ಅಂಡರ್ 17 ಫಿಫಾ ಮಹಿಳಾ ವಿಶ್ವಕಪ್ ಆತಿಥ್ಯ ಭಾರತದ ತೆಕ್ಕೆಗೆ

By Web DeskFirst Published Mar 17, 2019, 3:53 PM IST
Highlights

ಅಮೆರಿಕದ ಮಯಾಮಿಯಲ್ಲಿ ನಡೆದ ಸಭೆ ಬಳಿಕ ಅಂತಾರಾಷ್ಟ್ರೀಯ ಫುಟ್ಬಾಲ್‌ ಫೆಡರೇಷನ್‌(ಫಿಫಾ) ಅಧ್ಯಕ್ಷ ಗಿಯಾನಿ ಇನ್ಫ್ಯಾಂಟಿನೋ ಭಾರತ ಆತಿಥ್ಯ ಹಕ್ಕನ್ನು ಪಡೆದಿದೆ ಎಂದು ಘೋಷಿಸಿದರು. ಭಾರತದಲ್ಲಿ ನಡೆಯಲಿರುವ 2ನೇ ಫಿಫಾ ವಿಶ್ವಕಪ್‌ ಇದಾಗಲಿದೆ.

ನವದೆಹಲಿ[ಮಾ.17]: ಜಾಗತಿಕ ಮಟ್ಟದ ಕ್ರೀಡಾಕೂಟಗಳ ಆತಿಥ್ಯ ಹಕ್ಕು ಕಳೆದುಕೊಳ್ಳುವ ಭೀತಿಯಲ್ಲಿದ್ದ ಭಾರತಕ್ಕೆ ಸಿಹಿ ಸುದ್ದಿಯೊಂದು ಸಿಕ್ಕಿದೆ. 2020ರ ಫಿಫಾ ಅಂಡರ್‌-17 ಮಹಿಳಾ ಫುಟ್ಬಾಲ್‌ ವಿಶ್ವಕಪ್‌ ಆತಿಥ್ಯ ಭಾರತಕ್ಕೆ ಸಿಕ್ಕಿದೆ.

ಶುಕ್ರವಾರ ಅಮೆರಿಕದ ಮಯಾಮಿಯಲ್ಲಿ ನಡೆದ ಸಭೆ ಬಳಿಕ ಅಂತಾರಾಷ್ಟ್ರೀಯ ಫುಟ್ಬಾಲ್‌ ಫೆಡರೇಷನ್‌(ಫಿಫಾ) ಅಧ್ಯಕ್ಷ ಗಿಯಾನಿ ಇನ್ಫ್ಯಾಂಟಿನೋ ಭಾರತ ಆತಿಥ್ಯ ಹಕ್ಕನ್ನು ಪಡೆದಿದೆ ಎಂದು ಘೋಷಿಸಿದರು. ಭಾರತದಲ್ಲಿ ನಡೆಯಲಿರುವ 2ನೇ ಫಿಫಾ ವಿಶ್ವಕಪ್‌ ಇದಾಗಲಿದೆ. 2017ರಲ್ಲಿ ಅಂಡರ್‌-17 ಪುರುಷರ ವಿಶ್ವಕಪ್‌ಗೆ ಭಾರತ ಆತಿಥ್ಯ ವಹಿಸಿತ್ತು. ದೇಶದಲ್ಲಿ ನಡೆದ ಮೊದಲ ಫುಟ್ಬಾಲ್‌ ವಿಶ್ವಕಪ್‌ ಅದಾಗಿತ್ತು.

ಈ ಬೆಳವಣಿಗೆಯನ್ನು ದೃಢಪಡಿಸಿರುವ ಅಖಿಲ ಭಾರತ ಫುಟ್ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ಪ್ರಧಾನ ಕಾರ್ಯದರ್ಶಿ ಕುಶಾಲ್‌ ದಾಸ್‌, ‘ಫಿಫಾಗೆ ಧನ್ಯವಾದ ತಿಳಿಸುತ್ತೇವೆ. ದೇಶದಲ್ಲಿ ಮಹಿಳಾ ಫುಟ್ಬಾಲ್‌ ಅಭಿವೃದ್ಧಿಗೆ ಈ ಟೂರ್ನಿ ದೊಡ್ಡ ಮಟ್ಟದಲ್ಲಿ ಸಹಕರಿಸಲಿದೆ. ದೇಶದಲ್ಲಿ ಮಹಿಳಾ ಫುಟ್ಬಾಲ್‌ಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ಇದೇ ಕಾರಣದಿಂದಾಗಿ ಮಹಿಳಾ ವಿಶ್ವಕಪ್‌ಗೆ ನಾವು ಬಿಡ್‌ ಸಲ್ಲಿಸಿದ್ದೆವು’ ಎಂದಿದ್ದಾರೆ. ಬಿಡ್ಡಿಂಗ್‌ ಪ್ರಕ್ರಿಯೆ ಕಳೆದ ವರ್ಷ ನಡೆದಿತ್ತು. ಆತಿಥ್ಯ ಹಕ್ಕು ಪಡೆಯಲು ಭಾರತದೊಂದಿಗೆ ಫ್ರಾನ್ಸ್‌ ಸಹ ಸ್ಪರ್ಧೆಯಲ್ಲಿತ್ತು. ಅಂಡರ್‌-20 ಮಹಿಳಾ ವಿಶ್ವಕಪ್‌ ಆತಿಥ್ಯಕ್ಕೂ ಭಾರತ ಆಸಕ್ತಿ ತೋರಿದೆ.

16 ತಂಡಗಳ ಟೂರ್ನಿ: 7ನೇ ಆವೃತ್ತಿಯ ವಿಶ್ವಕಪ್‌ನಲ್ಲಿ 6 ಕಾನ್ಫೆಡರೇಷನ್‌( 6 ಖಂಡಗಳ ಫುಟ್ಬಾಲ್‌ ಸಂಸ್ಥೆಗಳು)ನ ಒಟ್ಟು 16 ತಂಡಗಳು ಪಾಲ್ಗೊಳ್ಳಲಿವೆ. ಆತಿಥ್ಯ ವಹಿಸಲಿರುವ ಭಾರತಕ್ಕೆ ನೇರ ಅರ್ಹತೆ ಸಿಕ್ಕಿದ್ದು, ತಂಡ ಚೊಚ್ಚಲ ಬಾರಿಗೆ ವಿಶ್ವಕಪ್‌ನಲ್ಲಿ ಆಡಲಿದೆ. 6 ಕಾನ್ಫೆಡರೇಷನ್‌ಗಳಿಂದ ಟೂರ್ನಿಗೆ ಪ್ರವೇಶಿಸುವ ತಂಡಗಳು ಅರ್ಹತಾ ಟೂರ್ನಿಯಲ್ಲಿ ಆಡಿ ಗೆಲ್ಲಬೇಕಿದೆ. ಮಹಿಳಾ ಅಂಡರ್‌-17 ವಿಶ್ವಕಪ್‌ 2008ರಲ್ಲಿ ಆರಂಭಗೊಂಡಿತ್ತು. ನ್ಯೂಜಿಲೆಂಡ್‌ ಮೊದಲ ಆವೃತ್ತಿಗೆ ಆತಿಥ್ಯ ವಹಿಸಿತ್ತು. ಸ್ಪೇನ್‌ ಹಾಲಿ ಚಾಂಪಿಯನ್‌ ಆಗಿದ್ದು, ಕಳೆದ ವಿಶ್ವಕಪ್‌ನ ಫೈನಲ್‌ನಲ್ಲಿ ಉರುಗ್ವೆ ವಿರುದ್ಧ ಜಯಿಸಿ ಪ್ರಶಸ್ತಿ ಗೆದ್ದಿತ್ತು.

ಟೂರ್ನಿಯಲ್ಲಿ ಏಷ್ಯನ್‌ ರಾಷ್ಟ್ರಗಳು ಹೆಚ್ಚು ಯಶಸ್ಸು ಕಂಡಿವೆ. 2008 ಹಾಗೂ 2016ರಲ್ಲಿ ಉತ್ತರ ಕೊರಿಯಾ, 2014ರಲ್ಲಿ ಜಪಾನ್‌ ಹಾಗೂ 2010ರಲ್ಲಿ ದಕ್ಷಿಣ ಕೊರಿಯಾ ತಂಡಗಳು ಪ್ರಶಸ್ತಿ ಜಯಿಸಿದ್ದವು. 2012ರಲ್ಲಿ ಫ್ರಾನ್ಸ್‌, 2018ರಲ್ಲಿ ಸ್ಪೇನ್‌ ಚಾಂಪಿಯನ್‌ ಆಗಿದ್ದವು.

4 ಇಲ್ಲವೇ 5 ನಗರಗಳ ಆತಿಥ್ಯ!

ವಿಶ್ವಕಪ್‌ ಪಂದ್ಯಗಳಿಗೆ ಭಾರತದ 4 ಇಲ್ಲವೇ 5 ನಗರಗಳು ಆತಿಥ್ಯ ವಹಿಸಲಿವೆ ಎಂದು ಎಐಎಫ್‌ಎಫ್‌ ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಭಾರತೀಯ ಫುಟ್ಬಾಲ್‌ ಫೆಡರೇಷನ್‌ ಮೈದಾನಗಳನ್ನು ಗುರುತಿಸಿದ್ದು, ಫಿಫಾ ಮಾನದಂಡಕ್ಕೆ ಸರಿಹೊಂದುವಂತೆ ಕ್ರೀಡಾಂಗಣವನ್ನು ಸಿದ್ಧಗೊಳಿಸಬೇಕಿದೆ. 2017ರಲ್ಲಿ ಪುರುಷರ ಅಂಡರ್‌-17 ವಿಶ್ವಕಪ್‌ಗೆ ಒಟ್ಟು 6 ನಗರಗಳು ಆತಿಥ್ಯ ವಹಿಸಿದ್ದವು.

click me!