
ಡುಬ್ಲಿನ್[ಜೂ.29]: ಐರ್ಲೆಂಡ್ ವಿರುದ್ಧದ ಮೊದಲ ಟಿ20ಯಲ್ಲಿ ಅದ್ಭುತ ಜಯ ದೊಂದಿಗೆ ಯುಕೆ ಪ್ರವಾಸವನ್ನು ಭರ್ಜರಿಯಾಗಿ ಆರಂಭಿಸಿರುವ ಭಾರತ, 2 ಪಂದ್ಯಗಳ ಟಿ20 ಸರಣಿ ಮೇಲೆ ಕಣ್ಣೀರಿಸಿದೆ. ಇಂದು ಸರಣಿಯ 2ನೇ ಪಂದ್ಯ ನಡೆಯಲಿದ್ದು, ಇದನ್ನೂ ಗೆಲ್ಲುವ ಮೂಲಕ ಇಂಗ್ಲೆಂಡ್ ವಿರುದ್ಧದ ಸರಣಿಗೂ ಮುನ್ನ ಆತ್ಮವಿಶ್ವಾಸವನ್ನು ಮತ್ತಷ್ಟು ದೃಢಪಡಿಸಿಕೊಳ್ಳುವ ಹುಮ್ಮಸ್ಸಿನಲ್ಲಿದೆ.
ಮೊದಲ ಪಂದ್ಯದಲ್ಲಿ ಸಾಕಷ್ಟು ಪ್ರಯೋಗಗಳ ಮಾಡುವ ಮೂಲಕ ಕೊಹ್ಲಿ ನೇತೃತ್ವದ ಭಾರತ ತಂಡ ಗಮನ ಸೆಳೆದಿತ್ತು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ, ಶಿಖರ್ ಧವನ್ ಐರ್ಲೆಂಡ್ ಬೌಲರ್‌ಗಳ ಚೆಂಡಾಡಿದ್ದರು. ಸುರೇಶ್ ರೈನಾ 3ನೇ ಕ್ರಮಾಂಕದಲ್ಲಿ ಆಡಿದರೆ, ಧೋನಿ 4ನೇ ಕ್ರಮಾಂಕಕ್ಕೆ ಬಡ್ತಿ ನೀಡಿದ್ದರು. ತಂಡದ ನಾಯಕ ವಿರಾಟ್ ಕೊಹ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಮೊದಲ ಪಂದ್ಯದಲ್ಲಿ ಬೆಂಚ್ ಕಾಯ್ದಿದ್ದ ಕೆ.ಎಲ್.ರಾಹುಲ್, ದಿನೇಶ್ ಕಾರ್ತಿಕ್ 2ನೇ ಪಂದ್ಯದಲ್ಲಿ ಆಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಇನ್ನು ಕುಲ್ದೀಪ್ ಯಾದವ್ ಹಾಗೂ ಯಜುವೇಂದ್ರ ಚಹಲ್ ಜೋಡಿ ಮೊದಲ ಪಂದ್ಯದಲ್ಲೇ 7 ವಿಕೆಟ್ ಪಡೆದು ಗಮನ ಸೆಳೆದಿದ್ದರೆ, ವೇಗಿ ಜಸ್‌ಪ್ರೀತ್ ಬುಮ್ರಾ 2 ವಿಕೆಟ್ ಉರುಳಿಸಿ ತಮ್ಮ ಸಾಮರ್ಥ್ಯ ಏನೆಂಬುದನ್ನು ತೋರಿದ್ದರು. ಭುವನೇಶ್ವರ್ ವಿಕೆಟ್ ಪಡೆಯದಿದ್ದರೂ ಉತ್ತಮ ದಾಳಿ ಸಂಘಟಿಸುವಲ್ಲಿ ಯಶಸ್ವಿಯಾಗಿದ್ದರು. ಒಟ್ಟಾರೆ ಒಂದು ತಂಡವಾಗಿ ಉತ್ತಮ ಪ್ರದರ್ಶನ ತೋರಿದ್ದ ವಿರಾಟ್ ಪಡೆ 2ನೇ ಪಂದ್ಯದಲ್ಲೂ ಇದೇ ಲಯ ಮುಂದುವರಿಸುವ ವಿಶ್ವಾಸದಲ್ಲಿದೆ.
ಅತ್ತ ಐರ್ಲೆಂಡ್ ಸಹ ಹೇಗಾದರೂ ಮಾಡಿ ಭಾರತಕ್ಕೆ ತಿರುಗೇಟು ನೀಡಿ ಸರಣಿಯಲ್ಲಿ ಸಮಬಲ ಸಾಧಿಸುವ ಲೆಕ್ಕಾಚಾರದಲ್ಲಿದೆ. ಮೊದಲ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದ ಜೇಮ್ಸ್ ಶಾನನ್ ಮೇಲೆ ತಂಡ ಹೆಚ್ಚು ಅವಲಂಬಿತವಾಗಿದ್ದು, ಉಳಿದ ಬ್ಯಾಟ್ಸ್‌ಮನ್‌ಗಳು ಸಿಡಿಯಬೇಕಿದೆ. ಬೌಲಿಂಗ್ ವಿಭಾಗ ಸಹ ಸಾಕಷ್ಟು ಸುಧಾರಿಸಬೇಕಿದೆ.
ಪಂದ್ಯ: ರಾತ್ರಿ 8.30. ನೇರ ಪ್ರಸಾರ: ಸೋನಿ ಪಿಕ್ಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.