ನೆನಪಿದೆಯಾ ಭಾರತ ಇತಿಹಾಸ ನಿರ್ಮಿಸಿದ ಆ ದಿನ..!

By Suvarna Web DeskFirst Published Jun 25, 2017, 6:21 PM IST
Highlights

ಬ್ಯಾಟಿಂಗ್ ಹಾಗೂ ಬೌಲಿಂಗ್'ನಲ್ಲಿ ಆಲ್ರೌಂಡ್ ಆಟ ಪ್ರದರ್ಶಿಸಿದ ಅಮರ್'ನಾಥ್ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಭಾಜನರಾಗಿದ್ದರು.

ಈ ದಿನವನ್ನು ಕ್ರಿಕೆಟ್ ಅಭಿಮಾನಿಗಳು ಮರೆಯಲು ಸಾಧ್ಯವೇ..? ಚೊಚ್ಚಲ ವಿಶ್ವಕಪ್ ಗೆದ್ದ ಸಂಭ್ರಮದ ಮೆಲುಕು ನಿಮಗಾಗಿ

ಭಾರತ ಕ್ರಿಕೆಟ್ ಇತಿಹಾಸದಲ್ಲಿ 1983 ಜೂನ್ 25 ಎಂದೆಂದೂ ಮರೆಯಾಲಾಗದ, ಸುವರ್ಣಾಕ್ಷರದಲ್ಲಿ ಬರೆದಿಡಬಹುದಾದ ದಿನ. ಆ್ಯಂಗ್ರಿ ಯಂಗ್ ಮ್ಯಾನ್ ಕಪಿಲ್ ಡೆವಿಲ್ಸ್ ಪಡೆ ಭಾರತಕ್ಕೆ ಚೊಚ್ಚಲ ವಿಶ್ವಕಪ್ ಗೆದ್ದು ದಾಖಲೆ ಬರೆದ ದಿನವಿದು.

ಹೌದು ಇಂದಿಗೆ ಸರಿಯಾಗಿ 34 ವರ್ಷಗಳ ಹಿಂದೆ ಹಾಲಿ ಚಾಂಪಿಯನ್ ವೆಸ್ಟ್'ಇಂಡಿಸ್ ತಂಡವನ್ನು ಬಗ್ಗುಬಡಿದ ಕಪಿಲ್ ದೇವ್ ನೇತೃತ್ವದ ಟೀಂ ಇಂಡಿಯಾ ಚೊಚ್ಚಲ ವಿಶ್ವಕಪ್ ಎತ್ತಿಹಿಡಿದು ಸಂಭ್ರಮಿಸಿತು.

ಪೈನಲ್ ಪಂದ್ಯ ಮೆಲುಕು:

ಬ್ಯಾಟಿಂಗ್ ಹಾಗೂ ಬೌಲಿಂಗ್'ನಲ್ಲಿ ಸಾಂಘಿಕ ಆಟ ಪ್ರದರ್ಶಿಸಿದ ಕಪಿಲ್ ದೇವ್ ನೇತೃತ್ವದ ಟೀಂ ಇಂಡಿಯಾ ಚೊಚ್ಚಲ ವಿಶ್ವಕಪ್'ಗೆ ಮುತ್ತಿಕ್ಕಿತು.

ಹಾಲಿ ಚಾಂಪಿಯನ್ ಆಗಿದ್ದ ವೆಸ್ಟ್'ಇಂಡಿಸ್ ತಂಡವನ್ನು ಕೇವಲ 140ರನ್'ಗಳಿಗೆ ಕಟ್ಟಿಹಾಕುವ ಮೂಲಕ ಕಪಿಲ್ ಪಡೆ 43ರನ್'ಗಳ ಜಯಭೇರಿ ಬಾರಿಸಿ ಇತಿಹಾಸ ನಿರ್ಮಿಸಿತು. ದಿಗ್ಗಜ ಬ್ಯಾಟ್ಸ್'ಮನ್'ಗಳಿಂದ ಕೂಡಿದ್ದ ವೆಸ್ಟ್'ಇಂಡಿಸ್ ಹ್ಯಾಟ್ರಿಕ್ ವಿಶ್ವಕಪ್ ಗೆಲ್ಲುವ ಕನಸಿನೊಂದಿಗೆ ಫೈನಲ್'ನಲ್ಲಿ ಕಣಕ್ಕಿಳಿದಿತ್ತು. ಆದರೆ ಮೊಹಿಂದರ್ ಅಮರ್'ನಾಥ್(12/3) ಹಾಗೂ ಮದನ್ ಲಾಲ್(31/3) ಮಾರಕ ದಾಳಿಗೆ ತತ್ತರಿಸಿದ ಕೆರಿಬಿಯನ್ ಪಡೆ ಟೀಂ ಇಂಡಿಯಾಗೆ ಶರಣಾಯಿತು. ವೆಸ್ಟ್'ಇಂಡಿಸ್ ಪರ ದಿಟ್ಟ ಪ್ರದರ್ಶನ ತೋರುತ್ತಿದ್ದ ಕ್ರಿಕೆಟ್ ದಂತಕತೆ ವೀವ್ ರಿಚರ್ಡ್'ಸನ್(33ರನ್, 42 ಎಸೆತ) ಅವರ ಕ್ಯಾಚ್ ಅನ್ನು ನಾಯಕ ಕಪಿಲ್ ದೇವ್ ಸುಮಾರು 18 ಗಜ(ಅಂದಾಜು 50 ಅಡಿ)ಗಳಿಗೂ ದೂರ ಓಡಿ ಕ್ಯಾಚ್ ಹಿಡಿದಿದ್ದರು. ಆ ಕ್ಯಾಚ್ ಆ ಟೂರ್ನಿಯ ಸ್ಮರಣೀಯ ಕ್ಷಣಗಳಲ್ಲಿ ಒಂದು ಎನಿಸಿಕೊಂಡಿತು.

ಬ್ಯಾಟಿಂಗ್ ಹಾಗೂ ಬೌಲಿಂಗ್'ನಲ್ಲಿ ಆಲ್ರೌಂಡ್ ಆಟ ಪ್ರದರ್ಶಿಸಿದ ಅಮರ್'ನಾಥ್ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಭಾಜನರಾಗಿದ್ದರು.

ಇದಕ್ಕೂ ಟಾಸ್ ಸೋತು ಮೊದಲು ಬ್ಯಾಟಿಂಗ್ ಇಳಿಯಲ್ಪಟ್ಟ ಟೀಂ ಇಂಡಿಯಾ ಮೊಹಿಂದರ್ ಅಮರ್'ನಾಥ್(26ರನ್, 80 ಎಸೆತ) ಹಾಗೂ ಕೃಷ್ಣಮಾಚಾರಿ ಶ್ರೀಕಾಂತ್(38 ರನ್, 57 ಎಸೆತ) ಅವರ ದಿಟ್ಟ ಹೋರಾಟದ ನೆರವಿನಿಂದ 183 ರನ್ ಕಲೆಹಾಕಿತು. ವೆಸ್ಟ್'ಇಂಡಿಸ್'ನ ಮಾಲ್ಕಮ್ ಮಾರ್ಷಲ್, ಆ್ಯಂಡಿ ರಾಬರ್ಟ್, ಮೈಕಲ್ ಹೋಲ್ಡಿಂಗ್ಸ್ ಅವರಂತಹ ಶ್ರೇಷ್ಟ ಬೌಲಿಂಗ್ ದಾಳಿಯನ್ನು ಶ್ರೀಕಾಂತ್ ಹಾಗೂ ಅಮರ್'ನಾಥ್ ದಿಟ್ಟವಾಗಿ ಎದುರಿಸಿದರು. ಆದರೆ ಟೀಂ ಇಂಡಿಯಾದ ಉಳಿದ ಬ್ಯಾಟ್ಸ್'ಮನ್'ಗಳು ತರಗೆಲೆಗಳಂತೆ ಉದುರಿ ಹೋದರು. ಅಂತಿಮವಾಗಿ ಟೀಂ ಇಂಡಿಯಾ 54.4 ಓವರ್'ಗಳಲ್ಲಿ 183ರನ್'ಗಳಿಗೆ ಸರ್ವಪತನ ಕಂಡಿತು.

(*ಆಗ ಏಕದಿನ ಕ್ರಿಕೆಟ್'ನಲ್ಲಿ 60 ಓವರ್'ಗಳಿರುತ್ತಿದ್ದವು)  

click me!