ಟೀಂ ಇಂಡಿಯಾ ಟೆಸ್ಟ್ ಉಪನಾಯಕ ಅಜಿಂಕ್ಯ ರಹಾನೆ ಸಮಯೋಚಿತ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ ಗೌರವಾನ್ವಿತ ಮೊತ್ತದತ್ತ ಸಾಗುತ್ತಿದ್ದು, ಮೊದಲ ದಿನದಂತ್ಯಕ್ಕೆ ವೆಸ್ಟ್ ಇಂಡೀಸ್ ಎದುರು 200+ ರನ್ ದಾಖಲಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ನಾರ್ಥ್ ಸೌಂಡ್ (ಆ.23): ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್‌ನ ಚೊಚ್ಚಲ ಪಂದ್ಯದಲ್ಲೇ ವಿಶ್ವ ನಂ.1 ತಂಡ ಭಾರತ ಆಘಾತ ಅನುಭವಿಸಿತು. ವೆಸ್ಟ್‌ಇಂಡೀಸ್ ವಿರುದ್ಧ ಗುರುವಾರ ಇಲ್ಲಿ ಆರಂಭಗೊಂಡ 2 ಪಂದ್ಯಗಳ ಸರಣಿಯ ಮೊದಲ ಪಂದ್ಯದ ಮಳೆಯಿಂದಾಗಿ ತಡವಾಗಿ ಆರಂಭಗೊಂಡಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಇಳಿದ ಭಾರತ, ವಿಂಡೀಸ್ ವೇಗದ ದಾಳಿಗೆ ಕುಸಿಯಿತು.
ಕರ್ನಾಟಕದ ಮಯಾಂಕ್ ಅಗರ್‌ವಾಲ್ ಹಾಗೂ ಕೆ.ಎಲ್.ರಾಹುಲ್ ಭಾರತ ಪರ ಇನ್ನಿಂಗ್ಸ್ ಆರಂಭಿಸಿದರು. ಹಿರಿಯ ವೇಗಿ ಕೀಮಾರ್ ರೋಚ್, ವಿಂಡೀಸ್‌ಗೆ ಮೊದಲ ಯಶಸ್ಸು ದೊರಕಿಸಿಕೊಟ್ಟರು. ಮಯಾಂಕ್ ಕೇವಲ 5 ರನ್ ಗಳಿಸಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.
undefined
‘ಮಿಸ್ಟರ್ ಟೆಸ್ಟ್ ಕ್ರಿಕೆಟ್’ ಎಂದೇ ಕರೆಸಿಕೊಳ್ಳುವ ಚೇತೇಶ್ವರ್ ಪೂಜಾರ 4 ಎಸೆತಗಳನ್ನು ಎದುರಿಸಿ ಕೇವಲ 2 ರನ್‌ಗೆ ಔಟಾಗಿದ್ದು ವಿಂಡೀಸ್ ಪಾಳೆಯದಲ್ಲಿ ಸಂಭ್ರಮಕ್ಕೆ ಕಾರಣವಾಯಿತು. ರೋಚ್ ಎಸೆತದಲ್ಲಿ ವಿಕೆಟ್ ಕೀಪರ್ ಶಾಯ್ ಹೋಪ್‌ಗೆ ಕ್ಯಾಚಿತ್ತು ಪೂಜಾರ ಹೊರನಡೆದರು.
4ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ ಚೇತರಿಕೆ ನೀಡುವಲ್ಲಿ ವಿಫಲರಾದರು. ಕೊಹ್ಲಿ 9 ರನ್ ಗಳಿಸಿದ್ದಾಗ ವೇಗಿ ಶ್ಯಾನನ್ ಗೇಬ್ರಿಯಲ್‌ಗೆ ವಿಕೆಟ್ ನೀಡಿ ನಿರ್ಗಮಿಸಿದರು. 25 ರನ್ ಆಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡ ಭಾರತ ಭಾರೀ ಸಂಕಷ್ಟಕ್ಕೆ ಸಿಲುಕಿತು.
ಭಾರತ-ವಿಂಡೀಸ್ ಸರಣಿಯಲ್ಲಿ ನಿರ್ಮಾಣವಾಗಲಿರುವ ದಾಖಲೆ; ಇಲ್ಲಿದೆ ಲಿಸ್ಟ್!
ರಾಹುಲ್-ರಹಾನೆ ಆಸರೆ: 5ನೇ ವಿಕೆಟ್‌ಗೆ ಕ್ರೀಸ್ ಹಂಚಿಕೊಂಡ ರಾಹುಲ್ ಹಾಗೂ ಅಜಿಂಕ್ಯ ರಹಾನೆ, ವಿಂಡೀಸ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಭೋಜನ ವಿರಾಮದ ವೇಳೆಗೆ 68 ರನ್‌ಗೆ 3 ವಿಕೆಟ್ ಕಳೆದುಕೊಂಡಿದ್ದ ಭಾರತ, 2ನೇ ಅವಧಿಯಲ್ಲೂ ಎಚ್ಚರಿಕೆಯ ಆಟಕ್ಕೆ ಮೊರೆ ಹೋಯಿತು. ರಾಹುಲ್ ಹಾಗೂ ರಹಾನೆ, ಅರ್ಧಶತಕದ ಜೊತೆಯಾಟ ಪೂರೈಸಿ ಬ್ಯಾಟಿಂಗ್ ನಡೆಸಿದರು. ಕೆ.ಎಲ್ ರಾಹುಲ್ 44 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಉಪನಾಯಕ ಅಜಿಂಕ್ಯ ರಹಾನೆ 81 ರನ್ ಬಾರಿಸಿ ಪೆವಿಲಿಯನ್ ಸೇರಿದರು. ಇನ್ನು ಹನುಮ ವಿಹಾರಿ ಆಟ 32 ರನ್ ಗಳಿಗೆ ಸೀಮಿತವಾಯಿತು. ಮೊದಲ ದಿನದಂತ್ಯದ ವೇಳೆಗೆ ರಿಷಭ್ ಪಂತ್ 20 ಹಾಗೂ ರವೀಂದ್ರ ಜಡೇಜಾ 3 ರನ್ ಬಾರಿಸಿದ್ದು, ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ವೆಸ್ಟ್ ಇಂಡೀಸ್ ಪರ ರೋಚ್ 3 ವಿಕೆಟ್ ಪಡೆದರೆ, ಗೇಬ್ರಿಯಲ್ 2 ವಿಕೆಟ್ ಪಡೆದರು. ಇನ್ನು ರೋಸ್ಟನ್ ಚೇಸ್ 1 ವಿಕೆಟ್ ಕಬಳಿಸಿದರು.
ನಾಲ್ವರು ಬೌಲರ್‌ಗಳೊಂದಿಗೆ ಕಣಕ್ಕಿಳಿದ ಭಾರತ ತಂಡ!
ಮೊದಲ ಟೆಸ್ಟ್‌ಗೆ ಭಾರತದ ತಂಡ ಆಯ್ಕೆ ಅಚ್ಚರಿ ಮೂಡಿಸಿತು. ಹೆಚ್ಚುವರಿ ಬ್ಯಾಟ್ಸ್‌ಮನ್‌ನೊಂದಿಗೆ ಆಡಲು ನಿರ್ಧರಿಸಿದ ಭಾರತ, ಕೇವಲ ನಾಲ್ವರು ಬೌಲರ್‌ಗಳನ್ನು ಕಣಕ್ಕಿಳಿಸಿದೆ. ಜಸ್‌ಪ್ರೀತ್ ಬುಮ್ರಾ, ಮೊಹಮದ್ ಶಮಿ, ಇಶಾಂತ್ ಶರ್ಮಾ ಜತೆ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಆಗಿ ರವೀಂದ್ರ ಜಡೇಜಾ ಸ್ಥಾನ ಪಡೆದಿದ್ದಾರೆ. ಹನುಮ ವಿಹಾರಿ 5ನೇ ಬೌಲರ್ ಆಗಿ ಕೆಲ ಓವರ್‌ಗಳನ್ನು ಎಸೆಯುವ ನಿರೀಕ್ಷೆ ಇದೆ. ರೋಹಿತ್ ಶರ್ಮಾ, ವೃದ್ಧಿಮಾನ್ ಸಾಹ, ಆರ್.ಅಶ್ವಿನ್, ಉಮೇಶ್ ಯಾದವ್ ಬೆಂಚ್ ಕಾಯುತ್ತಿದ್ದಾರೆ.
ಸ್ಕೋರ್:
ಭಾರತ ಮೊದಲ ಇನ್ನಿಂಗ್ಸ್: 203/6
(ರಹಾನೆ 81, ರಾಹುಲ್ 40 ರೋಚ್ 3-34)