ಕೊಹ್ಲಿ, ಸ್ಮಿತ್ ನೋಡಿ ಬ್ಯಾಟಿಂಗ್ ಕಲಿತ ಸ್ಮಿತ್..! ಕೊಹ್ಲಿಯಿಂದ ಕಲಿತಿದ್ದೇನು ಗೊತ್ತಾ..?

By Suvarna Web DeskFirst Published Feb 23, 2018, 8:20 AM IST
Highlights

ಸಮಕಾಲೀನ ಆಟಗಾರರಾದ ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್ ಹಾಗೂ ಎಬಿ ಡಿವಿಲಿಯರ್ಸ್‌ ನೋಡಿ ಕೆಲ ವಿಭಿನ್ನ ಶಾಟ್'ಗಳನ್ನು ನಕಲು ಮಾಡಿರುವುದಾಗಿ ಸ್ಮಿತ್ ಹೇಳಿಕೊಂಡಿದ್ದಾರೆ. ‘ವಿಶ್ವದ ಕೆಲ ಶ್ರೇಷ್ಠ ಆಟಗಾರರನ್ನು ನೋಡಿ ಅವರಂತೆಯೇ ಬ್ಯಾಟ್ ಮಾಡಲು ಪ್ರಯತ್ನಿಸುತ್ತೇನೆ.

ಮೆಲ್ಬರ್ನ್(ಫೆ.23): ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಸ್ಟೀವ್ ಸ್ಮಿತ್ ವಿಭಿನ್ನ ಬ್ಯಾಟಿಂಗ್ ಶೈಲಿಯಿಂದಲೇ ಹೆಸರುವಾಸಿಯಾಗಿರುವ ಆಟಗಾರ. ಅವರ ಬತ್ತಳಿಕೆಯಲ್ಲಿ ಎಲ್ಲಾ ರೀತಿಯ ಶಾಟ್ ಗಳೂ ಇವೆ. ಆದರೆ ಒಂದೊಂದು ಶಾಟ್ ಒಬ್ಬೊಬ್ಬ ಶ್ರೇಷ್ಠ ಬ್ಯಾಟ್ಸ್‌'ಮನ್ ನೋಡಿ ಕಲಿತಿದ್ದು ಎನ್ನುವ ಕುತೂಹಲಕಾರಿ ವಿಷಯವನ್ನು ಸ್ಮಿತ್ ಬಿಚ್ಚಿಟ್ಟಿದ್ದಾರೆ.

ಸಮಕಾಲೀನ ಆಟಗಾರರಾದ ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್ ಹಾಗೂ ಎಬಿ ಡಿವಿಲಿಯರ್ಸ್‌ ನೋಡಿ ಕೆಲ ವಿಭಿನ್ನ ಶಾಟ್'ಗಳನ್ನು ನಕಲು ಮಾಡಿರುವುದಾಗಿ ಸ್ಮಿತ್ ಹೇಳಿಕೊಂಡಿದ್ದಾರೆ. ‘ವಿಶ್ವದ ಕೆಲ ಶ್ರೇಷ್ಠ ಆಟಗಾರರನ್ನು ನೋಡಿ ಅವರಂತೆಯೇ ಬ್ಯಾಟ್ ಮಾಡಲು ಪ್ರಯತ್ನಿಸುತ್ತೇನೆ. ಅವರ ಆಟ ನೋಡಿ ಸಾಕಷ್ಟು ಕಲಿತಿದ್ದೇನೆ. ಅವರೆಲ್ಲಾ ಶ್ರೇಷ್ಠ ಆಟಗಾರರೆಂದು ಕರೆಸಿಕೊಳ್ಳಲು ಕಾರಣಗಳಿವೆ’ ಎಂದು ಸ್ಟೀವ್ ಸ್ಮಿತ್ ಹೇಳಿದ್ದಾರೆ. ಒಬ್ಬ ಬೌಲರ್ ಆಗಿ ಅಂ.ರಾ.ಕ್ರಿಕೆಟ್‌'ಗೆ ಕಾಲಿಟ್ಟು, ವಿಶ್ವದ ನಂ.1 ಬ್ಯಾಟ್ಸ್‌ಮನ್ ಆಗಿ ರೂಪುಗೊಂಡಿರುವ ಸ್ಮಿತ್ ತಾವು ಬೇರೆ ಆಟಗಾರರನ್ನು ನೋಡಿ ಕಲಿತಿದ್ದಾಗಿ ಪ್ರಾಮಾಣಿಕ ಉತ್ತರ ನೀಡಿರುವುದಕ್ಕೆ ಸಾಮಾಜಿಕ ತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಕೊಹ್ಲಿಯಿಂದ ಕಲಿತಿದ್ದೇನು?

ಕಳೆದ ವರ್ಷ ಭಾರತ ಪ್ರವಾಸದ ವೇಳೆ ಕೊಹ್ಲಿ ಆಟವನ್ನು ಸೂಕ್ಷ್ಮವಾಗಿ ಗಮನಿಸಿದೆ. ಹಾಕಿಯಲ್ಲಿ ‘ಪೆನಾಲ್ಟಿ ಕಾರ್ನರ್’ ಬಾರಿಸುವ ರೀತಿಯಲ್ಲಿ ಕೊಹ್ಲಿ ಒಮ್ಮೊಮ್ಮೆ ಕವರ್ ಡ್ರೈವ್ ಮಾಡುತ್ತಾರೆ. ಅದನ್ನು ಅವರಿಂದ ನೋಡಿ ಕಲಿತೆ ಎಂದು ಸ್ಮಿತ್ ಹೇಳಿದ್ದಾರೆ.

ಎಬಿಡಿಯಿಂದ ಕಲಿತಿದ್ದೇನು?

ವಿಲಿಯರ್ಸ್‌ ತಮ್ಮ ದೇಹದ ನೇರಕ್ಕೆ ಬರುವ ಚೆಂಡನ್ನು ಆಫ್‌'ಸ್ಟಂಪ್ ಆಚೆ ತೆರಳಿ ಹುಕ್ ಮಾಡುತ್ತಾರೆ. ಈ ಶಾಟ್ ಆಡುವಾಗ ದೇಹದ ತೂಕ ಕಾಲುಗಳ ಮೇಲೆ ಹೆಚ್ಚಾಗಿ ಬೀಳುತ್ತದೆ. ಸಮತೋಲನ ಕಾಯ್ದುಕೊಳ್ಳುವುದು ಕಷ್ಟ. ಎಬಿಡಿ ಸುಲಭವಾಗಿ ನಿಭಾಯಿಸುತ್ತಾರೆ. ಬಹಳ ಕಷ್ಟಪಟ್ಟು ಅವರಂತೆ ಹುಕ್ ಮಾಡುವುದನ್ನು ಕಲಿತೆ ಎಂದು ಸ್ಮಿತ್ ಹೇಳಿದ್ದಾರೆ.

ವಿಲಿಯಮ್ಸನ್‌ರಿಂದ ಕಲಿತಿದ್ದೇನು?

ಆಫ್‌ಸ್ಟಂಪ್‌ನಿಂದ ಆಚೆ ಬೀಳುವ ಚೆಂಡನ್ನು ವಿಕೆಟ್‌'ನಿಂದ ಹಿಂದೆ, ಲೇಟ್ ಕಟ್ ಮೂಲಕ ಬೌಂಡರಿಗಟ್ಟುವ ಕಲೆ ಕೇನ್ ವಿಲಿಯಮ್ಸನ್‌'ಗೆ ಕರಗತವಾಗಿದೆ. ನ್ಯೂಜಿಲೆಂಡ್ ತಂಡ ಆಸ್ಟ್ರೇಲಿಯಾಗೆ ಬಂದಿದ್ದಾಗ ಅವರ ಬ್ಯಾಟಿಂಗ್ ಗಮನಿಸಿ, ಸತತ ಅಭ್ಯಾಸದೊಂದಿಗೆ ಆ ಶಾಟ್ ಕಲಿತೆ ಎಂದು ಸ್ಮಿತ್ ಬಹಿರಂಗಗೊಳಿಸಿದ್ದಾರೆ.

click me!