ಅಂಡರ್ 19 ವಿಶ್ವಕಪ್: ಕ್ವಾರ್ಟರ್ ಫೈನಲ್'ಗೆ ಲಗ್ಗೆಯಿಟ್ಟ ಟೀಂ ಇಂಡಿಯಾ

By Suvarna Web DeskFirst Published Jan 16, 2018, 3:55 PM IST
Highlights

ಇನ್ನು ಸುಲಭ ಗುರಿ ಬೆನ್ನತ್ತಿದ ಭಾರತ ಕೇವಲ 8 ಓವರ್'ಗಳಲ್ಲಿ ವಿಕೆಟ್ ನಷ್ಟವಿಲ್ಲದೇ ಗೆಲುವಿನ ನಗೆ ಬೀರಿತು. ನಾಯಕ ಪೃಥ್ವಿ ಶಾ ಕೇವಲ 39 ಎಸೆತಗಳಲ್ಲಿ 57 ರನ್ ಸಿಡಿಸಿದರೆ, ಮತ್ತೋರ್ವ ಆರಂಭಿಕ ಬ್ಯಾಟ್ಸ್'ಮನ್ ಮನ್ಜೋತ್ ಕಲ್ರಾ 9 ರನ್ ಬಾರಿಸಿದರು.

ನ್ಯೂಜಿಲೆಂಡ್(ಜ.16): ಪಪುವ ನ್ಯೂಗಿನಿ ತಂಡವನ್ನು ಅನಾಯಾಸವಾಗಿ ಬಗ್ಗುಬಡಿದ ಪೃಥ್ವಿ ಶಾ ನೇತೃತ್ವದ ಕಿರಿಯರ ಟೀಂ ಇಂಡಿಯಾ ಐಸಿಸಿ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಮೊದಲ ತಂಡವಾಗಿ ಕ್ವಾರ್ಟರ್'ಫೈನಲ್ ಪ್ರವೇಶಿಸಿದೆ.

ಇಂದು ನಡೆದ 'ಬಿ' ವಿಭಾಗದ ಪಂದ್ಯದಲ್ಲಿ ಪಪುವಾ ನ್ಯೂಗಿನಿ ತಂಡವನ್ನು ಕೇವಲ 64 ರನ್'ಗಳಿಗೆ ಕಟ್ಟಿಹಾಕಿದ ಕಿರಿಯರ ತಂಡ 10 ವಿಕೆಟ್'ಗಳ ಜಯ ದಾಖಲಿಸುವುದರೊಂದಿಗೆ ಎಂಟರಘಟ್ಟಕ್ಕೆ ಅರ್ಹತೆ ಗಿಟ್ಟಿಸಿಕೊಂಡಿತು. ಅನುಕುಲ್ ರಾಯ್ ಆಕರ್ಷಕ ಬೌಲಿಂಗ್ ಹಾಗೂ ನಾಯಕ ಪೃಥ್ವಿ ಶಾ ಸ್ಫೋಟಕ ಅರ್ಧಶತಕ ಭಾರತ ತಂಡ ಜಯದಲ್ಲಿ ಪ್ರಮುಖ ಪಾತ್ರವಹಿಸಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಭಾರತ ಆಕ್ರಮಣಕಾರಿಯಾಟಕ್ಕೆ ಮುಂದಾಯಿತು. ಅನುಕುಲ್ ರಾಯ್ ಮಾರಕ ದಾಳಿ(14/5)ಗೆ ತತ್ತರಿಸಿದ ಪಪುವಾ ನ್ಯೂಗಿನಿ ಕೇವಲ 64 ರನ್'ಗಳಗೆ ಸರ್ವಪತನ ಕಂಡಿತು. ಪಪುವಾ ನ್ಯೂಗಿನಿ ಪರ ಓವಿಯಾ ಸ್ಯಾಂ(15) ಹಾಗೂ ಆರಂಭಿಕ ಬ್ಯಾಟ್ಸ್'ಮನ್ ಸಿಮೊನ್ ಅಥೈ(13) ಗರಿಷ್ಠ ರನ್ ದಾಖಲಿಸಿದ ಬ್ಯಾಟ್ಸ್'ಮನ್'ಗಳೆನಿಸಿದರು.

ಇನ್ನು ಸುಲಭ ಗುರಿ ಬೆನ್ನತ್ತಿದ ಭಾರತ ಕೇವಲ 8 ಓವರ್'ಗಳಲ್ಲಿ ವಿಕೆಟ್ ನಷ್ಟವಿಲ್ಲದೇ ಗೆಲುವಿನ ನಗೆ ಬೀರಿತು. ನಾಯಕ ಪೃಥ್ವಿ ಶಾ ಕೇವಲ 39 ಎಸೆತಗಳಲ್ಲಿ 57 ರನ್ ಸಿಡಿಸಿದರೆ, ಮತ್ತೋರ್ವ ಆರಂಭಿಕ ಬ್ಯಾಟ್ಸ್'ಮನ್ ಮನ್ಜೋತ್ ಕಲ್ರಾ 9 ರನ್ ಬಾರಿಸಿದರು.

ಈ ಟೂರ್ನಿಯಲ್ಲಿ ಪೃಥ್ವಿ ಶಾಗೆ ಇದು 2ನೇ ಅರ್ಧಶತಕವಾದರೆ, ಅನುಕುಲ್ ರಾಯ್ ಚೊಚ್ಚಲ ಬಾರಿಗೆ 5 ವಿಕೆಟ್'ಗಳ ಸಾಧನೆ ಮಾಡಿದರು. ಜನವರಿ 19ರಂದು ನಡೆಯಲಿರುವ ಮುಂದಿನ ಪಂದ್ಯದಲ್ಲಿ ಭಾರತ ತಂಡವು ಜಿಂಬಾಬ್ವೆ ವಿರುದ್ಧ ಸೆಣಸಲಿದೆ.

ಸಂಕ್ಷಿಪ್ತ ಸ್ಕೋರ್:

ಪಪುವಾ ನ್ಯೂಗಿನಿ: 64/10( ಸ್ಯಾಮ್ 15; ರಾಯ್:14/5)

ಭಾರತ: 67/0(ಪೃಥ್ವಿ ಶಾ 57*)

click me!