
ಬ್ರಿಸ್ಟಾಲ್[ಜು.08]: ಹಿಟ್’ಮ್ಯಾನ್ ರೋಹಿತ್ ಶರ್ಮಾ ಬಾರಿಸಿದ ಸಿಡಿಲಬ್ಬರದ ಶತಕ ಹಾಗೂ ಹಾರ್ದಿಕ್ ಪಾಂಡ್ಯ ಆಲ್ರೌಂಡ್ ಪ್ರದರ್ಶನದ ನೆರವಿನಿಂದ ಟೀಂ ಇಂಡಿಯಾ 7 ವಿಕೆಟ್’ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯನ್ನು 2-1 ಅಂತರದಲ್ಲಿ ಭಾರತ ಜಯಿಸುವುದರೊಂದಿಗೆ ಇಂಗ್ಲೆಂಡ್ ಪ್ರವಾಸವನ್ನು ಫಲಪ್ರದವನ್ನಾಗಿಸಿಕೊಂಡಿದೆ.
ಇಂಗ್ಲೆಂಡ್ ನೀಡಿದ್ದ 199 ರನ್’ಗಳನ್ನು ಅನಾಯಾಸವಾಗಿ ಮೆಟ್ಟಿನಿಂತ ಭಾರತ ಇನ್ನೊಂದು ಓವರ್ ಬಾಕಿಯಿರುವಂತೆಯೇ ಭರ್ಜರಿ ಜಯ ಸಾಧಿಸಿದೆ. ರೋಹಿತ್ ಶರ್ಮಾ ಅಂತರಾಷ್ಟ್ರೀಯ ಟಿ20 ಕ್ರಿಕೆಟ್’ನಲ್ಲಿ ಮೂರನೇ ಶತಕ ಸಿಡಿಸಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ದಾಖಲೆಯನ್ನು ನಿರ್ಮಿಸಿದರು. ಮೂರನೇ ಓವರ್’ನ ಮೊದಲ ಎಸೆತದಲ್ಲೇ ಧವನ್ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಆ ಬಳಿಕ ಜತೆಯಾದ ಕೆ.ಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ 41 ರನ್’ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ರಾಹುಲ್ 19 ರನ್ ಬಾರಿಸಿ ಜೋರ್ಡನ್ ಹಿಡಿದ ಅದ್ಭುತ ಕ್ಯಾಚ್’ಗೆ ಪೆವಿಲಿಯನ್ ಸೇರಿದರು. ಇದಾದ ನಂತರ ಸ್ಫೋಟಕ ಜತೆಯಾಟವಾಡಿದ ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ 89 ರನ್’ಗಳ ಜತೆಯಾಟವಾಡುವ ಮೂಲಕ ತಂಡವನ್ನು ನೂರರ ಗಡಿ ದಾಟಿಸಿದರು. ಇದೇ ವೇಳೆ ರೋಹಿತ್ ಎರಡು ಸಾವಿರ ರನ್ ಪೂರೈಸಿದ ಸಾಧನೆಯನ್ನು ಮಾಡಿದರು. ಕೊಹ್ಲಿ 29 ಎಸೆತಗಳಲ್ಲಿ 43 ರನ್ ಸಿಡಿಸಿದರೆ, ರೋಹಿತ್ 56 ಎಸೆತಗಳಲ್ಲಿ 11 ಬೌಂಡರಿ ಹಾಗೂ 5 ಸಿಕ್ಸರ್’ಗಳ ನೆರವಿನಿಂದ ಅಜೇಯ 100 ರನ್ ಬಾರಿಸಿದರು. ಕೊನೆಯಲ್ಲಿ ಆರ್ಭಟಿಸಿದ ಪಾಂಡ್ಯ 14 ಎಸೆತಗಳಲ್ಲಿ 33 ರನ್ ಚಚ್ಚಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಇದಕ್ಕೂ ಮೊದಲು ಜೇಸನ್ ರಾಯ್[67] ಬಾರಿಸಿದ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ 198 ರನ್ ಬಾರಿಸಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.