ಮೂರನೇ ಟೆಸ್ಟ್'ನಲ್ಲಿ ಪ್ರಮುಖ 3 ಬದಲಾವಣೆ ಗ್ಯಾರಂಟಿ..?

By Suvarna Web DeskFirst Published Jan 22, 2018, 11:46 AM IST
Highlights

ದಿನೇಶ್ ಕಾರ್ತಿಕ್ ಸಹ ದೀರ್ಘ ಕಾಲ ಅಭ್ಯಾಸದಲ್ಲಿ ತೊಡಗಿದರು. 3ನೇ ಟೆಸ್ಟ್‌'ನಲ್ಲಿ ಪಾರ್ಥೀವ್ ಪಟೇಲ್ ಬದಲಿಗೆ ವಿಕೆಟ್ ಕೀಪರ್ ಸ್ಥಾನವನ್ನು ಅವರು ಪಡೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ವೇಗಿ ಭುವನೇಶ್ವರ್ ಸಹ ಸತತವಾಗಿ ಬೌಲ್ ಮಾಡಿದ್ದು, ಅವರು 3ನೇ ಟೆಸ್ಟ್‌'ನಲ್ಲಿ ಆಡಲಿದ್ದಾರೆ ಎನ್ನುವ ಸೂಚನೆ ನೀಡಿತು.

ವ್ಯಾಂಡರರ್ಸ್(ಜ.22): ದಕ್ಷಿಣ ಆಫ್ರಿಕಾ ವಿರುದ್ಧ ಮಹತ್ವದ ಟೆಸ್ಟ್ ಸರಣಿಯಲ್ಲಿ ಮೊದಲೆರಡು ಪಂದ್ಯಗಳನ್ನು ಸೋತು, ಸರಣಿ ಬಿಟ್ಟುಕೊಟ್ಟಿರುವ ಭಾರತ ತಂಡ 3ನೇ ಪಂದ್ಯದಲ್ಲಿ ಪುಟಿದೇಳಲು ಕಾತರಿಸುತ್ತಿದೆ. ಹರಿಣ ಪಡೆಯ ಅಬ್ಬರಕ್ಕೆ ಸಿಲುಕಿ ಭಾರೀ ಮುಖಭಂಗಕ್ಕೆ ಒಳಗಾಗಿರುವ ವಿಶ್ವ ನಂ.1 ತಂಡ, ಬುಧವಾರದಿಂದ ಆರಂಭಗೊಳ್ಳಲಿರುವ ಟೆಸ್ಟ್ ಪಂದ್ಯಕ್ಕಾಗಿ ಕಠಿಣ ಅಭ್ಯಾಸದಲ್ಲಿ ತೊಡಗಿದೆ.

ಭಾನುವಾರ ವಿರಾಟ್ ಕೊಹ್ಲಿ ತಮ್ಮ ತಂಡದ ಪ್ರಮುಖ ಬ್ಯಾಟ್ಸ್‌'ಮನ್‌'ಗಳೊಂದಿಗೆ ನೆಟ್ಸ್‌'ನಲ್ಲಿ ದೀರ್ಘ ಕಾಲ ಅಭ್ಯಾಸ ನಡೆಸಿದರು. ಈಗಾಗಲೇ ಪಿಚ್ ಹೇಗೆ ವರ್ತಿಸಲಿದೆ ಎನ್ನುವ ಸೂಚನೆ ಸಿಕ್ಕಿರುವುದರಿಂದ, ಎದುರಾಗುವ ಸವಾಲುಗಳಿಗೆ ತಂಡ ಸಜ್ಜಾಗುತ್ತಿದೆ. ತಂಡದ ಅಭ್ಯಾಸಕ್ಕೆ ನೆರವಾಗಲೆಂದೇ ಆಫ್ರಿಕಾಕ್ಕೆ ತೆರಳಿದ ವೇಗಿಗಳಾದ ಶಾರ್ದೂಲ್ ಠಾಕೂರ್ ಹಾಗೂ ನವ್'ದೀಪ್ ಸೈನಿ, ನೆಟ್ಸ್‌'ನಲ್ಲಿ ಬೌಲ್ ಮಾಡಿದರು. ನಾಯಕ ಕೊಹ್ಲಿ ಅಭ್ಯಾಸ ನಡೆಸಿದ ನೆಟ್‌'ನ ಪಕ್ಕದ ನೆಟ್‌'ನಲ್ಲೇ ಅಜಿಂಕ್ಯ ರಹಾನೆ ಸಹ ಬ್ಯಾಟಿಂಗ್ ಮಾಡಿದರು. ಅಭ್ಯಾಸದ ಮಧ್ಯೆ, ಕೊಹ್ಲಿ ಹಾಗೂ ರಹಾನೆ ಹೆಚ್ಚು ಹೊತ್ತು ಚರ್ಚೆಯಲ್ಲಿ ತೊಡಗಿದ್ದು ಎಲ್ಲರ ಗಮನ ಸೆಳೆಯಿತು. ಮಧ್ಯಮ ಕ್ರಮಾಂಕದಲ್ಲಿ ಭಾರತ ಸಮಸ್ಯೆ ಎದುರಿಸುತ್ತಿದ್ದು, ಮೊದಲೆರಡು ಟೆಸ್ಟ್‌'ಗಳಿಗೆ ರಹಾನೆಯನ್ನು ಕೈಬಿಟ್ಟಿದ್ದಕ್ಕೆ ಭಾರೀ ಟೀಕೆ ವ್ಯಕ್ತವಾಗಿತ್ತು. ವ್ಯಾಂಡರರ್ಸ್‌'ನಲ್ಲಿ 5ನೇ ಕ್ರಮಾಂಕದಲ್ಲಿ ರಹಾನೆ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.

ಇದೇ ವೇಳೆ, ದಿನೇಶ್ ಕಾರ್ತಿಕ್ ಸಹ ದೀರ್ಘ ಕಾಲ ಅಭ್ಯಾಸದಲ್ಲಿ ತೊಡಗಿದರು. 3ನೇ ಟೆಸ್ಟ್‌'ನಲ್ಲಿ ಪಾರ್ಥೀವ್ ಪಟೇಲ್ ಬದಲಿಗೆ ವಿಕೆಟ್ ಕೀಪರ್ ಸ್ಥಾನವನ್ನು ಅವರು ಪಡೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ವೇಗಿ ಭುವನೇಶ್ವರ್ ಸಹ ಸತತವಾಗಿ ಬೌಲ್ ಮಾಡಿದ್ದು, ಅವರು 3ನೇ ಟೆಸ್ಟ್‌'ನಲ್ಲಿ ಆಡಲಿದ್ದಾರೆ ಎನ್ನುವ ಸೂಚನೆ ನೀಡಿತು.

ರಾಹುಲ್‌'ಗೆ ಗಾಯ: ಭಾನುವಾರ ಅಭ್ಯಾಸದ ವೇಳೆ ಭಾರತ ತಂಡದ ಆರಂಭಿಕ ಬ್ಯಾಟ್ಸ್'ಮನ್ ಕೆ.ಎಲ್. ರಾಹುಲ್ ಎಡ ಮಂಡಿ ಗಾಯಕ್ಕೆ ತುತ್ತಾಗಿದ್ದು, 3ನೇ ಟೆಸ್ಟ್‌'ಗೆ ಅವರ ಲಭ್ಯತೆ ಬಗ್ಗೆ ಅನುಮಾನ ಶುರುವಾಗಿದೆ. ನೆಟ್ಸ್'ನಲ್ಲಿ ವೇಗದ ಬೌಲರ್ ಇಶಾಂತ್ ಶರ್ಮಾ ಅವರ ಎಸೆತವನ್ನು ಎದುರಿಸುವ ವೇಳೆ ಗಾಯಗೊಂಡ ರಾಹುಲ್‌'ಗೆ ತಕ್ಷಣ ಚಿಕಿತ್ಸೆ ನೀಡಲಾಯಿತು.

click me!