ಏಷ್ಯನ್ ಕಪ್: ಭಾರತಕ್ಕಿಂದು ಬಲಿಷ್ಠ ಕಿರ್ಗಿಸ್ತಾನ ಸವಾಲು

By Suvarna Web DeskFirst Published Jun 13, 2017, 12:53 PM IST
Highlights

ಪಂದ್ಯದಲ್ಲಿ ಭಾರತಕ್ಕೆ ಪ್ರಮುಖ ಆಟಗಾರರ ಅನುಪಸ್ಥಿತಿ ಕಾಡಲಿದೆ. ಗಾಯಾಳು ಉದಾಂತ ಸಿಂಗ್‌ ಹಾಗೂ ಸಿ.ಕೆ.ವಿನೀತ್‌ ಪಂದ್ಯದಿಂದ ಹೊರಬಿದ್ದಿದ್ದಾರೆ. ಅಲ್ಲದೇ ಎಗ್ಯುನ್‌'ಸನ್‌ ಲಿಂಗ್ಡೊ ಅವರ ಕಳಪೆ ಫಾಮ್‌ರ್‍ ಸಹ ತಂಡದ ಚಿಂತೆಗೆ ಕಾರಣವಾಗಿದೆ. ಆದರೆ ನಾಯಕ ಸುನಿಲ್‌ ಚೆಟ್ರಿ ಗಾಯದಿಂದ ಸಂಪೂರ್ಣ ಗುಣಮುಖರಾಗಿರುವುದು ತಂಡಕ್ಕೆ ಬಲ ತುಂಬಲಿದೆ. ಜೆಜೆ ಲಾಲ್‌ಪೆಕುಲಾ ಸಹ ಲಯ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ.

ಬೆಂಗಳೂರು: ಸತತ 6 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ಭಾರತ, ಇಂದು ಈ ವರ್ಷದ ಅತ್ಯಂತ ಕಠಿಣ ಸವಾಲನ್ನು ಎದುರಿಸಲಿದೆ. ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಎಎಫ್‌'ಸಿ ಏಷ್ಯಾಕಪ್‌ ಅರ್ಹತಾ ಸುತ್ತಿನ ಪಂದ್ಯದಲ್ಲಿ ಕಿರ್ಗಿಸ್ತಾನ ವಿರುದ್ಧ ಭಾರತ ಸೆಣಸಾಡಲಿದೆ. 

ಇತ್ತೀಚೆಗಷ್ಟೇ ನೇಪಾಳ ವಿರುದ್ಧ ಸ್ನೇಹಾರ್ಥ ಪಂದ್ಯದಲ್ಲಿ 2-0 ಗೆಲುವು ಸಾಧಿಸಿದ್ದ ಭಾರತ ಇದೀಗ ಕಿರ್ಗಿಸ್ತಾನದಿಂದ ಪ್ರಬಲ ಪೈಪೋಟಿ ಎದುರುಗೊಳ್ಳುವ ನಿರೀಕ್ಷೆ ಇದೆ. ಫಿಫಾ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತ 100ನೇ ಸ್ಥಾನದಲ್ಲಿದ್ದರೆ, ಕಿರ್ಗಿಸ್ತಾನ 132ನೇ ಸ್ಥಾನದಲ್ಲಿದೆ. ಆದರೆ ಉಭಯ ತಂಡಗಳ ಬಲಾಬಲಗಳನ್ನು ನೋಡಿದಾಗ, ಕಿರ್ಗಿಸ್ತಾನ ಭಾರತಕ್ಕೆ ಸರಿಸಮಾನವಾಗಿರುವಂತೆ ತೋರುತ್ತಿದೆ. ಇತ್ತೀಚಿನವರೆಗೂ ರ್ಯಾಂಕಿಂಗ್'ನಲ್ಲಿ ಎರಡಂಕಿಯಲ್ಲಿದ್ದ ಕಿರ್ಗಿಸ್ತಾನ ಒಂದೆರಡು ಸೋಲ ಕಂಡಿದ್ದರಿಂದ ಕೆಳಗೆ ಕುಸಿದಿದೆ. ಅದು ಬಿಟ್ಟರೆ, ತಂಡವಾರು ಬಲಾಬಲದಲ್ಲಿ ಭಾರತಕ್ಕಿಂತ ಕಿರ್ಗಿಸ್ತಾನ ತುಸು ಹೆಚ್ಚು ಬಲಿಷ್ಠವಾಗಿ ತೋರುತ್ತಿದೆ.

‘ಎ' ಗುಂಪಿನಲ್ಲಿ ಅಗ್ರ 2 ಸ್ಥಾನದಲ್ಲಿರುವ ಉಭಯ ತಂಡಗಳು ಮೊದಲ ಲೀಗ್‌ ಪಂದ್ಯದಲ್ಲಿ ಗೆಲುವು ಸಾಧಿಸಿ ತಲಾ 3 ಅಂಕ ಸಂಪಾದಿಸಿವೆ. 2019ರ ಏಷ್ಯಾಕಪ್‌ಗೆ ಅರ್ಹತೆ ಗಿಟ್ಟಿಸುವ ನಿಟ್ಟಿನಲ್ಲಿ ಈ ಪಂದ್ಯ ಭಾರತ ಹಾಗೂ ಕಿರ್ಗಿಸ್ತಾನ ಎರಡೂ ತಂಡಕ್ಕೆ ಮಹತ್ವದಾಗಿದೆ. ಗೆದ್ದವರಿಗೆ ಪ್ರಧಾನ ಸುತ್ತಿಗೇರುವ ಅವಕಾಶ ಹೆಚ್ಚಾಗಲಿದೆ. 24 ತಂಡಗಳು ಸ್ಪರ್ಧಿಸುತ್ತಿರುವ ಮೂರು ಸುತ್ತಿನ ಪಂದ್ಯಾವಳಿಯಲ್ಲಿ ತಲಾ 4 ತಂಡಗಳ ಆರು ಗುಂಪುಗಳಲ್ಲಿದ್ದು, ಪ್ರತಿ ಗುಂಪಿನಿಂದ ಅಗ್ರ 2 ತಂಡಗಳು 2019 ಏಷ್ಯಾಕಪ್‌ಗೆ ಪ್ರವೇಶ ಪಡೆಯಲಿವೆ.

ಮೊದಲ ಪಂದ್ಯದಲ್ಲಿ ಭಾರತ, ಮಯನ್ಮಾರ್ ವಿರುದ್ಧ 1-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತ್ತು. ಇದೇ ವೇಳೆ ಕಿರ್ಗಿಸ್ತಾನ ತನ್ನ ತವರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ಮಕಾವ್‌ ವಿರುದ್ಧ 1-0 ಗೋಲುಗಳಲ್ಲಿ ಜಯ ಸಾಧಿಸಿತ್ತು.

ಪಂದ್ಯದಲ್ಲಿ ಭಾರತಕ್ಕೆ ಪ್ರಮುಖ ಆಟಗಾರರ ಅನುಪಸ್ಥಿತಿ ಕಾಡಲಿದೆ. ಗಾಯಾಳು ಉದಾಂತ ಸಿಂಗ್‌ ಹಾಗೂ ಸಿ.ಕೆ.ವಿನೀತ್‌ ಪಂದ್ಯದಿಂದ ಹೊರಬಿದ್ದಿದ್ದಾರೆ. ಅಲ್ಲದೇ ಎಗ್ಯುನ್‌'ಸನ್‌ ಲಿಂಗ್ಡೊ ಅವರ ಕಳಪೆ ಫಾಮ್‌ರ್‍ ಸಹ ತಂಡದ ಚಿಂತೆಗೆ ಕಾರಣವಾಗಿದೆ. ಆದರೆ ನಾಯಕ ಸುನಿಲ್‌ ಚೆಟ್ರಿ ಗಾಯದಿಂದ ಸಂಪೂರ್ಣ ಗುಣಮುಖರಾಗಿರುವುದು ತಂಡಕ್ಕೆ ಬಲ ತುಂಬಲಿದೆ. ಜೆಜೆ ಲಾಲ್‌ಪೆಕುಲಾ ಸಹ ಲಯ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ.

ಕಂಠೀರವ ಸ್ಟೇಡಿಯಂನಲ್ಲಿ ರಾತ್ರಿ 8ಗಂಟೆಗೆ ಈ ಪಂದ್ಯ ಆರಂಭಗೊಳ್ಳಲಿದೆ.

ಕನ್ನಡಪ್ರಭ ವಾರ್ತೆ
epaper.kannadaprabha.in

click me!