
ಸೌತಾಂಪ್ಟನ್[ಆ.31]: ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ[132*] ಸಿಡಿಸಿದ ಆಕರ್ಷಕ ಶತಕದ ನೆರವಿನಿಂದ ಟೀಂ ಇಂಡಿಯಾ 273 ರನ್’ಗಳಿಗೆ ಆಲೌಟ್ ಆಗಿದ್ದು ಮೊದಲ ಇನ್ನಿಂಗ್ಸ್’ನಲ್ಲಿ 27 ರನ್’ಗಳ ಮುನ್ನಡೆ ಸಾಧಿಸಿದೆ.
ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಿತಾದರೂ ಮಧ್ಯಮ ಕ್ರಮಾಂಕದಲ್ಲಿ ನಾಟಕೀಯ ಕುಸಿತ ಕಂಡಿತು. ಮೂರನೇ ವಿಕೆಟ್’ಗೆ ಕೊಹ್ಲಿ-ಪೂಜಾರ ಜೋಡಿ 92 ರನ್’ಗಳ ಜತೆಯಾಟವಾಡಿತು. ಪೂಜಾರ ಸಿಡಿಸಿದ ವೃತ್ತಿ ಜೀವನದ 15ನೇ ಶತಕದ ನೆರವಿನಿಂದ ಭಾರತ ಅಲ್ಪ ಮುನ್ನಡೆ ಸಾಧಿಸಿದೆ. ಅಗ್ರ ಕ್ರಮಾಂಕದ ಬ್ಯಾಟ್ಸ್’ಮನ್’ಗಳ ಉತ್ತಮ ಜತೆಯಾಟದ ಹೊರತಾಗಿಯೂ ಮೊಯಿನ್ ಅಲಿಯ ಸ್ಪಿನ್ ದಾಳಿಗೆ ತತ್ತರಿಸಿದ ಭಾರತ ದಿಢೀರ್ ಕುಸಿತ ಕಂಡಿತು. ಒಂದು ಕಡೆ ನಿರಂತರ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ದಿಟ್ಟ ಬ್ಯಾಟಿಂಗ್ ಪ್ರದರ್ಶಿಸಿದ ಚೇತೇಶ್ವರ್ ಪೂಜಾರ ಭಾರತದ ಪಾಲಿಗೆ ಆಪತ್ಭಾಂದವರೆನಿಸಿಕೊಂಡರು.
ಮಾನ ಕಾಪಾಡಿದ ಪೂಜಾರ-ಬುಮ್ರಾ: ಭಾರತ 8ನೇ ವಿಕೆಟ್ ಕಳೆದುಕೊಂಡಿದ್ದಾಗ ಇನ್ನೂ ಸುಮಾರು 50 ರನ್’ಗಳ ಹಿನ್ನಡೆಯಲ್ಲಿತ್ತು. ಈ ವೇಳೆ ಜತೆಯಾದ ಇಶಾಂತ್ ಶರ್ಮಾ ಹಾಗೂ ಪೂಜಾರ ಜೋಡಿ 9ನೇ ವಿಕೆಟ್’ಗೆ 32 ರನ್ ಕಲೆಹಾಕುವ ಮೂಲಕ ಟೀಂ ಇಂಡಿಯಾಗೆ ಅಲ್ಪ ಆಸರೆಯಾದರು. ಆ ಬಳಿಕ 10ನೇ ವಿಕೆಟ್’ಗೆ ಬುಮ್ರಾ-ಪೂಜಾರ ಜೋಡಿ 46 ರನ್’ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಅಲ್ಪ ಮುನ್ನಡೆ ತಂದುಕೊಡಲು ನೆರವಾದರು. ಇದು ಟೀಂ ಇಂಡಿಯಾ ಪರ ಮೂಡಿಬಂದ ಎರಡನೇ ಅತ್ಯತ್ತಮ ಜತೆಯಾಟವಾಗಿದೆ.
ಮೊಯಿನ್ ಅಲಿಗೆ 5 ವಿಕೆಟ್: ಒಂದು ಹಂತದಲ್ಲಿ ಟೀಂ ಇಂಡಿಯಾ 4 ವಿಕೆಟ್ ಕಳೆದುಕೊಂಡು 180 ರನ್’ಗಳಿಸಿ ಮುನ್ನುಗ್ಗುತ್ತಿತ್ತು. ಈ ವೇಳೆ ದಾಳಿಗಿಳಿದ ಮೊಯಿನ್ ಅಲಿ ಟೀಂ ಇಂಡಿಯಾ ಬ್ಯಾಟ್ಸ್’ಮನ್’ಗಳನ್ನು ತಬ್ಬಿಬ್ಬುಗೊಳಿಸಿದರು. ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು. ರಿಶಭ್ ಪಂತ್, ಹಾರ್ದಿಕ್ ಪಾಂಡ್ಯ, ಅಶ್ವಿನ್, ಶಮಿ, ಇಶಾಂತ್ ವಿಕೆಟ್ ಪಡೆದು ಮಿಂಚಿದರು.
ಸಂಕ್ಷಿಪ್ತ ಸ್ಕೋರ್:
ಇಂಗ್ಲೆಂಡ್: 246/10
ಭಾರತ: 273/10
ಪೂಜಾರ: 132*
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.