
ನವದೆಹಲಿ: ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಪಂದ್ಯಾವಳಿಯ ತಂಡಗಳು 10ಕ್ಕೆ ಏರಿಕೆಯಾಗಿದೆ. ಈ ಆವೃತ್ತಿಯಲ್ಲಿ 2 ಹೊಸ ತಂಡಗಳು ಪಾಲ್ಗೊಳ್ಳಲಿವೆ ಎಂದು ಆಯೋಜಕರು ಸೋಮವಾರ ತಿಳಿಸಿದರು. ಐ-ಲೀಗ್ ತೊರೆಯಲಿರುವ ಬೆಂಗಳೂರು ಫುಟ್ಬಾಲ್ ಕ್ಲಬ್ 3 ಆವೃತ್ತಿಗಳನ್ನು ಕಂಡಿರುವ ಐಎಸ್‌ಎಲ್‌ನ 4ನೇ ಆವೃತ್ತಿಯಲ್ಲಿ ಪಾಲ್ಗೊಳ್ಳಲಿದೆ.
ಮತ್ತೊಂದು ತಂಡವನ್ನು ಟಾಟಾ ಸ್ಟೀಲ್ ಸಂಸ್ಥೆ ಖರೀದಿಸಿದ್ದು, ಜಮ್'ಶೆಡ್'ಪುರ್'ನಲ್ಲಿ ತಂಡ ಸ್ಥಾಪನೆಗೊಳ್ಳಲಿದೆ. ಐಎಸ್‌ಎಲ್'ನಲ್ಲಿ ಪಾಲ್ಗೊಳ್ಳಲು ಆಯೋಜಕರು ಹೊಸದಾಗಿ ಟೆಂಡರ್ ಆಹ್ವಾನಿಸಿದ್ದರು. ನಾಲ್ಕನೇ ಆವೃತ್ತಿಯಲ್ಲಿ 5 ತಿಂಗಳುಗಳ ಕಾಲ ಪಂದ್ಯಾವಳಿ ನಡೆಯಲಿದ್ದು, 8 ನಗರಗಳ ತಂಡಗಳ ಬದಲಿಗೆ 10 ತಂಡಗಳು ಪ್ರಶಸ್ತಿಗೆ ಸೆಣಸಾಡಲಿವೆ.
ಐ-ಲೀಗ್ ತಂಡಗಳು ಐಎಸ್‌ಎಲ್'ಗೆ ಸೇರ್ಪಡೆಗೊಳ್ಳುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೆ ಬೆಂಗಳೂರು ಎಫ್‌ಸಿ ಸೇರ್ಪಡೆಗೊಂಡಿರುವುದನ್ನು ನೋಡಿದರೆ ಅಖಿಲ ಭಾರತೀಯ ಫುಟ್ಬಾಲ್ ಸಂಸ್ಥೆ ಒಪ್ಪಿಗೆ ಸೂಚಿಸಿರುವುದು ತಿಳಿದುಬರುತ್ತದೆ. ಅಲ್ಲದೇ ಬಿಎಫ್‌ಸಿಗೆ ಎಎಫ್‌ಸಿ ಕಪ್ ಪ್ಲೇ-ಆಫ್‌ನಲ್ಲಿ ಆಡಲು ಸಹ ಅನುಮತಿ ಸೂಚಿಸಿದೆ ಎನ್ನಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಬಿಎಫ್‌ಸಿ ಐ-ಲೀಗ್'ನಲ್ಲಿ 2 ಬಾರಿ ಪ್ರಶಸ್ತಿ ಗೆದ್ದಿತ್ತು. ಅಲ್ಲದೇ ಎಎಫ್'ಸಿ ಕಪ್'ನ ಕಳೆದ ಆವೃತ್ತಿಯಲ್ಲಿ ರನ್ನರ್-ಅಪ್ ಸ್ಥಾನ ಪಡೆದಿತ್ತು.
ಭಾರತದ ಇತರೆ ಎರಡು ಪ್ರಮುಖ ಕ್ಲಬ್‌ಗಳಾದ ಮೋಹನ್ ಬಗಾನ್ ಹಾಗೂ ಈಸ್ಟ್ ಬೆಂಗಾಲ್ ಸಹ ಐಎಸ್'ಎಲ್‌ಗೆ ಸೇರುವ ಆಸಕ್ತಿ ತೋರಿದ್ದವು. ಆದರೆ ಹಣಕಾಸು ವಿಚಾರದಲ್ಲಿ ಆಯೋಜಕರೊಂದಿಗೆ ಹೊಂದಾಣಿಕೆಯಾಗದ ಕಾರಣ, ತಂಡಗಳು ಹಿಂದೆ ಸರಿದಿದ್ದವು. ಮೂಲಗಳ ಪ್ರಕಾರ, ಐಎಸ್‌ಎಲ್ ದೇಶದ ಪ್ರಮುಖ ಫುಟ್ಬಾಲ್ ಲೀಗ್ ಆಗಲಿದ್ದು, ಐ-ಲೀಗ್'ಗಿಂತ ಹೆಚ್ಚಿನ ಮಹತ್ವ ಸಿಗಲಿದೆ ಎನ್ನಲಾಗಿದೆ. ಕಳೆದ ಮೂರು ಸೀಸನ್'ನಲ್ಲಿ ಇಂಡಿಯನ್ ಸೂಪರ್ ಲೀಗ್ ಭಾರೀ ಜನಪ್ರಿಯತೆ ಗಳಿಸುವಲ್ಲಿ ಯಶಸ್ವಿಯಾಗಿದೆ. ಜನಪ್ರಿಯತೆಯಲ್ಲಿ ಐ-ಲೀಗ್'ಗಿಂತ ಐಎಸ್'ಎಲ್ ತೀರಾ ಮುಂದಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಎಫ್'ಸಿ ಮತ್ತು ಟಾಟಾ ಸ್ಟೀಲ್ ಕ್ಲಬ್ ತಂಡಗಳು ಸಕಾಲದಲ್ಲಿ ಸೂಪರ್ ಲೀಗ್ ಅಖಾಡಕ್ಕೆ ಇಳಿದಿವೆ.
epaper.kannadaprabha.in
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.