ಆಫ್ರಿಕಾದಲ್ಲಿ ಇತಿಹಾಸ ಬರೆಯುವ ತವಕದಲ್ಲಿ ಕೊಹ್ಲಿ ಪಡೆ

By Suvarna Web DeskFirst Published Dec 28, 2017, 3:51 PM IST
Highlights

‘ವಿದೇಶದಲ್ಲಿ ಗೆಲ್ಲಲು ದೀರ್ಘ ಕಾಲ ಕ್ರಿಕೆಟ್ ಆಡಿದ ಅನುಭವವಿರಬೇಕು. ಈ ಬಾರಿ ತಂಡಕ್ಕೆ ಗೆಲುವಿನ ಹಸಿವಿದೆ. ಕಳೆದ ಬಾರಿ ಸಾಧ್ಯವಾಗದ್ದನ್ನು ಈ ಬಾರಿ ಸಾಧಿಸುವ ಛಲ ನಮ್ಮಲ್ಲಿದೆ’ ಎಂದು ಕೊಹ್ಲಿ ಹೇಳಿದರು.

ಮುಂಬೈ(ಡಿ.28): ಕಳೆದ 15 ತಿಂಗಳಲ್ಲಿ ಹೆಚ್ಚು ತವರಿನ ಸರಣಿಗಳನ್ನೇ ಆಡಿ ಭಾರೀ ಯಶಸ್ಸು ಸಾಧಿಸಿದ್ದ ಭಾರತ ತಂಡ 2018ರ ಆರಂಭದಲ್ಲೇ ಕಠಿಣ ಸವಾಲು ಎದುರಿಸಲಿದೆ. ಇಂದು ವಿರಾಟ್ ಕೊಹ್ಲಿ ಪಡೆ ದಕ್ಷಿಣ ಆಫ್ರಿಕಾಕ್ಕೆ ತೆರಳಲಿದ್ದು, ತಂಡದ ಮೇಲೆ ಭಾರೀ ನಿರೀಕ್ಷೆ ಇಡಲಾಗಿದೆ. ಆಫ್ರಿಕಾಕ್ಕೆ ವಿಮಾನ ಹತ್ತುವ ಮುನ್ನ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಕೊಹ್ಲಿ ಹಾಗೂ ಕೋಚ್ ರವಿ ಶಾಸ್ತ್ರಿ, ಪ್ರವಾಸದಲ್ಲಿ ಇತಿಹಾಸ ಬರೆಯುವ ವಿಶ್ವಾಸ ವ್ಯಕ್ತಪಡಿಸಿದರು.

‘ವಿದೇಶದಲ್ಲಿ ಗೆಲ್ಲಲು ದೀರ್ಘ ಕಾಲ ಕ್ರಿಕೆಟ್ ಆಡಿದ ಅನುಭವವಿರಬೇಕು. ಈ ಬಾರಿ ತಂಡಕ್ಕೆ ಗೆಲುವಿನ ಹಸಿವಿದೆ. ಕಳೆದ ಬಾರಿ ಸಾಧ್ಯವಾಗದ್ದನ್ನು ಈ ಬಾರಿ ಸಾಧಿಸುವ ಛಲ ನಮ್ಮಲ್ಲಿದೆ’ ಎಂದು ಕೊಹ್ಲಿ ಹೇಳಿದರು. ‘ಕ್ರಿಕೆಟ್ ಆಡುವುದು ಬ್ಯಾಟ್, ಬಾಲ್‌'ನಿಂದ. ವಾತಾವರಣದ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ನಮಗಿಲ್ಲ. ತಂಡದ ಸಾಮರ್ಥ್ಯದ ಬಗ್ಗೆ ಸ್ವಲ್ಪವೂ ಅನುಮಾನವಿಲ್ಲ. ನಾವು ಸರಿಯಾದ ದಾರಿಯಲ್ಲಿ ಸಾಗುತ್ತಿದ್ದೇವೆ’ ಎಂದು ಕೊಹ್ಲಿ ಭರವಸೆ ವ್ಯಕ್ತಪಡಿಸಿದರು

Latest Videos

ಭಾರತ ತಂಡದ ನಾಯಕ ತಮ್ಮ ತಂಡದ ಬೌಲಿಂಗ್ ಪಡೆಯ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು. ಸವಾಲಿನ ವಾತಾವರಣದಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ ಎಂದರು. ‘ಒಂದು ತಂಡವಾಗಿ ನಮ್ಮ ಆತ್ಮವಿಶ್ವಾಸ ವೃದ್ಧಿಸಿದೆ. ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲು ನಾವು ಸಿದ್ಧರಿದ್ದೇವೆ. ದೇಶಕ್ಕಾಗಿ ಆಡುವುದು ಬಹು ಮುಖ್ಯ. ಕಠಿಣ ಸವಾಲುಗಳನ್ನು ಮೆಟ್ಟಿನಿಂತಾಗ ಸಿಗುವ ತೃಪ್ತಿಯೇ ಬೇರೆ’ ಎಂದು ಕೊಹ್ಲಿ ಹೇಳಿದರು.

ಇದೇ ವೇಳೆ ಕೋಚ್ ಶಾಸ್ತ್ರಿ ‘3 ವರ್ಷಗಳ ಹಿಂದೆ ನಾವು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದೆವು. ಇಂಗ್ಲೆಂಡ್‌ನಲ್ಲೂ ತಂಡ ಉತ್ತಮ ಪ್ರದರ್ಶನ ತೋರಿತು. ಈ ಸರಣಿಗಾಗಿ ಉತ್ತಮ ತಯಾರಿ ನಡೆಸಿದ್ದೇವೆ. ಸವಾಲಿಗೆ ತಂಡ ಹೆದರುವುದಿಲ್ಲ’ ಎಂದರು.

click me!