ಕೊಹ್ಲಿ ಆಮೋಘ ಶತಕ: ಸವಾಲಿನ ಮೊತ್ತ ಕಲೆಹಾಕಿದ ಟೀಂ ಇಂಡಿಯಾ

By Web DeskFirst Published Oct 24, 2018, 5:39 PM IST
Highlights

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಆರಂಭದಲ್ಲೇ ರೋಹಿತ್ ಹಾಗೂ ಧವನ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ತಂಡದ ಮೊತ್ತ 40 ರನ್’ಗಳಾಗುವಷ್ಟರಲ್ಲೇ ಆರಂಭಿಕರಿಬ್ಬರು ಪೆವಿಲಿಯನ್ ಸೇರಿದ್ದರು. ಈ ವೇಳೆ ಮೂರನೇ ವಿಕೆಟ್’ಗೆ ಜತೆಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಅಂಬಟಿ ರಾಯುಡು ಶತಕದ ಜತೆಯಾಟವಾಡುವ ಮೂಲಕ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.

ವಿಶಾಖಪಟ್ಟಣಂ[ಅ.24]: ನಾಯಕ ವಿರಾಟ್ ಕೊಹ್ಲಿ ಬಾರಿಸಿದ ವೃತ್ತಿ ಜೀವನದ 37ನೇ ಶತಕದ ನೆರವಿನಿಂದ ಟೀಂ ಇಂಡಿಯಾ 321 ರನ್’ಗಳ ಬೃಹತ್ ಮೊತ್ತ ಕಲೆಹಾಕಿದ್ದು ವೆಸ್ಟ್ ಇಂಡೀಸ್ ತಂಡಕ್ಕೆ ಕಠಿಣ ಸವಾಲು ನೀಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಆರಂಭದಲ್ಲೇ ರೋಹಿತ್ ಹಾಗೂ ಧವನ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ತಂಡದ ಮೊತ್ತ 40 ರನ್’ಗಳಾಗುವಷ್ಟರಲ್ಲೇ ಆರಂಭಿಕರಿಬ್ಬರು ಪೆವಿಲಿಯನ್ ಸೇರಿದ್ದರು. ಈ ವೇಳೆ ಮೂರನೇ ವಿಕೆಟ್’ಗೆ ಜತೆಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಅಂಬಟಿ ರಾಯುಡು ಶತಕದ ಜತೆಯಾಟವಾಡುವ ಮೂಲಕ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಕೊಹ್ಲಿ-ರಾಯುಡು ಜೋಡಿ 139 ರನ್’ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 170ರ ಗಡಿ ದಾಟಿಸಿದರು. ಉತ್ತಮವಾಗಿ ಆಡುತ್ತಿದ್ದ ರಾಯುಡು ದೊಡ್ಡ ಹೊಡೆತಕ್ಕೆ ಕೈಹಾಕಿ ಎಡವಟ್ಟು ಮಾಡಿಕೊಂಡರು. ನರ್ಸ್ ಬೌಲಿಂಗ್’ನಲ್ಲಿ 73 ರನ್ ಸಿಡಿಸಿ ಮುನ್ನುಗ್ಗುತ್ತಿದ್ದ ರಾಯುಡು ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಕೆಳಕ್ರಮಾಂಕದಲ್ಲಿ ಕೊಹ್ಲಿಗೆ ಉಪಯುಕ್ತ ಸಹಕಾರ ದೊರೆಯದಿದ್ದರೂ ಏಕಾಂಗಿಯಾಗಿ ಬ್ಯಾಟ್ ಬೀಸಿದ ಕೊಹ್ಲಿ ತಂಡಕ್ಕೆ ಆಸರೆಯಾಗುವಲ್ಲಿ ಯಶಸ್ವಿಯಾದರು.

ದಾಖಲೆಗಳ ಸರದಾರನಾದ ಕೊಹ್ಲಿ:

ವಿರಾಟ್ ಕೊಹ್ಲಿ ಏಕದಿನ ವೃತ್ತಿ ಜೀವನದ 37ನೇ ಶತಕ ಸಿಡಿಸುವುದರ ಜತೆಗೆ ಹಲವಾರು ದಾಖಲೆಗಳನ್ನು ಬರೆದರು. ಇದೇ ಪಂದ್ಯದಲ್ಲಿ ಅತಿವೇಗವಾಗಿ 10 ಸಾವಿರ ರನ್ ಪೂರೈಸಿದ ಆಟಗಾರ, ವೆಸ್ಟ್ ಇಂಡೀಸ್ ವಿರುದ್ಧ ಭಾರತೀಯ ಆಟಗಾರನೊಬ್ಬ ಗರಿಷ್ಠ ರನ್ ಸಿಡಿಸಿದ ಸಾಧನೆ, ಸೆಹ್ವಾಗ್[219] ಬಳಿಕ ಎರಡನೇ ವೈಯುಕ್ತಿಕ ಗರಿಷ್ಠ ಮೊತ್ತ[157*], ಅತಿವೇಗವಾಗಿ ತವರಿನಲ್ಲಿ 4 ಸಾವಿರ ರನ್ ಪೂರೈಸಿದ ಸಾಧನೆ ಹೀಗೆ ಹತ್ತು-ಹಲವು ದಾಖಲೆಗಳನ್ನು ಕೊಹ್ಲಿ ಬರೆದರು.

ವೆಸ್ಟ್ ಇಂಡೀಸ್ ಪರ ಆ್ಯಶ್ಲೆ ನರ್ಸ್ ಹಾಗೂ ಓಬೆಡ್ ಮೆಕಾಯ್ ತಲಾ 2 ವಿಕೆಟ್ ಪಡೆದರೆ, ಕೀಮರ್ ರೋಚ್ ಹಾಗೂ ಮರ್ಲಾನ್ ಸ್ಯಾಮ್ಯುಯಲ್ಸ್ ತಲಾ ಒಂದೊಂದು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:

ಭಾರತ: 321/6
ವಿರಾಟ್ ಕೊಹ್ಲಿ: 157*
ಅಂಬಟಿ ರಾಯುಡು: 73
ಆ್ಯಶ್ಲೆ ನರ್ಸ್: 46/2
[* ಭಾರತದ ಬ್ಯಾಟಿಂಗ್ ಮುಕ್ತಾಯದ ವೇಳೆಗೆ] 

click me!