ಭಾರತ ವರ್ಸಸ್ ಕಿವೀಸ್: ಸರಣಿಗಾಗಿ ಇಂದು ಫೈನಲ್ ಸಮರ

Published : Oct 29, 2016, 04:50 AM ISTUpdated : Apr 11, 2018, 12:39 PM IST
ಭಾರತ ವರ್ಸಸ್ ಕಿವೀಸ್: ಸರಣಿಗಾಗಿ ಇಂದು ಫೈನಲ್ ಸಮರ

ಸಾರಾಂಶ

ಈಗಾಗಲೇ ಐದು ಪಂದ್ಯ ಸರಣಿಯು 2-2ರಿಂದ ಸಮಬಲ ಸಾಧಿಸಿದ್ದು, ಇಲ್ಲಿನ ಡಾ. ವೈ.ಎಸ್‌. ರಾಜಶೇಖರರೆಡ್ಡಿ ಎಸಿಎ-ವಿಡಿಸಿಎ ಮೈದಾನದಲ್ಲಿ ನಡೆಯಲಿರುವ ಪಂದ್ಯವು ಸರಣಿ ನಿರ್ಧರಿಸಲಿರುವ ಕಾರಣ ಧೋನಿ ಪಡೆಗಷ್ಟೇ ಅಲ್ಲದೆ, ಭಾರತದ ನೆಲದಲ್ಲಿ ಮೊಟ್ಟಮೊದಲ ದ್ವಿಪಕ್ಷೀಯ ಏಕದಿನ ಸರಣಿ ಗೆಲುವಿಗಾಗಿ ಕನಸುತ್ತಿರುವ ಕಿವೀಸ್‌ಗೂ ಮಹತ್ವದ್ದಾಗಿದೆ.

ವಿಶಾಖಪಟ್ಟಣ: ಮುಂದಿನ ವರ್ಷ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಪ್ರತಿಷ್ಠಿತ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಸರಣಿಗಾಗಿನ ಪೂರ್ವ ತಯಾರಿ ಎಂದೇ ಬಿಂಬಿತವಾಗಿದ್ದ ಪ್ರವಾಸಿ ನ್ಯೂಜಿಲೆಂಡ್‌ ವಿರುದ್ಧದ ಐದು ಪಂದ್ಯ ಸರಣಿಯಲ್ಲಿ ತಡಬಡಾಯಿಸಿರುವ ಧೋನಿ ಧೋನಿ ಸಾರಥ್ಯದ ಭಾರತ ತಂಡ ಇದೀಗ ನಿಜವಾದ ಅಗ್ನಿಪರೀಕ್ಷೆಗೆ ಸಿಲುಕಿದ್ದು, ಇಂದು ನಡೆಯಲಿರುವ ಪಂದ್ಯವು ಅದರ ಪಾಲಿಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ.

ಈಗಾಗಲೇ ಐದು ಪಂದ್ಯ ಸರಣಿಯು 2-2ರಿಂದ ಸಮಬಲ ಸಾಧಿಸಿದ್ದು, ಇಲ್ಲಿನ ಡಾ. ವೈ.ಎಸ್‌. ರಾಜಶೇಖರರೆಡ್ಡಿ ಎಸಿಎ-ವಿಡಿಸಿಎ ಮೈದಾನದಲ್ಲಿ ನಡೆಯಲಿರುವ ಪಂದ್ಯವು ಸರಣಿ ನಿರ್ಧರಿಸಲಿರುವ ಕಾರಣ ಧೋನಿ ಪಡೆಗಷ್ಟೇ ಅಲ್ಲದೆ, ಭಾರತದ ನೆಲದಲ್ಲಿ ಮೊಟ್ಟಮೊದಲ ದ್ವಿಪಕ್ಷೀಯ ಏಕದಿನ ಸರಣಿ ಗೆಲುವಿಗಾಗಿ ಕನಸುತ್ತಿರುವ ಕಿವೀಸ್‌ಗೂ ಮಹತ್ವದ್ದಾಗಿದೆ. ಅಂದಹಾಗೆ ಈ ಮೈದಾನದಲ್ಲಿ ಭಾರತ ಆಡಿರುವ ಐದು ಪಂದ್ಯಗಳಲ್ಲಿ ಸೋತಿರುವುದು ಕೇವಲ 1ರಲ್ಲಿ. ನವೆಂಬರ್‌ 2013ರಲ್ಲಿ ನಡೆದಿದ್ದ ಪಂದ್ಯದಲ್ಲಿ ವಿಂಡೀಸ್‌ ವಿರುದ್ಧ ಆ ಸೋಲು ದಾಖಲಾಗಿತ್ತು.

ಕದನ ಕೌತುಕ: ಅಂದಹಾಗೆ ಸರಣಿ ಅಂಚಿನ ಈ ಪಂದ್ಯವು ಸಹಜವಾಗಿಯೇ ಕೌತುಕದ ಆಗರವಾಗಿದೆ. ದೇಶದೆಲ್ಲೆಡೆ ದೀಪಾವಳಿಯ ಸಂಭ್ರಮ ಮನೆ ಮಾಡಿದ್ದು, ಯಾವ ತಂಡ ಜಯದ ಪಟಾಕಿ ಹಚ್ಚಿ ಸಂಭ್ರಮಿಸಲಿದೆ ಎಂಬುದು ಕೂಡ ಕುತೂಹಲ ಕೆರಳಿಸಿದೆ. ಮೊದಲಿಗೆ, ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ಸೋತು ಸರಣಿಯಲ್ಲಿ ಜಯದ ಆರಂಭ ಕಂಡ ಭಾರತ ತಂಡ ಅನಂತರದಲ್ಲಿ ಎಡವಿದೆ. ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಕೇನ್‌ ವಿಲಿಯಮ್ಸನ್‌ ಸಿಡಿಸಿದ ಭರ್ಜರಿ ಶತಕ ಕಿವೀಸ್‌ಗೆ ಗೆಲುವು ತಂದುಕೊಟ್ಟರೆ, ಮೊಹಾಲಿಯಲ್ಲಿ ವಿರಾಟ್‌ ಕೊಹ್ಲಿಯ ಅಜೇಯ ಶತಕದಾಟವು ಮತ್ತೆ ಧೋನಿ ಪಡೆಗೆ ಮುನ್ನಡೆ ತಂದಿತ್ತು. ಆದರೆ, ರಾಂಚಿಯಲ್ಲಿನ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್‌ನಿಂದಾಗಿ 19 ರನ್‌ ಸೋಲನುಭವಿಸಿದ ಧೋನಿ ಪಡೆ ಕಡೆಯ ಪಂದ್ಯದಲ್ಲಿ ಒತ್ತಡದಿಂದ ಆಡಬೇಕಾದ ಪರಿಸ್ಥಿತಿಯನ್ನು ತಂದುಕೊಂಡಿದೆ. 

ಧೋನಿಗೆ ಸತ್ವಪರೀಕ್ಷೆ: ನಾಯಕತ್ವದ ಜತೆಗೆ ಗ್ರೇಟ್‌ ಫಿನಿಶರ್‌ ಎಂದೇ ಕರೆಸಿಕೊಳ್ಳುತ್ತಿದ್ದ ಧೋನಿ ಇತ್ತೀಚಿನ ಸರಣಿಗಳಲ್ಲಿ ವೈಫಲ್ಯತೆಗೆ ಸಿಲುಕಿದ್ದಾರೆ. ಅದರಲ್ಲೂ ಕಿವೀಸ್‌ ವಿರುದ್ಧದ ಈ ಪಂದ್ಯ ಸತ್ವಪರೀಕ್ಷೆಯಾಗಿ ಮಾರ್ಪಟ್ಟಿದೆ. ಕಳೆದ ನಾಲ್ಕು ಏಕದಿನ ಸರಣಿಗಳಲ್ಲಿ ಧೋನಿ ಸಾರಥ್ಯದ ಟೀಂ ಇಂಡಿಯಾ ಮೂರು ಸರಣಿಯಲ್ಲಿ ಸೋಲನುಭವಿಸಿದೆ. ಬಾಂಗ್ಲಾದೇಶ ವಿರುದ್ಧ 1-2, ಆಸ್ಪ್ರೇಲಿಯಾ ವಿರುದ್ಧ 1-4 ಮತ್ತು ತವರಿನಲ್ಲಿ ದ.ಆಫ್ರಿಕಾ ವಿರುದ್ಧ 2-3 ಅಂತರದಿಂದ ಸರಣಿ ಕೈಚೆಲ್ಲಿದ ಧೋನಿ ಪಡೆ, ಕಳೆದ 18 ತಿಂಗಳಲ್ಲಿ ಗೆದ್ದಿರುವುದು ಜಿಂಬಾಬ್ವೆ ವಿರುದ್ಧದ ಸರಣಿಯನ್ನಷ್ಟೇ. ಚಾಂಪಿಯನ್ಸ್‌ ಟ್ರೋಫಿಗೂ ಮುನ್ನ ಭಾರತ ತಂಡ ಆಡಲಿರುವ ಕೊನೆಯ ಏಕದಿನ ಸರಣಿ ಎಂದರೆ, ಅದು ಇಂಗ್ಲೆಂಡ್‌ ವಿರುದ್ಧದ ಮೂರು ಪಂದ್ಯಗಳಷ್ಟೆ. ಈ ದಿಸೆಯಲ್ಲಿ ಧೋನಿಯ ನಾಯಕತ್ವದ ಅಳಿವು-ಉಳಿವು ಕಿವೀಸ್‌ ವಿರುದ್ಧದ ಈ ಕೊನೆಯ ಪಂದ್ಯವಷ್ಟೇ ಅಲ್ಲದೆ, ಇಂಗ್ಲೆಂಡ್‌ ವಿರುದ್ಧದ ಸರಣಿಯನ್ನೂ ಆಧರಿಸಿದೆ.

ಸಂಭವನೀಯರ ಪಟ್ಟಿ

ಭಾರತ ತಂಡ:
ರೋಹಿತ್‌ ಶರ್ಮಾ, ಅಜಿಂಕ್ಯ ರಹಾನೆ, ವಿರಾಟ್‌ ಕೊಹ್ಲಿ, ಎಂ.ಎಸ್‌. ಧೋನಿ (ನಾಯಕ), ಮನೀಶ್‌ ಪಾಂಡೆ, ಕೇದಾರ್‌ ಜಾಧವ್‌, ಹಾರ್ದಿಕ್‌ ಪಾಂಡ್ಯ, ಜಸ್ಟ್ರೀತ್‌ ಬುಮ್ರಾ, ಉಮೇಶ್‌ ಯಾದವ್‌, ಅಕ್ಷರ್‌ ಪಟೇಲ್‌ ಹಾಗೂ ಅಮಿತ್‌ ಮಿಶ್ರಾ.

ನ್ಯೂಜಿಲೆಂಡ್‌ ತಂಡ:
ಮಾರ್ಟಿನ್‌ ಗುಪ್ಟಿಲ್‌, ಟಾಮ್‌ ಲಾಥಮ್‌, ಕೇನ್‌ ವಿಲಿಯಮ್ಸನ್‌ (ನಾಯಕ), ರಾಸ್‌ ಟೇಲರ್‌, ಕೊರೆ ಆ್ಯಂಡರ್ಸನ್‌ / ಆ್ಯಂಟನ್‌ ಡೇವ್‌ಸಿಚ್‌, ಬಿಜೆ ವಾಟ್ಲಿಂಗ್‌ (ವಿಕೆಟ್‌ಕೀಪರ್‌), ಜಿಮ್ಮಿ ನೀಶಮ್‌, ಮಿಚೆಲ್‌ ಸ್ಯಾಂಟ್ನರ್‌, ಮ್ಯಾಟ್‌ ಹೆನ್ರಿ, ಟಿಮ್‌ ಸೌಥೀ ಮತ್ತು ಟ್ರೆಂಟ್‌ ಬೌಲ್ಟ್‌.

ಕಳೆದ ಮೂರು ಸರಣಿಯಲ್ಲಿ ಭಾರತದ ಸಾಧನೆ
1988: ವೆಂಗ್‌'ಸರ್ಕರ್‌ ನೇತೃತ್ವದಲ್ಲಿ 4-0 ಗೆಲುವು
1995: ಮೊಹಮದ್‌ ಅಜರುದ್ದೀನ್‌ ಸಾರಥ್ಯದಲ್ಲಿ 3-2 ಗೆಲುವು
2010: ಗೌತಮ್‌ ಗಂಭೀರ್‌ ನಾಯಕತ್ವದಲ್ಲಿ 5-0 ಗೆಲುವು

(ಕೃಪೆ: ಕನ್ನಡಪ್ರಭ)

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?