ಮೂರನೇ ಪಂದ್ಯದಲ್ಲಿ ಮುನ್ನಡೆ ಯಾರಿಗೆ?

Published : Oct 22, 2016, 04:54 PM ISTUpdated : Apr 11, 2018, 01:09 PM IST
ಮೂರನೇ ಪಂದ್ಯದಲ್ಲಿ ಮುನ್ನಡೆ ಯಾರಿಗೆ?

ಸಾರಾಂಶ

ಇಲ್ಲಿನ ಪಂಜಾಬ್ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆಯಲಿರುವ ಪಂದ್ಯವು ಉಭಯರಿಗೂ ಸರಣಿಯಲ್ಲಿ ಮುನ್ನಡೆ ಸಾಧಿಸುವ ದಿಸೆಯಲ್ಲಿ ಮಹತ್ವದ್ದಾಗಿದೆ. ಕೇನ್ ವಿಲಿಯಮ್ಸನ್ ಗಳಿಸಿದ ಭರ್ಜರಿ ಶತಕದಿಂದಾಗಿ ಕೋಟ್ಲಾ ಪಂದ್ಯದಲ್ಲಿ 6 ರನ್ ರೋಚಕ ಗೆಲುವು ಕಂಡ ಕಿವೀಸ್ ಆತ್ಮವಿಶ್ವಾಸದಲ್ಲಿದೆ.

ಮೊಹಾಲಿ(ಅ.22): ಧರ್ಮಶಾಲಾದಲ್ಲಿನ ಮೊದಲ ಪಂದ್ಯದಲ್ಲಿ ಆರು ವಿಕೆಟ್ ಗೆಲುವು ಸಾಸಿದ ಹುಮ್ಮಸ್ಸಿನಲ್ಲಿ ಐದು ಏಕದಿನ ಪಂದ್ಯ ಸರಣಿಯಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆಯಬೇಕೆಂಬ ಗುರಿ ಹೊತ್ತಿದ್ದ ಎಂ.ಎಸ್. ಧೋನಿ ಸಾರಥ್ಯದ ಭಾರತ ತಂಡಕ್ಕೆ ಕೋಟ್ಲಾ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ ಎದಿರೇಟು ಎಚ್ಚರಿಕೆಯ ಗಂಟೆಯಂತಾಗಿದ್ದು, ಇದೀಗ ಮೊಹಾಲಿಯಲ್ಲಿ ಇಂದು ನಡೆಯುತ್ತಿರುವ ಮೂರನೇ ಪಂದ್ಯದಲ್ಲಿ ಜಯದ ಹಳಿಗೆ ಮರಳಲು ಧೋನಿ ಬಳಗ ಗುರಿ ಹೊತ್ತಿದ್ದರೆ, ಕೇನ್ ವಿಲಿಯಮ್ಸನ್ ಪಡೆ ಸ್ಥಿರ ಪ್ರದರ್ಶನ ಕಾಯ್ದುಕೊಳ್ಳುವ ಸಂಕಲ್ಪ ತೊಟ್ಟಿದೆ.

ಇಲ್ಲಿನ ಪಂಜಾಬ್ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆಯಲಿರುವ ಪಂದ್ಯವು ಉಭಯರಿಗೂ ಸರಣಿಯಲ್ಲಿ ಮುನ್ನಡೆ ಸಾಧಿಸುವ ದಿಸೆಯಲ್ಲಿ ಮಹತ್ವದ್ದಾಗಿದೆ. ಕೇನ್ ವಿಲಿಯಮ್ಸನ್ ಗಳಿಸಿದ ಭರ್ಜರಿ ಶತಕದಿಂದಾಗಿ ಕೋಟ್ಲಾ ಪಂದ್ಯದಲ್ಲಿ 6 ರನ್ ರೋಚಕ ಗೆಲುವು ಕಂಡ ಕಿವೀಸ್ ಆತ್ಮವಿಶ್ವಾಸದಲ್ಲಿದೆ.

ಇತ್ತ ದೆಹಲಿಯಲ್ಲಿ ಎದುರಾದ ಸೋಲು ಭಾರತ ತಂಡವನ್ನು ಕೊಂಚ ಕೆಣಕಿದೆಯಾದರೂ, ಅದರ ಆತ್ಮವಿಶ್ವಾಸವನ್ನೇನೂ ಸಂಪೂರ್ಣ ಘಾಸಿಗೊಳಿಸಿಲ್ಲ. ಯುವ ಆಟಗಾರ ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ ಮತ್ತು ನಾಯಕ ಧೋನಿ ಕಿವೀಸ್‌ಗೆ ಸವಾಲಾಗಿ ಮಾರ್ಪಟ್ಟಿದ್ದರು. ಆದರೆ, ಕೊನೆ ಕೊನೆಗೆ ಕಿವೀಸ್‌ನ ಬೌಲರ್‌ಗಳು ಸಮಯೋಚಿತ ಪ್ರದರ್ಶನ ನೀಡಿದ್ದು ಧೋನಿ ಪಡೆ ಮುಗ್ಗರಿಸುವಂತೆ ಮಾಡಿತ್ತು. ಮುಂದಿನ ವರ್ಷ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಈ ತಪ್ಪುಗಳನ್ನು ತಿದ್ದಿಕೊಳ್ಳಲು ಯುವ ಆಟಗಾರರಿಗೆ ಇದೊಂದು ಪಾಠವಾಗಿದೆ.

ಮೊಹಾಲಿ ನೆಚ್ಚಿನ ತಾಣ

ಅಂದಹಾಗೆ ಮೊಹಾಲಿ ನೆಲದಲ್ಲಿ ನಡೆದಿರುವ ಕಳೆದ ಐದು ಪಂದ್ಯಗಳಲ್ಲಿ ಕೇವಲ ಒಂದರಲ್ಲಷ್ಟೇ ಸೋತಿರುವ ಭಾರತ ತಂಡ, ಜಯದ ವಿಶ್ವಾಸದಲ್ಲಿದೆ. ಧರ್ಮಶಾಲಾ ಪಂದ್ಯದಲ್ಲಿ ಅರ್ಧಶತಕದೊಂದಿಗೆ ಮಿಂಚಿದ್ದ ಕೊಹ್ಲಿ, ಕಳೆದ ಪಂದ್ಯದಲ್ಲಿನ ಬ್ಯಾಟಿಂಗ್ ವೈಫಲ್ಯದಿಂದ ಹೊರಬರಬೇಕಿದ್ದು, ಅಂತೆಯೇ ಆರಂಭಿಕ ರೋಹಿತ್ ಶರ್ಮಾ ಕೂಡ ಸ್ಥಿರ ಪ್ರದರ್ಶನ ನೀಡಬೇಕಿದೆ. ತಂಡಕ್ಕೆ ಗಟ್ಟಿ ಅಡಿಪಾಯ ಹಾಕಿಕೊಡಲು ಅಜಿಂಕ್ಯ ರಹಾನೆ ಕೂಡ ಅವರೊಂದಿಗೆ ಶ್ರಮಿಸಬೇಕಿದೆ. ಇನ್ನು ಮಧ್ಯಮ ಕ್ರಮಾಂಕ ಕೂಡ ಗಟ್ಟಿಯಾಗಿದ್ದು, ಮನೀಶ್ ಪಾಂಡೆ ಜತೆಗೆ ನಾಯಕ ಧೋನಿ ಜವಾಬ್ದಾರಿಯುತ ಆಟವಾಡಿದರೆ ತಂಡದ ಸ್ಪರ್ಧಾತ್ಮಕ ಮೊತ್ತಕ್ಕೇನೂ ಕುಂದಾಗದು. ಬೌಲಿಂಗ್‌ನಲ್ಲಿ ವೇಗಿಗಳಾದ ಉಮೇಶ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ಜತೆಗೆ ಸ್ಪಿನ್ನರ್‌ಗಳಾದ ಅಕ್ಷರ್ ಪಟೇಲ್ ಮತ್ತು ಅಮಿತ್ ಮಿಶ್ರಾ ಸಾಥ್ ನೀಡುತ್ತಿದ್ದು, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತೊಮ್ಮೆ ನಿರ್ಣಾಯಕ ಪಾತ್ರ ವಹಿಸುವ ವಿಶ್ವಾಸದಲ್ಲಿದ್ದಾರೆ.

ಸಂಭವನೀಯರ ಪಟ್ಟಿ

ಭಾರತ

ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ, ವಿರಾಟ್ ಕೊಹ್ಲಿ, ಮನೀಶ್ ಪಾಂಡೆ, ಎಂ.ಎಸ್. ಧೋನಿ (ನಾಯಕ), ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಅಮಿತ್ ಮಿಶ್ರಾ, ಉಮೇಶ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ.

ನ್ಯೂಜಿಲೆಂಡ್

ಮಾರ್ಟಿನ್ ಗುಪ್ಟಿಲ್, ಟಾಮ್ ಲಾಥಮ್, ಕೇನ್ ವಿಲಿಯಮ್ಸನ್ (ನಾಯಕ), ರಾಸ್ ಟೇಲರ್, ಕೊರೆ ಆ್ಯಂಡರ್ಸನ್, ಲೂಕ್ ರೊಂಚಿ (ವಿಕೆಟ್‌ಕೀಪರ್), ಜೇಮ್ಸ್ ಆ್ಯಂಡರ್ಸನ್ / ಆ್ಯಂಟನ್ ಡೇವ್‌ಸಿಚ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥೀ, ಟ್ರೆಂಟ್ ಬೌಲ್ಟ್ ಮತ್ತು ಮ್ಯಾಟ್ ಹೆನ್ರಿ.

ಪಂದ್ಯ ಆರಂಭ: ಮಧ್ಯಾಹ್ನ 1.30  ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇದೇ ನನ್ನ ಮೊದಲ ಬ್ಯಾಟ್‌, ತೆಂಗಿನ ಹೆಡೆಯನ್ನು ವೇದಿಕೆಗೆ ತಂದು ತೋರಿಸಿದ ಟೀಮ್‌ ಇಂಡಿಯಾ ಬ್ಯಾಟರ್‌!
CSK ಫ್ರಾಂಚೈಸಿಗೆ ಬಲವಾದ ಹೊಡೆತ; ಗಾಯದಿಂದಾಗಿ ತಂಡದ ಕ್ಯಾಪ್ಟನ್‌ ಟೂರ್ನಿಯಿಂದಲೇ ಔಟ್!