ದಾಖಲೆಯ 23ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ತಮ್ಮದಾಗಿಸಿಕೊಂಡ ಸರ್ಬಿಯಾದ ನೋವಾಕ್ ಜೋಕೋವಿಚ್
ಎಟಿಪಿ ವಿಶ್ವ ರ್ಯಾಂಕಿಂಗ್ನಲ್ಲಿ ಮತ್ತೆ ನಂ.1 ಸ್ಥಾನಕ್ಕೇರಿದ ಜೋಕೋವಿಚ್
ಸತತ 2ನೇ ಬಾರಿ ಚಾಂಪಿಯನ್ ಎನಿಸಿಕೊಂಡ ಇಗಾ ಸ್ವಿಯಾಟೆಕ್ ನಿರೀಕ್ಷೆಯಂತೆಯೇ ಅಗ್ರಸ್ಥಾನ
ಪ್ಯಾರಿಸ್(ಜೂ.13): ಫ್ರೆಂಚ್ ಓಪನ್ ಗೆಲುವಿನೊಂದಿಗೆ ದಾಖಲೆಯ 23ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ತಮ್ಮದಾಗಿಸಿಕೊಂಡ ಸರ್ಬಿಯಾದ ನೋವಾಕ್ ಜೋಕೋವಿಚ್ ಎಟಿಪಿ ವಿಶ್ವ ರ್ಯಾಂಕಿಂಗ್ನಲ್ಲಿ ಮತ್ತೆ ನಂ.1 ಸ್ಥಾನಕ್ಕೇರಿದ್ದಾರೆ. ಅಗ್ರಸ್ಥಾನದಲ್ಲಿದ್ದ ಸ್ಪೇನ್‌ನ ಕಾರ್ಲೋಸ್ ಆಲ್ಕರಜ್ 2ನೇ, ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ 3ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಕಳೆದ ಜನವರಿಯಿಂದಲೂ ಸ್ಪರ್ಧಾತ್ಮಕ ಟೆನಿಸ್ನಿಂದ ದೂರವಿರುವ 22 ಗ್ರ್ಯಾನ್ಸ್ಲಾಂಗಳ ಒಡೆಯ, ಸ್ಪೇನ್‌ನ ರಾಫೆಲ್ ನಡಾಲ್ 136ನೇ ಸ್ಥಾನಕ್ಕೆ ಕುಸಿದಿದ್ದಾರೆ. ಮಹಿಳಾ ಸಿಂಗಲ್ಸ್ನಲ್ಲಿ ಸತತ 2ನೇ ಬಾರಿ ಚಾಂಪಿಯನ್ ಎನಿಸಿಕೊಂಡ ಇಗಾ ಸ್ವಿಯಾಟೆಕ್ ನಿರೀಕ್ಷೆಯಂತೆಯೇ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ರನ್ನರ್-ಅಪ್ ಕ್ಯಾರೊಲಿನಾ ಮುಕೋವಾ 43ರಿಂದ 16ನೇ ಸ್ಥಾನಕ್ಕೆ ಜಿಗಿದಿದ್ದಾರೆ.
undefined
ಫುಟ್ಬಾಲ್: ಕರ್ನಾಟಕಕ್ಕೆ ಐಶ್ವರ್ಯಾ ನಾಯಕಿ
ಬೆಂಗಳೂರು: ಪಂಜಾಬ್ನಲ್ಲಿ ನಡೆಯಲಿರುವ 27ನೇ ರಾಷ್ಟ್ರೀಯ ಹಿರಿಯ ಮಹಿಳೆಯರ ಫುಟ್ಬಾಲ್ ಚಾಂಪಿಯನ್ಶಿಪ್ನ ಫೈನಲ್ ಹಂತದಲ್ಲಿ ಪಾಲ್ಗೊಳ್ಳಲಿರುವ 22 ಮಂದಿಯ ಕರ್ನಾಟಕ ತಂಡ ಪ್ರಕಟಗೊಂಡಿದ್ದು, ಎ. ಐಶ್ವರ್ಯಾ ನಾಯಕಿಯಾಗಿ ನೇಮಕಗೊಂಡಿದ್ದಾರೆ. ಕರ್ನಾಟಕ ತನ್ನ ಮೊದಲ ಪಂದ್ಯವನ್ನು ಜೂ.14ಕ್ಕೆ ತಮಿಳುನಾಡು, ಬಳಿಕ ಜೂ.16ಕ್ಕೆ ಪಂಜಾಬ್, ಜೂ.18ಕ್ಕೆ ಚಂಢೀಗಡ, ಜೂ.20ಕ್ಕೆ ಒಡಿಶಾ ಹಾಗೂ ಕೊನೆ ಪಂದ್ಯದಲ್ಲಿ ಜೂ.22ರಂದು ಜಾರ್ಖಂಡ್ ವಿರುದ್ಧ ಸೆಣಸಲಿದೆ. ಫೈನಲ್ ಹಂತದಲ್ಲಿ 12 ತಂಡಗಳು ಸ್ಪರ್ಧಿಸಲಿದ್ದು, ತಲಾ 6 ತಂಡಗಳ 2 ಗುಂಪು ರಚಿಸಲಾಗಿದೆ. ಗುಂಪಿನಲ್ಲಿ ಅಗ್ರ 2 ಸ್ಥಾನ ಪಡೆವ ತಂಡಗಳು ಸೆಮೀಸ್‌ಗೇರಲಿವೆ.
ಇಂಡೋನೇಷ್ಯಾ ಓಪನ್ ಬ್ಯಾಡ್ಮಿಂಟನ್ ಇಂದಿನಿಂದ
ಜಕಾರ್ತ: ಇತ್ತೀಚೆಗಷ್ಟೇ ಮಲೇಷ್ಯಾ ಮಾಸ್ಟರ್ಸ್ ಪ್ರಶಸ್ತಿ ಗೆದ್ದಿದ್ದ ಎಚ್.ಎಸ್.ಪ್ರಣಯ್ ಸೇರಿದಂತೆ ಭಾರತದ ತಾರಾ ಶಟ್ಲರ್ಗಳು ಮಂಗಳವಾರದಿಂದ ಇಂಡೋನೇಷ್ಯಾ ಓಪನ್ ಸೂಪರ್ 1000 ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದು, ಸುಧಾರಿತ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದ್ದಾರೆ. ಭಾರತೀಯರು ಈ ಋುತುವಿನಲ್ಲಿ ಹೇಳಿಕೊಳ್ಳುವಂತಹ ಆಟ ಪ್ರದರ್ಶಿಸಿಲ್ಲ. ಹೀಗಾಗಿ ಈ ಟೂರ್ನಿಯಲ್ಲಾದರೂ ಪದಕ ಬರ ನೀಗಿಸುವ ಒತ್ತಡದಲ್ಲಿದ್ದಾರೆ.
ಭಾರತೀಯ ಕುಸ್ತಿ ಸಂಸ್ಥೆ ಚುನಾವಣೆಗೆ ಡೇಟ್ ಫಿಕ್ಸ್..!
ಮಹಿಳಾ ಸಿಂಗಲ್ಸ್ನಲ್ಲಿ ಪಿ.ವಿ.ಸಿಂಧು, ಆಕರ್ಷಿ ಕಶ್ಯಪ್ ಆಡಲಿದ್ದು, ಟೂರ್ನಿಯ 3 ಬಾರಿ ಚಾಂಪಿಯನ್ ಸೈನಾ ನೆಹ್ವಾಲ್ ಗೈರಾಗಲಿದ್ದಾರೆ. ಪುರುಷರ ಸಿಂಗಲ್ಸ್ನಲ್ಲಿ 2017ರ ಚಾಂಪಿಯನ್ ಕಿದಂಬಿ ಶ್ರೀಕಾಂತ್, ಲಕ್ಷ್ಯ ಸೇನ್, ಪ್ರಿಯಾನ್ಶು ರಾಜಾವತ್ ಕೂಡಾ ಸ್ಪರ್ಧಿಸಲಿದ್ದಾರೆ. ತಾರಾ ಪುರುಷ ಡಬಲ್ಸ್ ಜೋಡಿ ಸಾತ್ವಿಕ್-ಚಿರಾಗ್ ಶೆಟ್ಟಿ, ಮಹಿಳಾ ಡಬಲ್ಸ್ ಜೋಡಿ ತ್ರೀಸಾ-ಗಾಯತ್ರಿ ನಿರೀಕ್ಷೆ ಉಳಿಸಿಕೊಳ್ಳಬೇಕಿದೆ.
ಪ್ರೊ ಲೀಗ್ ಹಾಕಿ: ಭಾರತಕ್ಕೆ 2-1 ಜಯ
ಐಂಡ್ಹೊವೆನ್(ನೆದರ್ಲೆಂಡ್್ಸ): 2022-23ರ ಪ್ರೊ ಲೀಗ್ ಹಾಕಿ ಟೂರ್ನಿಯನ್ನು ಭಾರತ ಗೆಲುವಿನೊಂದಿಗೆ ಮುಕ್ತಾಯಗೊಳಿಸಿದೆ. ಭಾನುವಾರ ಅರ್ಜೆಂಟೀನಾ ವಿರುದ್ಧ 2-1 ಗೋಲುಗಳಲ್ಲಿ ಗೆದ್ದ ಭಾರತ, ಅಂಕಪಟ್ಟಿಯಲ್ಲಿ 16 ಪಂದ್ಯಗಳಲ್ಲಿ 30 ಅಂಕಗಳೊಂದಿಗೆ ಅಗ್ರಸ್ಥಾನ ಭದ್ರಪಡಿಸಿಕೊಂಡಿತು. ಲೀಗ್ ಹಂತದ ಪಂದ್ಯಗಳು ಮುಕ್ತಾಯದ ವೇಳೆಗೆ ಅಗ್ರಸ್ಥಾನದಲ್ಲಿರುವ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗುತ್ತದೆ.
ಸದ್ಯ ಬ್ರಿಟನ್ 12 ಪಂದ್ಯಗಳಲ್ಲಿ 26 ಅಂಕ ಪಡೆದು 2ನೇ ಸ್ಥಾನದಲ್ಲಿದ್ದು, ಇನ್ನೂ 4 ಪಂದ್ಯ ಆಡಬೇಕಿದೆ. ಆಸ್ಪ್ರೇಲಿಯಾ 13 ಪಂದ್ಯಗಳಲ್ಲಿ 19 ಅಂಕ, ಸ್ಪೇನ್ 8 ಪಂದ್ಯಗಳಲ್ಲಿ 17 ಅಂಕದೊಂದಿಗೆ ಕ್ರಮವಾಗಿ 3, 4ನೇ ಸ್ಥಾನಗಳಲ್ಲಿವೆ. ಕಳೆದ ಆವೃತ್ತಿಯಲ್ಲಿ ನೆದರ್ಲೆಂಡ್್ಸ ಚಾಂಪಿಯನ್, ಬೆಲ್ಜಿಯಂ ದ್ವಿತೀಯ, ಭಾರತ 3ನೇ ಸ್ಥಾನಿಯಾಗಿತ್ತು.
ರಾಷ್ಟ್ರೀಯ ಕಿರಿಯರ ಹಾಕಿ: ರಾಜ್ಯ ತಂಡ ಶುಭಾರಂಭ
ರೂರ್ಕೆಲಾ: 13ನೇ ಆವೃತ್ತಿಯ ರಾಷ್ಟ್ರೀಯ ಕಿರಿಯ ಪುರುಷರ ಹಾಕಿ ಟೂರ್ನಿಗೆ ಸೋಮವಾರ ಚಾಲನೆ ದೊರೆತಿದ್ದು, ‘ಇ’ ಗುಂಪಿನಲ್ಲಿರುವ ಕರ್ನಾಟಕಕ್ಕೆ ಜಯದ ಆರಂಭ ದೊರೆತಿದೆ. ರಾಜ್ಯ ತಂಡದ ವಿರುದ್ಧ ಕಣಕ್ಕಿಳಿಯಬೇಕಿದ್ದ ತ್ರಿಪುರಾ ಅಘೋಷಿತ ಕಾರಣಗಳಿಂದಾಗಿ ಪಂದ್ಯವನ್ನು ಬಿಟ್ಟುಕೊಟ್ಟಿತು. ಇದರಿಂದಾಗಿ ಕರ್ನಾಟಕಕ್ಕೆ ಪೂರ್ವನಿಯೋಜಿತ 5-0 ಗೋಲುಗಳ ಜಯ ದೊರೆಯಿತು. ಕರ್ನಾಟಕ ತನ್ನ 2ನೇ ಪಂದ್ಯವನ್ನು ಜೂ.14ರಂದು ರಾಜಸ್ಥಾನ ವಿರುದ್ಧ ಆಡಲಿದೆ.