ಫುಟ್ಬಾಲ್: ಮುಂದುವರಿಯಿತು ಭಾರತದ ಗೆಲುವಿನ ಓಟ; ಮೆಕಾವೊ ವಿರುದ್ಧ ಭರ್ಜರಿ ಜಯ

Published : Sep 05, 2017, 07:19 PM ISTUpdated : Apr 11, 2018, 01:00 PM IST
ಫುಟ್ಬಾಲ್: ಮುಂದುವರಿಯಿತು ಭಾರತದ ಗೆಲುವಿನ ಓಟ; ಮೆಕಾವೊ ವಿರುದ್ಧ ಭರ್ಜರಿ ಜಯ

ಸಾರಾಂಶ

ಈ ಏಷ್ಯನ್ ಕಪ್ ಅರ್ಹತಾ ಟೂರ್ನಿಯಲ್ಲಿ ಭಾರತ ಮೂರು ಪಂದ್ಯಗಳನ್ನಾಡಿ 6 ಅಂಕಗಳೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಮಯನ್ಮಾರ್ ಮತ್ತು ಕಿರ್ಗಿಸ್ತಾನ್ ರಿಪಬ್ಲಿಕ್ ತಂಡಗಳು 2 ಮತ್ತು 3ನೇ ಸ್ಥಾನದಲ್ಲಿದ್ದರೆ, ಮೆಕಾವೊ ತಂಡ ಸತತ ಮೂರು ಸೋಲುಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ.

ಮೆಕಾವು(ಸೆ. 05): ಭಾರತೀಯ ಫುಟ್ಬಾಲ್ ತಂಡದ ಗೆಲುವಿನ ನಾಗಾಲೋಟ ಮುಂದುವರಿದಿದೆ. ಇಂದು ನಡೆದ ಎಎಫ್'ಸಿ ಏಷ್ಯನ್ ಕಪ್ ಮೂರನೇ ಅರ್ಹತಾ ಹಂತದ ಗ್ರೂಪ್ ಎ ಪಂದ್ಯದಲ್ಲಿ ಮೆಕಾವೊ ವಿರುದ್ಧ ಭಾರತ 2-0 ಗೋಲುಗಳಿಂದ ಜಯಭೇರಿ ಭಾರಿಸಿದೆ. ಈ ಮೂಲಕ ಎರಡನೇ ಬಾರಿ ಏಷ್ಯನ್ ಕಪ್'ಗೆ ಅರ್ಹತೆ ಗಿಟ್ಟಿಸುವ ನಿಟ್ಟಿನಲ್ಲಿ ಭಾರತ ಇನ್ನಷ್ಟು ಹತ್ತಿರಹೋಗಿದೆ. ಈ ಟೂರ್ನಿಯಲ್ಲಿ ಭಾರತಕ್ಕೆ ಇದು ಹ್ಯಾಟ್ರಿಕ್ ಗೆಲುವಾಗಿದೆ. ಇದರೊಂದಿಗೆ ಗುಂಪಿನಲ್ಲಿರುವ ತನ್ನ ಎಲ್ಲಾ ಎದುರಾಳಿಗಳ ವಿರುದ್ಧ ಭಾರತ ಗೆಲುವು ಸಾಧಿಸಿದಂತೆ ಆಗಿದೆ.

ಇಂದು ನಡೆದ ಪಂದ್ಯದಲ್ಲಿ ಸಬ್ಸ್'ಟಿಟ್ಯೂಟ್ ಆಗಿ ಬಂದ ಬಲವಂತ್ ಸಿಂಗ್ ಅವರು ಭಾರತದ ಗೆಲುವಿನ ರೂವಾರಿಯಾದರು. ಮೊದಲಾರ್ಧದಲ್ಲಿ ಎರಡೂ ತಂಡಗಳು ಯಾವುದೇ ಗೋಲು ಗಳಿಸಲು ವಿಫಲವಾದವು. ದ್ವಿತೀಯಾರ್ಧದಲ್ಲಿ ಭಾರತೀಯರು ಸಮರ್ಥ ದಾಳಿ ಯೋಜಿಸಿದರು. ಸಬ್ಸ್'ಟಿಟ್ಯೂಟ್ ಆಗಿ ಬಂದ ಬಲವಂತ್ ಸಿಂಗ್ 57ನೇ ನಿಮಿಷದಲ್ಲಿ ಗೋಲು ಗಳಿಸಿ ಭಾರತಕ್ಕೆ ಮೊದಲ ಮುನ್ನಡೆ ತಂದುಕೊಟ್ಟರು. ನಾರಾಯಣ್ ದಾಸ್ ಕೊಟ್ಟ ಪಾಸನ್ನು ಬಲವಂತ್ ಸಿಂಗ್ ಗೋಲಾಗಿ ಪರಿವರ್ತಿಸಿದರು. ಅದಾದ ಬಳಿಕ ಭಾರತ ಇನ್ನಷ್ಟು ಚುರುಕಿನ ದಾಳಿ ಸಂಘಟಿಸಿತು. ಆದರೆ, ಮತ್ತೊಂದು ಗೋಲು ಬರಲು 83ನೇ ನಿಮಿಷದವರೆಗೂ ಕಾಯಬೇಕಾಯಿತು. ಬಲವಂತ್ ಸಿಂಗ್ ಅವರೇ ಮತ್ತೊಂದು ಗೋಲು ಭಾರಿಸಿದರು. ಹೆಚ್ಚುವರಿ ಸಮಯದಲ್ಲಿ ಭಾರತ ಮೂರನೇ ಬಾರಿ ಚೆಂಡನ್ನು ಗೋಲುಪೆಟ್ಟಿಗೆಯೊಳಗೆ ತಳ್ಳಿತಾದರೂ ರೆಫರಿಯು ಅದನ್ನು ಆಫ್'ಸೈಡ್ ಎಂದು ನಿರ್ಣಯಿಸಿ ಗೋಲು ರದ್ದು ಮಾಡಿದರು.

ಈ ಏಷ್ಯನ್ ಕಪ್ ಅರ್ಹತಾ ಟೂರ್ನಿಯಲ್ಲಿ ಭಾರತ ಮೂರು ಪಂದ್ಯಗಳನ್ನಾಡಿ 6 ಅಂಕಗಳೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಮಯನ್ಮಾರ್ ಮತ್ತು ಕಿರ್ಗಿಸ್ತಾನ್ ರಿಪಬ್ಲಿಕ್ ತಂಡಗಳು 2 ಮತ್ತು 3ನೇ ಸ್ಥಾನದಲ್ಲಿದ್ದರೆ, ಮೆಕಾವೊ ತಂಡ ಸತತ ಮೂರು ಸೋಲುಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ.

ಈ ಅರ್ಹತಾ ಟೂರ್ನಿಯಲ್ಲಿ ಒಟ್ಟು 24 ತಂಡಗಳು 6 ಗುಂಪುಗಳಾಗಿ ಸೆಣಸಾಡುತ್ತಿವೆ. ಇವುಗಳ ಪೈಕಿ 12 ತಂಡಗಳು 2019ರ ಏಷ್ಯನ್ ಕಪ್'ಗೆ ಅರ್ಹತೆ ಗಿಟ್ಟಿಸಲಿವೆ. ಭಾರತ ತಂಡ ತನ್ನ ಮುಂದಿನ ಪಂದ್ಯವನ್ನು ಇದೇ ಮೆಕಾವೋ ವಿರುದ್ಧ ಮುಂದಿನ ತಿಂಗಳು, ಅಂದರೆ ಅಕ್ಟೋಬರ್ 10ರಂದು ಕಂಠೀರವ ಸ್ಟೇಡಿಯಂನಲ್ಲಿ ಆಡಲಿದೆ. ಆ ಪಂದ್ಯದಲ್ಲಿ ಭಾರತ ಜಯಿಸಿದ್ದೇ ಆದಲ್ಲಿ ಎಎಫ್'ಸಿ ಕಪ್'ಗೆ ಕ್ವಾಲಿಫೈ ಆಗುವುದು ನಿಶ್ಚಿತವಾಗಲಿದೆ.

ಇದೇ ವೇಳೆ, ಭಾರತ ತಂಡ ಫುಟ್ಬಾಲ್'ನಲ್ಲಿ ಹೊಸ ಹುರುಪಿನೊಂದಿಗೆ ಓಡುತ್ತಿದೆ. ಕಳೆದ 11 ಪಂದ್ಯಗಳಲ್ಲಿ ಭಾರತ ಸೋಲನ್ನೇ ಕಂಡಿಲ್ಲ. ಈ 11 ಪಂದ್ಯಗಳ ಪೈಕಿ 10 ಪಂದ್ಯಗಳಲ್ಲಿ ಭಾರತ ಜಯಭೇರಿ ಭಾರಿಸಿದೆ. ಈ ಗೆಲುವುಗಳು ಭಾರತವನ್ನು ಟಾಪ್ 100 ರ್ಯಾಂಕಿಂಗ್ ಪಟ್ಟಿಗೆ ತಂದು ಸೇರಿಸಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಿ20 ವಿಶ್ವಕಪ್ ಟೂರ್ನಿಗೆ ಬಲಿಷ್ಠ ತಂಡ ಆಯ್ಕೆ ಮಾಡಿದ ಆಕಾಶ್ ಚೋಪ್ರಾ; ಗಿಲ್‌ಗಿಲ್ಲ ಉಪನಾಯಕ ಪಟ್ಟ!
ದಕ್ಷಿಣ ಆಫ್ರಿಕಾ ಎದುರಿನ ಕೊನೆಯ ಟಿ20 ಪಂದ್ಯಕ್ಕೆ ಭಾರತ ತಂಡದಲ್ಲಿ 2 ಮೇಜರ್ ಚೇಂಜ್! ಇಲ್ಲಿದೆ ಹೊಸ ಅಪ್‌ಡೇಟ್ಸ್‌