ದ್ವಿಪಕ್ಷೀಯ ಸರಣಿ ವಿವಾದ-ಪಾಕಿಸ್ತಾನ ವಿರುದ್ಧ ಬಿಸಿಸಿಐಗೆ ಗೆಲುವು!

By Web DeskFirst Published Nov 21, 2018, 10:09 AM IST
Highlights

ದ್ವಿಪಕ್ಷೀಯ ಸರಣಿ ಆಯೋಜಿಸದ ಬಿಸಿಸಿಐ ವಿರುದ್ದ ಐಸಿಸಿ ಮೆಟ್ಟಿಲೇರಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಮತ್ತೆ ಹಿನ್ನಡೆಯಾಗಿದೆ. ಬರೋಬ್ಬರಿ 447 ಕೋಟಿ ರೂಪಾಯಿ ನಷ್ಟ  ಪರಿಹಾರ ನೀಡಬೇಕೆಂದ ಪಾಕ್ ಕ್ರಿಕೆಟ್ ಮಂಡಳಿ ಅರ್ಜಿ ಇದೀಗ ತಿರಸ್ಕೃತಗೊಂಡಿದೆ.

ದುಬೈ(ನ.21): ಭಾರತ ದ್ವಿಪಕ್ಷೀಯ ಕ್ರಿಕೆಟ್‌ ಸರಣಿಯ ಒಪ್ಪಂದವನ್ನು ಮುರಿದಿದೆ. ಇದರಿಂದಾಗಿ ನಮಗೆ ನಷ್ಟವಾಗಿದ್ದು, .447 ಕೋಟಿ ಪರಿಹಾರ ನೀಡಬೇಕು ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) ಸಲ್ಲಿಸಿದ್ದ ಅರ್ಜಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ)ಯ ವಿವಾದಗಳ ಸಮಿತಿ ತಿರಸ್ಕರಿಸಿದೆ. ದ್ವಿಪಕ್ಷೀಯ ಪ್ರಕರಣದಲ್ಲಿ ಗೆಲುವು ಸಾಧಿಸಿರುವ ಬಿಸಿಸಿಐ, ನಿರಾಳವಾದಂತಾಗಿದೆ. ಅಲ್ಲದೆ ಬಿಸಿಸಿಐ, ದ್ವಿಪಕ್ಷೀಯ ಪ್ರಕರಣಕ್ಕಾಗಿ ಖರ್ಚು ಮಾಡಿರುವ ವೆಚ್ಚವನ್ನು ಪಡೆಯುವುದಕ್ಕಾಗಿ ಪಿಸಿಬಿ ವಿರುದ್ಧ ಪ್ರಕರಣ ದಾಖಲಿಸುವುದಾಗಿ ತಿಳಿದುಬಂದಿದೆ.

‘ಬಿಸಿಸಿಐ ವಿರುದ್ಧ ಸಲ್ಲಿಸಿದ್ದ ಪಿಸಿಬಿ ದೂರನ್ನು ಐಸಿಸಿ ವಿವಾದಗಳ ಸಮಿತಿ ವಜಾಗೊಳಿಸಿದೆ. ಈ ಸಂಬಂಧ ತೀರ್ಪು ಪ್ರಕಟಿಸಲಾಗಿದ್ದು, ಮರು ಅರ್ಜಿಗೆ ಅವಕಾಶವಿಲ್ಲ’ ಎಂದು ಐಸಿಸಿ ತನ್ನ ಟ್ವೀಟರ್‌ ಖಾತೆಯಲ್ಲಿ ತಿಳಿಸಿದೆ. ಭಾರತ, 2015ರಿಂದ 2023ರ ನಡುವೆ 6 ದ್ವಿಪಕ್ಷೀಯ ಸರಣಿಗಳ ಆಡಬೇಕಿತ್ತು. ಆದರೆ ಒಪ್ಪಂದದಂತೆ ನಡೆದುಕೊಂಡಿಲ್ಲ. ಇದರಿಂದಾಗಿ ನಮಗೆ ನಷ್ಟವಾಗಿದ್ದು ಎಂದು ಪಿಸಿಬಿ ವಾದಿಸಿತ್ತು.

ಬಿಸಿಸಿಐ ವಾದವೇನು?: ಪರಿಹಾರ ಕೋರಿ ಪಿಸಿಬಿ ಸಲ್ಲಿಸಿರುವ ಅರ್ಜಿ ಸರಿಯಲ್ಲ ಎಂದು ಮೊದಲಿನಿಂದಲೂ ಹೇಳುತ್ತಿದ್ದ ಬಿಸಿಸಿಐ, ಐಸಿಸಿ ಮುಂದೆ ನಡೆದ 3 ದಿನಗಳ ವಿಚಾರಣೆ ವೇಳೆ ತನ್ನ ವಾದ ಮಂಡಿಸಿತು. ‘ಐಸಿಸಿ ಹಣಕಾಸು ಹಂಚಿಕೆ ವಿಚಾರದಲ್ಲಿ ಪಿಸಿಬಿ ನಮಗೆ ಬೆಂಬಲ ಸೂಚಿಸುವುದಾಗಿ ಭರವಸೆ ನೀಡಿತ್ತು. ಆ ಆಧಾರದ ಮೇಲೆ ದ್ವಿಪಕ್ಷೀಯ ಸರಣಿ ಒಪ್ಪಂದವಾಗಿತ್ತು. ಆದರೆ ನಮ್ಮ ವಿರುದ್ಧ ಮತ ಚಲಾಯಿಸಿತು. ಅದಲ್ಲದೇ ನಮ್ಮ ಸರ್ಕಾರ ಅನುಮತಿ ನೀಡಿದರೆ ಮಾತ್ರ ಸರಣಿ ಆಡುವುದಾಗಿ ನಾವು ತಿಳಿಸಿದ್ದೆವು. ಸರ್ಕಾರ ಅನುಮತಿ ನಿರಕಾರಿಸಿದ ಕಾರಣ, ಸರಣಿಯಲ್ಲಿ ಪಾಲ್ಗೊಂಡಿಲ್ಲ’ ಎಂದು ಬಿಸಿಸಿಐ ತಿಳಿಸಿತು. ಬಿಸಿಸಿಐ ವಾದ ಸರಿ ಎಂದು ಪರಿಗಣಿಸಿದ ಐಸಿಸಿ, ಪಿಸಿಬಿ ಮನವಿಯನ್ನು ತಿರಸ್ಕರಿಸಿತು.

click me!