
ಬೆಂಗಳೂರು(ಏ. 09): ಟೆನಿಸ್ ವಿಶ್ವಕಪ್ ಎಂದೇ ಕರೆಯಲ್ಪಡುವ ಪ್ರತಿಷ್ಠಿತ ಡೇವಿಸ್ ಕಪ್‌ನಲ್ಲಿ ಆತಿಥೇಯ ಭಾರತ ತಂಡ ನಿರೀಕ್ಷೆಯಂತೆಯೇ ವಿಶ್ವ ಪ್ಲೇ-ಆಫ್ ಹಂತಕ್ಕೆ ಲಗ್ಗೆ ಹಾಕುವಲ್ಲಿ ಯಶಸ್ವಿಯಾಯಿತು. ಇಲ್ಲಿನ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ (ಕೆಎಸ್‌ಎಲ್‌ಟಿಎ) ಆವರಣದಲ್ಲಿ ನಡೆಯುತ್ತಿರುವ ಉಜ್ಬೇಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ 3-0 ಮುನ್ನಡೆ ಸಾಧಿಸಿದೆ. ಶನಿವಾರ ನಡೆದ ಡಬಲ್ಸ್ ಹಣಾಹಣಿಯಲ್ಲಿ ಭಾರತದ ರೋಹನ್ ಬೋಪಣ್ಣ ಹಾಗೂ ಶ್ರೀರಾಮ್ ಬಾಲಾಜಿ ಜೋಡಿ ಫಾರುಕ್ ದುಸ್ತಾವ್ ಹಾಗೂ ಸಂಜಾರ್ ಫೇಜೀವ್ ವಿರುದ್ಧ 6-2, 6-4, 6-1 ನೇರ ಸೆಟ್'ಗಳಲ್ಲಿ ಗೆಲುವು ಸಾಧಿಸಿತು.
ಶುಕ್ರವಾರ ನಡೆದಿದ್ದ ಎರಡೂ ಸಿಂಗಲ್ಸ್ ಹಣಾಹಣಿಯಲ್ಲಿ ರಾಮ್'ಕುಮಾರ್ ರಾಮನಾಥನ್ ಹಾಗೂ ಪ್ರಗ್ನೇಶ್ ಗುಣೇಶ್ವರನ್ ಜಯಿಸಿ ಭಾರತಕ್ಕೆ 2-0 ಭರ್ಜರಿ ಮುನ್ನಡೆ ತಂದಿತ್ತಿದ್ದರು. ಹೀಗಾಗಿ ಶನಿವಾರದ ಡಬಲ್ಸ್ ಪಂದ್ಯ ಭಾರತದ ಮುಂದಿನ ಹಾದಿಗೆ ಮಹತ್ವವಾಗಿತ್ತು.
ಕೇವಲ 49 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಭಾರತೀಯ ಜೋಡಿ ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಿತು. ಅತ್ಯುತ್ತಮ ಹೊಂದಾಣಿಕೆಯೊಂದಿಗೆ ಆಡಿದ ಬೋಪಣ್ಣ ಹಾಗೂ ಬಾಲಾಜಿ, ಎಲ್ಲಾ ವಿಭಾಗಗಳಲ್ಲೂ ಉಜ್ಬೇಕ್ ಜೋಡಿಯನ್ನು ಮೀರಿಸುವ ಆಟವಾಡಿದರು. ಕೊನೆಯ ಸೆಟ್‌ನಲ್ಲಿ 5-0 ಮುನ್ನಡೆ ಸಾಧಿಸಿದ್ದ ಭಾರತಕ್ಕೆ ಗೇಮ್ ಕಳೆದುಕೊಳ್ಳದೇ ಸೆಟ್ ಗೆಲ್ಲುವ ಅವಕಾಶವಿತ್ತಾದರೂ, ಅದು ಸಾಧ್ಯವಾಗಲಿಲ್ಲ.
ಪಂದ್ಯ ಗೆಲ್ಲುತ್ತಿದ್ದಂತೆ ನಾಯಕ ಭೂಪತಿ ಸೇರಿ ಭಾರತ ತಂಡದ ಎಲ್ಲಾ ಆಟಗಾರರು ರಾಷ್ಟ್ರಧ್ವಜ ಹಿಡಿದು ಸಂಭ್ರಮಿಸಿದರು. ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರ ಸಂಭ್ರಮವೂ ಮುಗಿಲುಮುಟ್ಟಿತ್ತು. ಶುಕ್ರವಾರದ ಸಿಂಗಲ್ಸ್ ಹಣಾಹಣಿ ವೇಳೆ ಹಾಜರಿದ್ದ ಭೂಪತಿ ಅವರ ಪತ್ನಿ, ಬಾಲಿವುಡ್ ನಟಿ ಲಾರಾ ದತ್ತ ಶನಿವಾರದ ಡಬಲ್ಸ್ ಪಂದ್ಯಕ್ಕೂ ಸಾಕ್ಷಿಯಾಗಿದ್ದು ವಿಶೇಷ.
ವಿಶ್ವ ಹಂತದಲ್ಲಿ ಸೋಲನುಭವಿಸಿದ 8 ತಂಡಗಳು ಹಾಗೂ ವಲಯ ಮಟ್ಟದಲ್ಲಿ ಜಯಿಸುವ 8 ತಂಡಗಳು ಸೇರಿ ಒಟ್ಟು 16 ತಂಡಗಳು ವಿಶ್ವ ಪ್ಲೇ ಆಫ್ ಹಂತದಲ್ಲಿ ಸೆಣಸಾಡಿ 2018ರ ವಿಶ್ವ ಹಂತಕ್ಕೆ ಪ್ರವೇಶ ಪಡೆಯಲಿವೆ. ಸೆಪ್ಟೆಂಬರ್‌ನಲ್ಲಿ ವಿಶ್ವ ಪ್ಲೇ-ಆಫ್ ಹಂತದ ಪಂದ್ಯಗಳು ನಡೆಯಲಿದ್ದು, ಭಾರತ ಯಾರ ವಿರುದ್ಧ ಕಾದಾಡಬೇಕಿದೆ ಎಂಬುದಿನ್ನೂ ನಿರ್ಧಾರವಾಗಿಲ್ಲ.
ಕೊನೆಗೂ ಗೆದ್ದ ಭೂಪತಿ!
ಅನುಭವಿ ಆಟಗಾರ ಲಿಯಾಂಡರ್ ಪೇಸ್ ಅವರನ್ನು ಹೊರಗಿಟ್ಟು ಬೋಪಣ್ಣ ಅವರೊಂದಿಗೆ ಯುವ ಆಟಗಾರ ಬಾಲಾಜಿ ಅವರನ್ನು ಉಜ್ಬೇಕಿಸ್ತಾನ ವಿರುದ್ಧದ ಪಂದ್ಯಕ್ಕೆ ಕಣಕ್ಕಿಳಿಸಿದ ಭಾರತ ತಂಡದ ಆಡದ ನಾಯಕ ಮಹೇಶ್ ಭೂಪತಿ, ಡೇವಿಸ್ ಕಪ್‌ನಲ್ಲಿನ ತಮ್ಮ ನಾಯಕತ್ವದ ಮೊದಲ ಅಭಿಯಾನದಲ್ಲೇ ಯಶ ಕಂಡರು. ತನ್ನನ್ನು ಅಪಮಾನಿಸಲು ಮೆಕ್ಸಿಕೋದಿಂದ ಕರೆತರಬೇಕಿತ್ತೇ ಎಂದು ಆಯ್ಕೆ ಪ್ರಕ್ರಿಯೆನ್ನು ಪ್ರಶ್ನಿಸಿದ್ದ ಪೇಸ್ ಅವರ ಟೀಕೆಗೆ ಶುರುವಿನಲ್ಲಿ ಉತ್ತರಿಸದೆ ಇದ್ದ ಭೂಪತಿ, ಪಂದ್ಯಾವಳಿಯನ್ನು ಗೆದ್ದ ನಂತರ ಅದಕ್ಕೆ ದಿಟ್ಟಉತ್ತರ ನೀಡುವುದಾಗಿ ಹೇಳಿದ್ದರು. ಸದ್ಯದ ಅವರ ಗಮನ ಭಾನುವಾರ ನಡೆಯಲಿರುವ ರಿವರ್ಸ್ ಸಿಂಗಲ್ಸ್ ಪಂದ್ಯಗಳ ಮೇಲಿದ್ದು, ಕ್ಲೀನ್'ಸ್ವೀಪ್ ಗುರಿ ಹೊತ್ತಿದೆ.
epaper.kannadaprabha.in
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.