ಹಾಕಿ: ನೆದರ್'ಲೆಂಡ್ಸ್ ವಿರುದ್ಧ ಭಾರತಕ್ಕೆ ಸೋಲು

By Suvarna Web DeskFirst Published Jun 20, 2017, 8:38 PM IST
Highlights

ಲೀಗ್'ನ ಹಿಂದಿನ ಪಂದ್ಯಗಳಲ್ಲಿ ಭಾರತ ತಂಡವು ಸ್ಕಾಟ್ಲೆಂಡ್, ಕೆನಡಾ ಮತ್ತು ಪಾಕಿಸ್ತಾನ ವಿರುದ್ಧ ಸುಲಭ ಗೆಲುವು ಸಾಧಿಸಿತ್ತು. ಅದರಲ್ಲೂ ಭಾನುವಾರ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ 7-1 ಗೋಲುಗಳಿಂದ ಜಯಭೇರಿಯನ್ನೇ ಭಾರಿಸಿತ್ತು. ಇದೀಗ ನೆದರ್'ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ತಂಡದ ಹುಳುಕುಗಳು ಬಯಲಿಗೆ ಬಂದಿವೆ.

ಲಂಡನ್(ಜೂನ್ 20): ವರ್ಲ್ಡ್ ಲೀಗ್ ಹಾಕಿ ಸೆಮಿಫೈನಲ್ಸ್ ಟೂರ್ನಿಯಲ್ಲಿ ಸತತ 4ನೇ ಗೆಲುವು ಸಾಧಿಸಿ ಲೀಗ್ ಅಭಿಯಾನ ಮುಗಿಸುವ ಭಾರತದ ಪ್ರಯತ್ನ ವಿಫಲವಾಯಿತು. ಬಿ ಗುಂಪಿನ ಕೊನೆಯ ಲೀಗ್ ಪಂದ್ಯದಲ್ಲಿ ಬಲಿಷ್ಠ ನೆದರ್'ಲೆಂಡ್ಸ್ ತಂಡದ ವಿರುದ್ಧ ಭಾರತ 1-3 ಗೋಲುಗಳಿಂದ ಮುಗ್ಗರಿಸಿತು. ಹ್ಯಾಟ್ರಿಕ್ ಗೆಲುವಿನ ಹುಮ್ಮಸ್ಸಿನಲ್ಲಿದ್ದ ಟೀಮ್ ಇಂಡಿಯಾ ಈ ಪಂದ್ಯದಲ್ಲಿ ನಿರಾಶೆ ಮೂಡಿಸಿತು. ಆಕಾಶ್'ದೀಪ್ ಗೋಲು ಗಳಿಸಿ ಸೋಲಿನ ಅಂತರ ತಗ್ಗಿಸಿದ್ದು ಬಿಟ್ಟರೆ ಉಳಿದಂತೆ ಭಾರತ ತಂಡದ್ದು ಪೇಲವ ಪ್ರದರ್ಶನವಾಗಿತ್ತು. ನೆದರ್'ಲೆಂಡ್ಸ್ ತಂಡ ಆರಂಭದಿಂದಲೇ ಪಂದ್ಯದ ಮೇಲೆ ಬಿಗಿ ಹಿಡಿತ ಹೊಂದಿತು. 24ನೇ ನಿಮಿಷಕ್ಕೇ 3 ಗೋಲು ಮುನ್ನಡೆ ಪಡೆದುಕೊಂಡಾಗಲೇ ಪಂದ್ಯದ ಫಲಿತಾಂಶ ಬಹುತೇಕ ನಿಶ್ಚಯವಾದಂತಿತ್ತು.

ಲೀಗ್'ನ ಹಿಂದಿನ ಪಂದ್ಯಗಳಲ್ಲಿ ಭಾರತ ತಂಡವು ಸ್ಕಾಟ್ಲೆಂಡ್, ಕೆನಡಾ ಮತ್ತು ಪಾಕಿಸ್ತಾನ ವಿರುದ್ಧ ಸುಲಭ ಗೆಲುವು ಸಾಧಿಸಿತ್ತು. ಅದರಲ್ಲೂ ಭಾನುವಾರ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ 7-1 ಗೋಲುಗಳಿಂದ ಜಯಭೇರಿಯನ್ನೇ ಭಾರಿಸಿತ್ತು. ಇದೀಗ ನೆದರ್'ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ತಂಡದ ಹುಳುಕುಗಳು ಬಯಲಿಗೆ ಬಂದಿವೆ.

ನೆದರ್'ಲೆಂಡ್ಸ್ ವಿರುದ್ಧ ಸೋತರೂ ಭಾರತ ತಂಡ ಕ್ವಾರ್ಟರ್'ಫೈನಲ್ ಪ್ರವೇಶ ನಿಶ್ಚಿತವಾಗಿದೆ. ಬಿ ಗುಂಪಿನಲ್ಲಿ ಭಾರತ 2ನೇ ಸ್ಥಾನ ಪಡೆದಿದೆ. ಜೂನ್ 22ರಂದು ಕ್ವಾರ್ಟರ್'ಫೈನಲ್'ನಲ್ಲಿ ಮಲೇಷ್ಯಾ ಅಥವಾ ಚೀನಾ ತಂಡವನ್ನು ಭಾರತ ಎದುರುಗೊಳ್ಳಲಿದೆ. ಇನ್ನೊಂದೆಡೆ ಪಾಕಿಸ್ತಾನ ಮತ್ತು ಅರ್ಜೆಂಟೀನಾ ನಡುವೆ ಮತ್ತೊಂದು ಕ್ವಾರ್ಟರ್'ಫೈನಲ್ ನಡೆಯಲಿದೆ. ಸೆಮಿಫೈನಲ್'ನಲ್ಲಿ ಭಾರತ ಮತ್ತು ಪಾಕ್ ಮತ್ತೊಮ್ಮೆ ಮುಖಾಮುಖಿಯಾಗುವ ಸಾಧ್ಯತೆ ಇದೆ.

click me!