
ಬ್ರಿಸ್ಬೇನ್(ನ.21): ಮೈದಾನದೊಳಗೆ ಹಾಗೂ ಹೊರಗೆ ಸಮಸ್ಯೆಗಳ ಮೇಲೆ ಸಮಸ್ಯೆ ಎದುರಿಸುತ್ತಿರುವ ಆಸ್ಪ್ರೇಲಿಯಾವನ್ನು ಬಗ್ಗುಬಡಿದು, ಸತತ 8ನೇ ಟಿ20 ಸರಣಿ ಗೆಲ್ಲಲು ಭಾರತ ತಂಡ ಪಣತೊಟ್ಟಿದೆ. 3 ಪಂದ್ಯಗಳ ಟಿ20 ಸರಣಿಗೆ ಬುಧವಾರ ಇಲ್ಲಿನ ಗಾಬಾ ಕ್ರೀಡಾಂಗಣದಲ್ಲಿ ಚಾಲನೆ ದೊರೆಯಲಿದ್ದು, ಮೊದಲ ಪಂದ್ಯ ಗೆದ್ದು ಸರಣಿಯಲ್ಲಿ ಶುಭಾರಂಭ ಮಾಡಲು ವಿರಾಟ್ ಕೊಹ್ಲಿ ಪಡೆ ಉತ್ಸುಕಗೊಂಡಿದೆ.
ಇದನ್ನೂ ಓದಿ: ಇಂಡೋ-ಆಸಿಸ್ ಕ್ರಿಕೆಟ್ ಸರಣಿ-ಎಲ್ಲಿ?ಯಾವಾಗ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!
ಡಿ.6ರಿಂದ ಆರಂಭಗೊಳ್ಳಲಿರುವ ಬಹುನಿರೀಕ್ಷಿತ ಟೆಸ್ಟ್ ಸರಣಿಗೂ ಮುನ್ನ, ಟಿ20 ಗೆಲುವು ಭಾರತದ ಆತ್ಮವಿಶ್ವಾಸ ಹೆಚ್ಚಿಸಲಿದೆ. ಪ್ರಚಂಡ ಲಯದಲ್ಲಿರುವ ಭಾರತಕ್ಕೆ 2017ರ ನವೆಂಬರ್‌ನಿಂದ ಈ ವರೆಗೂ ಸತತ 7 ಟಿ20 ಸರಣಿಗಳನ್ನು ಗೆದ್ದಿದ್ದು, ಲಯ ಕಾಪಾಡಿಕೊಳ್ಳುವ ವಿಶ್ವಾಸದಲ್ಲಿದೆ. ಮತ್ತೊಂದೆಡೆ ಬಾಲ್ ಟ್ಯಾಂಪರಿಂಗ್ ಪ್ರಕರಣದ ಬಳಿಕ ಆಡಿರುವ 4 ಟಿ20 ಸರಣಿಗಳಲ್ಲೂ ಆಸ್ಪ್ರೇಲಿಯಾ ಸೋಲುಂಡಿದೆ.
ಕಳೆದ ಬಾರಿ ಆಸ್ಪ್ರೇಲಿಯಾ ಪ್ರವಾಸದ ವೇಳೆ ಭಾರತ, ಟಿ20 ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು. ಆ ಗೆಲುವು ತಂಡಕ್ಕೆ ಸ್ಫೂರ್ತಿ ನೀಡಲಿದೆ. ಭಾರತ ತಂಡದಲ್ಲಿ ಆಗಿರುವ ಪ್ರಮುಖ ಬದಲಾವಣೆ ಎಂದರೆ ನಾಯಕ ವಿರಾಟ್ ಕೊಹ್ಲಿ ವಾಪಸಾಗಿದ್ದಾರೆ. ವಿಂಡೀಸ್ ವಿರುದ್ಧ ಸರಣಿಗೆ ಅವರು ವಿಶ್ರಾಂತಿ ಪಡೆದಿದ್ದರು. ಕೊಹ್ಲಿ ಆಗಮನದಿಂದ ತಂಡದ ಬ್ಯಾಟಿಂಗ್ ವಿಭಾಗದ ಬಲ ಹೆಚ್ಚಿದೆ. ರೋಹಿತ್ ಶರ್ಮಾ ಪ್ರಚಂಡ ಲಯದಲ್ಲಿದ್ದು, ಆಸೀಸ್ ಪಾಳಯದಲ್ಲಿ ಭೀತಿ ಮೂಡಿಸಿದ್ದಾರೆ. ಶಿಖರ್ ಧವನ್ ಸಹ ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಉತ್ತಮ ಲಯ ಕಾಪಾಡಿಕೊಂಡಿದ್ದಾರೆ.
ಅಂತಿಮ 12 ಆಟಗಾರರ ಪಟ್ಟಿಬಿಡುಗಡೆ ಮಾಡಿರುವ ಭಾರತ, ಕೆ.ಎಲ್.ರಾಹುಲ್‌ಗೆ ಸ್ಥಾನ ನೀಡಿದೆ. ಇಂಗ್ಲೆಂಡ್‌ನಲ್ಲಿ ರಾಹುಲ್‌ಗೆ 3ನೇ ಕ್ರಮಾಂಕ ಬಿಟ್ಟುಕೊಟ್ಟು ಕೊಹ್ಲಿ 4ರಲ್ಲಿ ಆಡಿದ್ದರು. ಮತ್ತೊಮ್ಮೆ ಅದೇ ಬ್ಯಾಟಿಂಗ್ ಕ್ರಮಾಂಕ ಮುಂದುವರಿಸಲು ತಂಡದ ಆಡಳಿತ ಇಚ್ಛಿಸುತ್ತಾ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ರಿಷಭ್ ಪಂತ್ ವಿಕೆಟ್ ಕೀಪರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಂಡ ಸ್ಪಷ್ಟಪಡಿಸಿದೆ. ದಿನೇಶ್ ಕಾರ್ತಿಕ್ ತಜ್ಞ ಬ್ಯಾಟ್ಸ್‌ಮನ್ ಆಗಿ ಸ್ಥಾನ ಪಡೆದಿದ್ದಾರೆ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸೇವೆ ತಂಡಕ್ಕೆ ಅಲಭ್ಯವಾಗಲಿದ್ದು, ಆ ಪಾತ್ರವನ್ನು ಅವರ ಸಹೋದರ ಕೃನಾಲ್ ಪಾಂಡ್ಯ ನಿಭಾಯಿಸಲಿದ್ದಾರೆ. ಪಿಚ್‌ನಲ್ಲಿ ಬೌನ್ಸ್ ಇರುವ ಕಾರಣ ಜಸ್‌ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್ ಹಾಗೂ ಖಲೀಲ್ ಅಹ್ಮದ್ ಸಹಜವಾಗಿಯೇ ಸ್ಥಾನ ಪಡೆಯಲಿದ್ದಾರೆ. ಯಜುವೇಂದ್ರ ಚಹಲ್ ಹಾಗೂ ಕುಲ್ದೀಪ್ ಪೈಕಿ ಯಾರು ಸ್ಥಾನ ಪಡೆಯಲಿದ್ದಾರೆ ಇಲ್ಲವೇ ಇಬ್ಬರನ್ನೂ ಆಡಿಸಲು ತಂಡ ನಿರ್ಧರಿಸುತ್ತಾ ಎನ್ನುವುದು ಟಾಸ್ ವೇಳೆ ತಿಳಿಯಲಿದೆ.
ಪಾಂಡೆ, ಶ್ರೇಯಸ್‌ಗಿಲ್ಲ ಅವಕಾಶ: ಮನೀಶ್ ಪಾಂಡೆ ಹಾಗೂ ಶ್ರೇಯಸ್ ಅಯ್ಯರ್‌ಗೆ ಸೀಮಿತ ಅವಕಾಶಗಳು ದೊರೆಯುತ್ತಿರುವ ಬಗ್ಗೆ ಈಗಾಗಲೇ ಅಪಸ್ವರ ಕೇಳಿಬರುತ್ತಿದೆ. ಇಬ್ಬರು ಪ್ರತಿಭಾವಂತ ಆಟಗಾರರು ಅರ್ಹ ಅವಕಾಶದಿಂದ ಮತ್ತೊಮ್ಮೆ ವಂಚಿತರಾಗಿದ್ದಾರೆ. ಒಂದೊಮ್ಮೆ ಅವರನ್ನು ಆಡಿಸುವುದಿಲ್ಲ ಎನ್ನುವುದನ್ನು ಮೊದಲೇ ನಿರ್ಧರಿಸಿದ್ದರೆ, ಆಸ್ಪ್ರೇಲಿಯಾದಲ್ಲಿ ನೀರಿನ ಬಾಟಲ್‌ಗಳನ್ನು ಸರಬರಾಜು ಮಾಡುವ ಬದಲು ರಣಜಿ ಪಂದ್ಯಗಳನ್ನು ಆಡಲು ಅವಕಾಶ ನೀಡಬಹುದಾಗಿತ್ತು ಎನ್ನುವ ಮಾತುಗಳು ಸಹ ಕೇಳಿಬರುತ್ತಿವೆ.
ಗೊಂದಲದಲ್ಲಿ ಆಸೀಸ್: ಆಸ್ಪ್ರೇಲಿಯಾ ತಂಡದ ಡ್ರೆಸ್ಸಿಂಗ್ ಕೊಠಡಿ ಗೊಂದಲಗಳ ಗೂಡಾಗಿದೆ. ಆ್ಯರೋನ್ ಫಿಂಚ್ ನಾಯಕರಾಗಿದ್ದು, ತಂಡ ಸಂಯೋಜನೆ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ ಎನಿಸುತ್ತಿದೆ. ಆಸೀಸ್ ಒಬ್ಬ ತಜ್ಞ ಸ್ಪಿನ್ನರ್ ಆಡಿಸುವ ಬಗ್ಗೆ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಕಳೆದ 5 ಪಂದ್ಯಗಳಲ್ಲಿ 4ರಲ್ಲಿ ಸೋತಿರುವ ಕಾಂಗರೂಗಳ ಮೇಲೆ ಭಾರೀ ಒತ್ತಡವಿದೆ. ಆತಿಥೇಯರಿಗೆ ಹೋಲಿಸಿದರೆ ಪ್ರವಾಸಿ ತಂಡ ಎಲ್ಲಾ ಮೂರು ವಿಭಾಗಗಳಲ್ಲಿ ಬಲಿಷ್ಠವಾಗಿದ್ದು, ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಳ್ಳುತ್ತಿದೆ.
ತಂಡಗಳ ವಿವರ
ಭಾರತ (ಅಂತಿಮ 12): ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ದಿನೇಶ್ ಕಾರ್ತಿಕ್, ರಿಷಭ್ ಪಂತ್, ಕೃನಾಲ್ ಪಾಂಡ್ಯ, ಯಜುವೇಂದ್ರ ಚಹಲ್, ಕುಲ್ದೀಪ್ ಯಾದವ್, ಜಸ್‌ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್, ಖಲೀಲ್ ಅಹ್ಮದ್.
ಆಸ್ಪ್ರೇಲಿಯಾ: ಆ್ಯರೋನ್ ಫಿಂಚ್ (ನಾಯಕ), ಆ್ಯಸ್ಟನ್ ಅಗರ್, ಜೇಸನ್ ಬೆರ್ಹೆನ್‌ಡ್ರಾಫ್, ಅಲೆಕ್ಸ್ ಕಾರಿ, ಕೌಲ್ಟರ್‌ನೈಲ್, ಕ್ರಿಸ್ ಲಿನ್, ಬೆನ್ ಮೆಕ್‌ಡೆರ್ಮೊಟ್, ಗ್ಲೆನ್ ಮ್ಯಾಕ್ಸ್‌ವೆಲ್, ಡಾರ್ಚಿ ಶಾರ್ಟ್, ಬಿಲ್ಲಿ ಸ್ಟ್ಯಾನ್‌ಲೇಕ್, ಮಾರ್ಕಸ್ ಸ್ಟೋಯ್ನಿಸ್, ಆ್ಯಂಡ್ರೂ ಟೈ, ಆ್ಯಡಂ ಜಂಪಾ.
ಪಂದ್ಯ ಆರಂಭ: ಮಧ್ಯಾಹ್ನ 1.20ಕ್ಕೆ, ನೇರ ಪ್ರಸಾರ: ಸೋನಿ ಸಿಕ್ಸ್
ಒಟ್ಟು ಮುಖಾಮುಖಿ: 15
ಭಾರತ: 10
ಆಸ್ಪ್ರೇಲಿಯಾ: 05
ಟಿ20 ರ‍್ಯಾಂಕಿಂಗ್
ಭಾರತ: 02
ಆಸ್ಪ್ರೇಲಿಯಾ: 04
ಪಿಚ್ ರಿಪೋರ್ಟ್
ಬ್ರಿಸ್ಬೇನ್ ಪಿಚ್ ಹೆಚ್ಚುವರಿ ಬೌನ್ಸ್ ಒದಗಿಸಲಿದ್ದು, ಮೈದಾನ ಸಹ ದೊಡ್ಡದಾಗಿದೆ. ಹೀಗಾಗಿ ಉಭಯ ತಂಡಗಳು ವೇಗಿಗಳ ಮೇಲೆ ಹೆಚ್ಚಿನ ಜವಾಬ್ದಾರಿ ಹೊರಿಸುವಂತೆ ಮಾಡಲಿದೆ. ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸೂಚನೆ ಇಲ್ಲ. ಟಾಸ್ ಗೆಲ್ಲುವ ತಂಡ ಮೊದಲು ಫೀಲ್ಡಿಂಗ್ ಮಾಡುವ ಸಾಧ್ಯತೆ ಹೆಚ್ಚು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.