ನಾಯಕ ಸುನಿಲ್ ಚೆಟ್ರಿ ಸಿಡಿಸಿದ ಹ್ಯಾಟ್ರಿಕ್ ಗೋಲಿನ ನೆರವಿನಿಂದ ಭಾರತ ಇಂಟರ್‌ಕಾಂಟಿನೆಂಟಲ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಚೈನೀಸ್ ತೈಪೆ ತಂಡವನ್ನ ಮಣಿಸಿ ಗೆಲುವಿನ ಅಭಿಯಾನ ಆರಂಭಿಸಿದೆ.
ಮುಂಬೈ(ಜೂನ್.2) ಇಂಟರ್‌ಕಾಂಟಿನೆಂಟರ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಸುನಿಲ್ ಚೆಟ್ರಿ ನಾಯಕತ್ವದ ಭಾರತ ತಂಡ ಶುಭಾರಂಭ ಮಾಡಿದೆ. ಮುಂಬೈನ ಫುಟ್ಬಾಲ್ ಅರೇನಾ ಕ್ರೀಡಾಂಗಣದಲ್ಲಿ ಚೈನೀಸ್ ತೈಪೆ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಭಾರತ 5-0 ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಪಂದ್ಯ ಆರಂಭಗೊಂಡ 14ನೇ ನಿಮಿಷದಲ್ಲಿ ನಾಯಕ ಸುನಿಲ್ ಚೆಟ್ರಿ ಗೋಲು ಬಾರಿಸೋ ಮೂಲಕ ಖಾತೆ ಆರಂಭಿಸಿದರು. ಇದಕ್ಕೆ ಪ್ರತಿಯಾಗಿ ಚೈನೀಸ್ ತೈಪೆ ಆಕ್ರಮಣಕಾರಿ ಹೋರಾಟ ನೀಡಿದರೂ ಭಾರತೀಯ ಡಿಫೆಂಡರ್‌ಗಳನ್ನ ಭೇದಿಸಲು ಸಾಧ್ಯವಾಗಲಿಲ್ಲ.
ಮೊದಲ ಗೋಲು ಸಿಡಿಸಿ ಭಾರತಕ್ಕೆ ಯಶಸ್ಸು ತಂದುಕೊಟ್ಟ ಚೆಟ್ರಿ, 34ನೇ ನಿಮಿಷದಲ್ಲಿ 2ನೇ ಗೋಲು ಸಿಡಿಸಿದರು. ಇನ್ನು ಭಾರತದ ಸ್ಪೀಡ್ ಸ್ಟಾರ್ ಉದಾಂತ್ ಸಿಂಗ್ 48ನೇ ನಿಮಿಷದಲ್ಲಿ ಗೋಲು ಬಾರಿಸಿದರು. 3-0 ಗೋಲುಗಳ ಅಂತರದಿಂದ ಮುನ್ನಡೆ ಪಡೆದುಕೊಂಡ ಭಾರತಕ್ಕೆ 62ನೇ ನಿಮಿಷದಲ್ಲಿ ಸುನಿಲ್ ಚೆಟ್ರಿ ಗೋಲುು ಬಾರಿಸಿ ಮುನ್ನಡೆ ತಂದುಕೊಟ್ಟರು. ಈ ಮೂಲಕ ಚೆಟ್ರಿ ಇಂಟರ್‌ಕಾಂಟಿನೆಂಟಲ್ ಕಪ್ ಟೂರ್ನಿಯ ಮೊದಲ ಪಂದ್ಯದಲ್ಲೇ ಹ್ಯಾಟ್ರಿಕ್ ಗೋಲು ಸಿಡಿಸಿದ ಸಾಧನೆ ಮಾಡಿದರು. ಇನ್ನು78ನೇ ನಿಮಿಷದಲ್ಲಿ ಪ್ರೀತಮ್ ಕೊಟಲ್ ಗೋಲು ಸಿಡಿಸಿ ಭಾರತಕ್ಕೆ 5-0 ಮುನ್ನಡೆ ತಂದುಕೊಟ್ಟರು. ಚೈನೀಸ್ ತೈಪೆ ವಿರುದ್ಧ ಭರ್ಜರಿ ಗೆಲುವು ದಾಖಲಿಸಿರುವ ಭಾರತ ಜೂನ್ 4 ರಂದು ಕೀನ್ಯಾ ವಿರುದ್ಧ ಹೋರಾಟ ನಡೆಸಲಿದೆ.