ಭಾರತ-ಇಂಗ್ಲೆಂಡ್ ಟಿ20: ಕೆಲವೇ ಹೊತ್ತಲ್ಲಿ ಶುರುವಾಗಲಿದೆ ಚುಟುಕು ಹೋರಾಟ

First Published Jul 3, 2018, 8:17 PM IST
Highlights

ಭಾರತ-ಇಂಗ್ಲೆಂಡ್ ನಡುವಿನ ಟಿ20 ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂಗ್ಲೆಂಡ್ ನಾಡಿನಲ್ಲಿ ಆಂಗ್ಲರನ್ನ ಮಣಿಸಲು ವಿರಾಟ್ ಕೊಹ್ಲಿ ಸೈನ್ಯ ಭರ್ಜರಿ ತಯಾರಿ ಮಾಡಿಕೊಂಡಿದೆ. ಉಭಯ ತಂಡಗಳಲ್ಲಿ ಯಾರು ಬಲಿಷ್ಠರು? ಯಾರಿಗೆ ಒಲಿಯಲಿದೆ ವಿಜಯಲಕ್ಷ್ಮೀ? ಇಲ್ಲಿದೆ ವಿವರ

ಒಲ್ಡ್ ಟ್ರಾಫೋರ್ಡ್(ಜು.02): ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಸರಣಿ ಇನ್ನು ಕೆಲವೇ ಹೊತ್ತಲ್ಲಿ ಆರಂಭಗೊಳ್ಳಲಿದೆ. ಇಂದು(ಜು.03) ರಾತ್ರಿ 10 ಗಂಟೆಗೆ ಇಂಗ್ಲೆಂಡ್‌ನ ಒಲ್ಡ್ ಟ್ರಾಫೋರ್ಡ್‌ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಆತಿಥೇಯ ಇಂಗ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯ ಆಡಲಿದೆ. 

ಮೇಲ್ನೋಟಕ್ಕೆ ಉಭಯ ತಂಡಗಳು ಸಮಭಲದಿಂದ ಕೂಡಿದೆ. ಆದರೆ ಭಾರತದ ಇಂಜುರಿ ಸಮಸ್ಯೆ ತೊಡಕಾಗಲಿದೆ. ವೇಗಿ ಜಸ್‌ಪ್ರೀತ್ ಬುಮ್ರಾ ಇಂಜುರಿಯಿಂದ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಹೀಗಾಗಿ ಭಾರತ ಡೆತ್ ಓವರ್ ಸ್ಪೆಷಲಿಸ್ಟ್ ಸೇವೆ ಕಳೆದುಕೊಂಡಿದೆ. ಆದರೆ ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಹೊಂದಿರುವ ವಿರಾಟ್ ಕೊಹ್ಲಿ ಸೈನ್ಯ, ಆತಿಥೇಯರಿಗೆ ಕಠಿಣ ಸವಾಲು ನೀಡೋದರಲ್ಲಿ ಅನುಮಾನವಿಲ್ಲ.

ಶಿಖರ್ ಧವನ್,ರೋಹಿತ್ ಶರ್ಮಾ, ನಾಯಕ ವಿರಾಟ್, ಕೆಎಲ್ ರಾಹುಲ್, ಎಂ ಎಸ್ ಧೋನಿ, ಹಾರ್ದಿಕ್ ಪಾಂಡ್ಯ ಸೇರಿದ ಟೀಂ ಇಂಡಿಯಾ ಬ್ಯಾಟಿಂಗ್ ವಿಭಾಗ ಯಾವುದೇ ಎದುರಾಳಿಗೆ ನಡುಕ ಹುಟ್ಟಿಸಬಲ್ಲದು. ಆದರೆ ಬೌನ್ಸಿ ಪಿಚ್‌ ಹಾಗೂ ಇಂಗ್ಲೆಂಡ್ ಕಂಡೀಷನ್‌ನಲ್ಲಿ ಉತ್ತಮ ಪ್ರದರ್ಶನ ನೀಡಬೇಕಾದ ಒತ್ತಡ ತಂಡದ ಮೇಲಿದೆ.

ಜಸ್‌ಪ್ರೀತ್ ಬುಮ್ರಾ ಹಾಗೂ ವಾಶಿಂಗ್ಟನ್ ಸುಂದರ್ ಬದಲು, ಕ್ರುನಾಲ್ ಪಾಂಡ್ಯ ಹಾಗೂ ದೀಪಕ್ ಚಹಾರ್ ತಂಡ ಸೇರಿಕೊಂಡಿದ್ದಾರೆ. ಇನ್ನು ಉಮೇಶ್ ಯಾದವ್ ಹಾಗು ಭುವನೇಶ್ವರ್ ಕುಮಾರ್ ವೇಗದ ಸಾರಥ್ಯವಹಿಸಲಿದ್ದಾರೆ. ಐರ್ಲೆಂಡ್‌ನಲ್ಲಿ ಮೋಡಿ ಮಾಡಿದ ಕುಲದೀಪ್ ಹಾಗೂ ಯಜುವೇಂದ್ರೆ ಚೆಹಾಲ್ ಸ್ಪಿನ್ ಜವಾಬ್ದಾರಿ ನಿರ್ವಹಸಲಿದ್ದಾರೆ.

ಭಾರತ ಐರ್ಲೆಂಡ್ ತಂಡವನ್ನ ಮಣಿಸಿ ಇಂಗ್ಲೆಂಡ್ ನಾಡಿಗೆ ಕಾಲಿಟ್ಟರೆ, ಅತ್ತ ಇಂಗ್ಲೆಂಡ್ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಏಕದಿನ ಹಾಗೂ ಟಿ20 ಸರಣಿ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಜೊತೆಗೆ ತವರಿನ ಕಂಡೀಷನ್ ಹಾಗೂ ಪಿಚ್ ಆತಿಥೇಯರಿಗೆ ಅನೂಕಲವಾಗಲಿದೆ. ಹೀಗಾಗಿ ಮೊದಲ ಟಿ20 ಪಂದ್ಯದಲ್ಲಿ ರೋಚಕ ಹೋರಾಟ ನಿರೀಕ್ಷಿಸಲಾಗಿದೆ.

ಪಂದ್ಯದ ದಿನಾಂಕ: ಜುಲೈ 03, 2018

ಪಂದ್ಯದ ಸಮಯ: ರಾತ್ರಿ 10 ಗಂಟೆ(ಭಾರತೀಯ ಸಮಯ)

ಸ್ಥಳ: ಒಲ್ಡ್ ಟ್ರಾಫೋರ್ಡ್, ಇಂಗ್ಲೆಂಡ್

ನೇರಪ್ರಸಾರ: ಸೋನಿ ಸಿಕ್ಸ್, ಸೋನಿ ಸಿಕ್ಸ್ ಹೆಚ್‌ಡಿ

click me!