ಲಂಕಾ ಪ್ರವಾಸಕ್ಕೂ ಮುನ್ನ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಶುಭಸುದ್ದಿ..!

By Suvarna Web DeskFirst Published Mar 1, 2018, 1:07 PM IST
Highlights

ಶ್ರೀಲಂಕಾದಲ್ಲಿ ನಡೆಯಲಿರುವ ತ್ರಿಕೋನ ಟಿ2೦ ಸರಣಿಗೆ ಭಾರತ ತಂಡ ಮಾ.3ರಂದು ತೆರಳಲಿದ್ದು, ಸುಪ್ರೀಂ ಕೋರ್ಟ್ ಅನುಮತಿ ಮೇರೆಗೆ ಪ್ರವಾಸಕ್ಕೂ ಮೊದಲೇ ಕೇಂದ್ರ ಗುತ್ತಿಗೆಯನ್ನು ನವೀಕರಿಸಲು ಬಿಸಿಸಿಐ ಆಡಳಿತ ಸಮಿತಿ ನಿರ್ಧರಿಸಿದೆ ಎನ್ನಲಾಗಿದೆ.

ನವದೆಹಲಿ(ಮಾ.01): ಭಾರತೀಯ ಕ್ರಿಕೆಟಿಗರ ವೇತನ ಹೆಚ್ಚಳ ಬೇಡಿಕೆಯನ್ನು ಸುಪ್ರೀಂ ಕೋರ್ಟ್ ನೇಮಿತ ಬಿಸಿಸಿಐ ಆಡಳಿತ ಸಮಿತಿ ಈಡೇರಿಸುವ ದಿನ ಹತ್ತಿರವಾದಂತಿದೆ. ಶ್ರೀಲಂಕಾದಲ್ಲಿ ನಡೆಯಲಿರುವ ತ್ರಿಕೋನ ಟಿ2೦ ಸರಣಿಗೆ ಭಾರತ ತಂಡ ಮಾ.3ರಂದು ತೆರಳಲಿದ್ದು, ಸುಪ್ರೀಂ ಕೋರ್ಟ್ ಅನುಮತಿ ಮೇರೆಗೆ ಪ್ರವಾಸಕ್ಕೂ ಮೊದಲೇ ಕೇಂದ್ರ ಗುತ್ತಿಗೆಯನ್ನು ನವೀಕರಿಸಲು ಬಿಸಿಸಿಐ ಆಡಳಿತ ಸಮಿತಿ ನಿರ್ಧರಿಸಿದೆ ಎನ್ನಲಾಗಿದೆ.

ಕೆಲ ರಾಷ್ಟ್ರೀಯ ಮಾಧ್ಯಮಗಳ ವರದಿ ಪ್ರಕಾರ, ಅಗ್ರ ದರ್ಜೆ ಆಟಗಾರರ ವೇತನವನ್ನು ವಾರ್ಷಿಕ ₹12 ಕೋಟಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ‘ಭಾರತ ಪುರುಷ, ಮಹಿಳಾ, ದೇಸಿ ಹಾಗೂ ಅಂಡರ್-19 ಕ್ರಿಕೆಟಿಗರ ವೇತನ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಿಸಲು ನಿರ್ಧರಿಸಲಾಗಿದೆ. ಯಾರಿಗೆ ಎಷ್ಟು ಹೆಚ್ಚಳ ಮಾಡಬೇಕು ಎನ್ನುವುದು

ಈಗಾಗಲೇ ಅಂತಿಮಗೊಂಡಿದೆ’ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ. ಬಿಸಿಸಿಐ ಅಧಿಕಾರಿ ಪ್ರಕಾರ ‘ಎ’ ದರ್ಜೆ ಆಟಗಾರರ ಗುತ್ತಿಗೆ ಮೊತ್ತವನ್ನು ವಾರ್ಷಿಕ ₹12 ಕೋಟಿಗೆ ಏರಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಎ+, ಎ,ಬಿ ಹಾಗೂ ಸಿ ಒಟ್ಟು 4 ದರ್ಜೆಗಳಲ್ಲಿ ಆಟಗಾರರಿಗೆ ಸ್ಥಾನ ನೀಡಲಾಗುತ್ತದೆ ಎಂದು ಹೇಳಲಾಗಿದೆ.

‘ಶ್ರೀಲಂಕಾಗೆ ಭಾರತ ತಂಡ ಪ್ರವಾಸ ಕೈಗೊಳ್ಳುವ ಮೊದಲೇ ಸುಮಾರು 25 ಆಟಗಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಹಣಕಾಸು ಸಮಿತಿಯ ಅನುಮೋದನೆಗಾಗಿ ಇಷ್ಟು ದಿನ ಕಾಯುತ್ತಿದ್ದೆವು. ಆದರೆ ಸಮಿತಿ ಸಭೆಯನ್ನೂ ನಡೆಸಿಲ್ಲ ಇಲ್ಲವೇ ಸಮಸ್ಯೆ ಬಗ್ಗೆ ಪ್ರತಿಕ್ರಿಯೆಯನ್ನೂ ನೀಡಿಲ್ಲ. ಐಪಿಎಲ್‌'ಗೂ ಮುನ್ನ ಆಟಗಾರರ ಗುತ್ತಿಗೆ ನವೀಕರಿಸಬೇಕಿದೆ.

ಇಲ್ಲವಾದಲ್ಲಿ ಐಪಿಎಲ್ ವಿಮೆ ಕಾರ್ಯಗತಗೊಳ್ಳುವುದಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸದ್ಯ ‘ಎ’ ದರ್ಜೆ ಆಟಗಾರರಿಗೆ ₹2 ಕೋಟಿ, ‘ಬಿ’ ದರ್ಜೆ ಆಟಗಾರರಿಗೆ ₹1 ಕೋಟಿ ಹಾಗೂ ‘ಸಿ’ ದರ್ಜೆ ಆಟಗಾರರಿಗೆ ವರ್ಷಕ್ಕೆ ₹50 ಲಕ್ಷ ನೀಡಲಾಗುತ್ತಿದೆ. ಕಳೆದ ವರ್ಷ ಮಾರ್ಚ್‌'ನಲ್ಲಿ ಬಿಸಿಸಿಐ ವೇತನವನ್ನು ದುಪ್ಪಟ್ಟುಗೊಳಿಸಿತ್ತು. ಆದರೆ ನಾಯಕ ವಿರಾಟ್ ಕೊಹ್ಲಿ, ಪ್ರಧಾನ ಕೋಚ್ ರವಿಶಾಸ್ತ್ರಿ ವೇತನದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಬಳಿಕ ಆಡಳಿತ ಸಮಿತಿ ಜತೆ ಚರ್ಚೆ ನಡೆಸಿ, ವೇತನ ಹೆಚ್ಚಿಸುವಂತೆ ಕೇಳಿಕೊಂಡಿದ್ದರು.

click me!