
ಮುಂಬೈ(ಅ.22): ನ್ಯಾ. ಲೋಧಾ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸಲು ಒಪ್ಪಿಕೊಂಡಿರುವ ಭಾರತೀಯ ಕ್ರಿಕೆಟ್ ಮಂಡಳಿಯ (ಬಿಸಿಸಿಐ) ಕಾರ್ಯದರ್ಶಿ ಅಜಯ್ ಶಿರ್ಕೆ ಲೋಧಾ ಸಮಿತಿಗೆ ಇಂದು ಪತ್ರ ಬರೆದಿದ್ದು, 2018ರ ಐಪಿಎಲ್‌ನ ಪ್ರಸಾರ ಹಕ್ಕುಗಳ ಮಾರಾಟಕ್ಕೆ ಸಂಬಂಸಿದಂತೆ ಸ್ಪಷ್ಟ ನಿರ್ದೇಶನ ನೀಡಬೇಕೆಂದು ಕೋರಿದೆ.
ಪ್ರಸಾರ ಹಕ್ಕುಗಳ ವಿಚಾರವಾಗಿ ಬಿಡ್ ಆಹ್ವಾನಿಸಿರುವ ಬಿಸಿಸಿಐ, ಅದಕ್ಕಾಗಿ ಅ. 25ರಂದು ಗಡುವು ನೀಡಿದೆ. ಈ ಬಾರಿ, ಭಾರತದಲ್ಲಿ ಹಾಗೂ ವಿದೇಶಗಳಲ್ಲಿ ಟೆಲಿವಿಷನ್ ಮೂಲಕ ನೇರಪ್ರಸಾರ, ಅಂತರ್ಜಾಲದಲ್ಲಿನ ಪ್ರಸಾರಗಳನ್ನು ಒಟ್ಟಾರೆಯಾಗಿ ಸೇರಿಸಿ ಪ್ರಸಾರ ಹಕ್ಕುಗಳನ್ನು ಮಾರುವ ಚಿಂತನೆಯನ್ನು ಬಿಸಿಸಿಐ ಮಾಡಿತ್ತು. ಇದೀಗ, ನ್ಯಾ. ಲೋಧಾ ಸಮಿತಿಯ ಶಿಫಾರಸುಗಳ ಅನುಷ್ಠಾನಗೊಂಡಿರುವುದರಿಂದ ಬಿಸಿಸಿಐನ ಕೋಟ್ಯಾನುಕೋಟಿ ಬಂಡವಾಳಕ್ಕೆ ಕೊಕ್ಕೆ ಬೀಳಲಿದೆ. ಈ ಹಿನ್ನೆಲೆಯಲ್ಲಿ, ಅಜಯ್ ಶಿರ್ಕೆ ಅವರು, ಬಿಸಿಸಿಐಗೆ ಪತ್ರ ಬರೆದು ಜಾಗತಿಕ ಟೆಂಡರ್‌ನಲ್ಲಿ ವಿಶ್ವದ ಖ್ಯಾತ ಮಾಧ್ಯಮ ಸಂಸ್ಥೆಗಳು ಬಿಡ್ ಸಲ್ಲಿಸಿವೆ. ಆದ್ದರಿಂದ, ಟೆಂಡರ್ ಪ್ರಕ್ರಿಯೆ ಕುರಿತಂತೆ ಸ್ಪಷ್ಟ ನಿರ್ದೇಶನ ನೀಡಬೇಕೆಂದು ಅವರು ಸಮಿತಿಯನ್ನು ಕೋರಿದ್ದಾರೆ.
ಬಿಸಿಸಿಐನ ಎಲ್ಲಾ ಟೆಂಡರ್ ಪ್ರಕ್ರಿಯೆಗಳ ಮೇಲೆ ನಿಗಾ ವಹಿಸಲು ಸ್ವತಂತ್ರ ಆಡಿಟರ್ ಒಬ್ಬರನ್ನು ನೀಡಬೇಕೆಂದು ಇತ್ತೀಚೆಗೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ, ಡಿಲೋಯ್ಟಿ ಸಂಸ್ಥೆಯು ಬಿಸಿಸಿಐ ಆಡಿಟಿಂಗ್ ಸಂಸ್ಥೆಯಾಗಿ ನೇಮಕಗೊಂಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.