿ ಈ ಪರೀಕ್ಷೆ ಚಾಲ್ತಿಯಲ್ಲಿದೆ. ಆದರೆ ಕ್ರಿಕೆಟ್‌'ನಲ್ಲಿ ಇದರ ಪ್ರಯೋಗ ನಡೆಸುತ್ತಿರುವ ಮೊದಲ ತಂಡ ಭಾರತ. ಈ ಪರೀಕ್ಷೆ ನಡೆಸಲು ಬಿಸಿಸಿಐಗೆ ₹25,000-₹30,000 ಖರ್ಚಾಗಲಿದೆ. ಈ ಹಿಂದೆ ದೇಹದಲ್ಲಿರುವ ಕೊಬ್ಬಿನಂಶದ ಪ್ರಮಾಣವನ್ನು ಅಳೆಯಲು ‘ಸ್ಕಿನ್ ಫೋಲ್ಡ್’ ಪರೀಕ್ಷೆ ನಡೆಸಲಾಗುತ್ತಿತ್ತು. ಬಳಿಕ ‘ಡೆಕ್ಸ್' ಪರೀಕ್ಷೆಯನ್ನು ಅಳವಡಿಸಿಕೊಳ್ಳಲಾಗಿತ್ತು. ಡಿಎನ್‌'ಎ ಪರೀಕ್ಷೆಯಿಂದ ಆಟಗಾರರ ದೇಹದಲ್ಲಿ ಎಷ್ಟು ಪ್ರಮಾಣದ ಕೊಬ್ಬಿನಂಶ ಇದೆ ಎನ್ನುವುದು ಸಹ ನಿಖರವಾಗಿ ತಿಳಿಯಲಿದೆ. ಭಾರತ ಸೇರಿದಂತೆ ಹಲವು ಅಂತರಾಷ್ಟ್ರೀಯ ಕ್ರಿಕೆಟ್ ತಂಡಗಳು ಈ ಮಿತಿಯನ್ನು ಶೇ.23ಕ್ಕೆ ನಿಗದಿ ಪಡಿಸಿವೆ.

ಹೊಸ ಫಿಟ್ನೆಸ್ ಪದ್ಧತಿಯಿಂದ ಗುಣಮಟ್ಟ ಹೆಚ್ಚಳ:

ಭಾರತೀಯ ಕ್ರಿಕೆಟ್ ಹೊಸ ಫಿಟ್ನೆಸ್ ಪದ್ಧತಿಯನ್ನು ಅಳವಡಿಸಿಕೊಂಡ ಬಳಿಕ, ತಂಡದ ಪ್ರದರ್ಶನ ಗುಣಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಉದಾಹರಣೆಗೆ ಭುವನೇಶ್ವರ್ ಕುಮಾರ್, ಈ ಮೊದಲು ಪದೇ ಪದೇ ಗಾಯಗೊಳ್ಳುತ್ತಿದ್ದರು. ಆದರೆ ಫಿಟ್ನೆಸ್ ಪದ್ಧತಿ ಬದಲಾದ ಬಳಿಕ ಅವರ ಆಟದ ಗುಣಮಟ್ಟ ದೊಡ್ಡ ಪ್ರಮಾಣದಲ್ಲಿ ಬದಲಾಗಿದೆ. ಚಾಂಪಿಯನ್ಸ್ ಟ್ರೋಫಿಯಿಂದ ಈವರೆಗೂ ಭುವಿ, 19 ಏಕದಿನ ಹಾಗೂ 7 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ.

ಡಿಎನ್‌'ಎ ಪರೀಕ್ಷೆಯ ಲಾಭವೇನು?

ಡಿಎನ್‌'ಎ ಪರೀಕ್ಷೆ ಆಟಗಾರನಿಗೆ ತನ್ನ ವೇಗ, ಬೊಜ್ಜು ಕರಗಿಸುವ ರೀತಿ, ಸಹಿಷ್ಣುತೆ, ಚೇತರಿಸಿಕೊಳ್ಳುವ ಸಮಯ ಹಾಗೂ ದೇಹ ಬೆಳವಣಿಗೆ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಲಿದೆ. ಜತೆಗೆ ಒಬ್ಬ ವ್ಯಕ್ತಿಯ ಫಿಟ್ನೆಸ್, ಆರೋಗ್ಯ, ಪೌಷ್ಟಿಕಾಂಶ 40ಕ್ಕೂ ಹೆಚ್ಚು ಅನುವಂಶಿಕ ಧಾತುಗಳು ಹೇಗೆ ಸಂಬಂಧ ಹೊಂದಿವೆ ಎನ್ನುವುದನ್ನು ತಿಳಿದುಕೊಳ್ಳಲು ನೆರವಾಗಲಿದೆ. ಈ ವರದಿಯನ್ನು ಆಟಗಾರನ ದೇಹದ ತೂಕ, ಆಹಾರ ಪದ್ಧತಿಗೆ ಇವನ್ನೆಲ್ಲಾ ಒಳಗೊಂಡ ವರದಿಗೆ ಹೋಲಿಕೆ ಮಾಡಿ, ಆತನ ಫಿಟ್ನೆಸ್ ಹೆಚ್ಚಲು ಏನು ಅಗತ್ಯವಿದೆ ಎನ್ನುವುದನ್ನು ತಿಳಿದುಕೊಳ್ಳಬಹುದಾಗಿದೆ.

click me!