ಯುಎಸ್ ಓಪನ್: ಕ್ವಾರ್ಟರ್'ಗೆ ಲಗ್ಗೆಯಿಟ್ಟ ಫೆಡರರ್-ನಡಾಲ್

By Suvarna Web DeskFirst Published Sep 5, 2017, 6:56 PM IST
Highlights

ಸೆಮಿಫೈನಲ್‌'ನಲ್ಲಿ ಫೆಡರರ್ ಹಾಗೂ ನಡಾಲ್ ಮುಖಾಮುಖಿಯಾಗಬೇಕಿದ್ದರೆ, ಕ್ವಾರ್ಟರ್ ಫೈನಲ್‌'ನಲ್ಲಿ ಎದುರಾಗಿರುವ ಕಠಿಣ ಸವಾಲನ್ನು ಇಬ್ಬರೂ ದಾಟಬೇಕಿದೆ.

ನ್ಯೂಯಾರ್ಕ್(ಸೆ.05): ಯುಎಸ್ ಓಪನ್ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ಗೆ ನಿರೀಕ್ಷೆಯಂತೆ ಮಾಜಿ ಚಾಂಪಿಯನ್ನರಾದ ರೋಜರ್ ಫೆಡರರ್ ಹಾಗೂ ರಾಫೆಲ್ ನಡಾಲ್ ಪ್ರವೇಶಿಸಿದ್ದಾರೆ.

ಸೆಮಿಫೈನಲ್‌'ನಲ್ಲಿ ಫೆಡರರ್ ಹಾಗೂ ನಡಾಲ್ ಮುಖಾಮುಖಿಯಾಗಬೇಕಿದ್ದರೆ, ಕ್ವಾರ್ಟರ್ ಫೈನಲ್‌'ನಲ್ಲಿ ಎದುರಾಗಿರುವ ಕಠಿಣ ಸವಾಲನ್ನು ಇಬ್ಬರೂ ದಾಟಬೇಕಿದೆ.

ಪ್ರೀ ಕ್ವಾರ್ಟರ್‌'ನಲ್ಲಿ ಫೆಡರರ್, ಜರ್ಮನಿಯ ಫಿಲಿಪ್ ಕೊಲ್ಸ್'ಬರ್ ವಿರುದ್ಧ 6-4, 6-2, 7-5 ನೇರ ಸೆಟ್‌'ಗಳಲ್ಲಿ ಸುಲಭ ಗೆಲುವು ಸಾಧಿಸಿದರೆ, ನಡಾಲ್ ಉಕ್ರೇನ್‌'ನ ಅಲೆಕ್ಸಾಂಡರ್ ಡೊಲ್ಗೊಪೊಲೊವ್ ವಿರುದ್ಧ 6-2, 6-4, 6-1 ನೇರ ಸೆಟ್‌'ಗಳಲ್ಲಿ ಗೆದ್ದು ಯುಎಸ್ ಓಪನ್‌'ನಲ್ಲಿ ತಮ್ಮ 50ನೇ ಜಯದ ಸಂಭ್ರಮ ಆಚರಿಸಿದರು.

ಫೆಡರರ್‌ಗೆ ಡೆಲ್ ಪೊಟ್ರೊ ಸವಾಲು: ಕ್ವಾರ್ಟರ್ ಫೈನಲ್‌'ನಲ್ಲಿ ಫೆಡರರ್‌'ಗೆ ಕಠಿಣ ಸವಾಲು ಎದುರಾಗಲಿದೆ. 24ನೇ ಶ್ರೇಯಾಂಕಿತ ಅರ್ಜೆಂಟೀನಾದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ವಿರುದ್ಧ ಫೆಡರರ್ ಸೆಣಸಬೇಕಿದೆ. 2009ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಡೆಲ್ ಪೊಟ್ರೊ ಫೈನಲ್‌'ನಲ್ಲಿ ರೋಜರ್ ಫೆಡರರ್ ವಿರುದ್ಧ ಗೆಲುವು ಸಾಧಿಸಿದ್ದರು. ಹೀಗಾಗಿ ಕ್ವಾರ್ಟರ್ ಫೈನಲ್ ಕಾದಾಟಕ್ಕೆ ಮತ್ತಷ್ಟು ರೋಚಕತೆ ತುಂಬಿದೆ.

ನಡಾಲ್‌'ಗೆ ರಷ್ಯಾ ಯುವಕನ ಸವಾಲು: ವಿಶ್ವ ನಂ.1 ರಾಫೆಲ್ ನಡಾಲ್ ಸೆಮಿಫೈನಲ್ ಪ್ರವೇಶಿಸಬೇಕಿದ್ದರೆ ರಷ್ಯಾದ 19 ವರ್ಷದ ಆ್ಯಂಡ್ರೆ ರುಬ್ಲೆವ್ ಸವಾಲನ್ನು ಮೆಟ್ಟಿನಿಲ್ಲಬೇಕಿದೆ. ಪ್ರೀ ಕ್ವಾರ್ಟರ್‌'ನಲ್ಲಿ ರುಬ್ಲೆವ್ 9ನೇ ಶ್ರೇಯಾಂಕಿತ ಬೆಲ್ಜಿಯಂನ ಡೇವಿಡ್ ಗಾಫಿನ್ ವಿರುದ್ಧ 7-5, 7-6, 6-3 ಸೆಟ್‌'ಗಳಲ್ಲಿ ಗೆದ್ದು 2001ರ ಬಳಿಕ ಯುಎಸ್ ಓಪನ್ ಕ್ವಾರ್ಟರ್ ಫೈನಲ್‌'ಗೇರಿದ ಅತಿಕಿರಿಯ ಆಟಗಾರ ಎನಿಸಿದರು.

click me!